ಗೋಣಿಕೊಪ್ಪಲು, ಜ. 14 : ಕೊಡಗಿನಲ್ಲಿ ವಿವಿಧ ಸಮಾಜಗಳು ತಮ್ಮದೇ ಸ್ವಂತ ಕಟ್ಟಡ, ಸಮುದಾಯ ಭವನ, ಕಲ್ಯಾಣ ಮಂಟಪ ನಿರ್ಮಾಣದ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರಬೇಕಾದರೆ ರಾಜ್ಯದಲ್ಲಿ ಪ್ರಬಲ ಸಂಘಟನೆಯಾಗಿ ರೂಪುಗೊಂಡಿರುವ ಒಕ್ಕಲಿಗರ ಸಂಘ ಕೊಡಗು ಜಿಲ್ಲೆಯಲ್ಲಿ ಮಾತ್ರ ಕಳಾಹೀನ ಸ್ಥಿತಿಗೆ ತಲುಪಿದೆ. ಇಲ್ಲಿ ಒಗ್ಗಟ್ಟಿನ ಕೊರತೆ, ಸಮುದಾಯದ ಅಭಿವೃದ್ಧಿಗೆ ಸ್ವಯಂ ಪ್ರೇರಿತರಾಗಿ ಸೇವೆ ಸಲ್ಲಿಸು ವವರ ಕೊರತೆ, ವಾರ್ಷಿಕ ಮಹಾಸಭೆಗೂ ಸ್ಪಂದಿಸದ ಸದಸ್ಯರ ನಿರ್ಲಕ್ಷ್ಯದಿಂದಾಗಿ ಕೊಡಗು ಒಕ್ಕಲಿಗರ ಸಂಘದ ನಿವೇಶನ ಖರೀದಿ ಹಾಗೂ ಕಟ್ಟಡ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿದೆ. ಕಳೆದ ವರ್ಷ ನಿವೇಶನ ಖರೀದಿಗೆ ರೂ.1 ಕೋಟಿ ವಂತಿಗೆ ಸಂಗ್ರಹದ ಗುರಿ ಹೊಂದಲಾಗಿದ್ದರೂ ಜಿಲ್ಲೆಯ ಒಕ್ಕಲಿಗ ಸಮುದಾಯದ ನಿರ್ಲಕ್ಷ್ಯದಿಂದಾಗಿ ನಿರ್ದಿಷ್ಟ ಗುರಿ ಸಾಧನೆಯಾಗಲಿಲ್ಲ. ಇದರಿಂದಾಗಿ ಸಮುದಾಯದ ಅಭ್ಯುದಯ ನೆನೆಗುದಿಗೆ ಬಿದ್ದಿದೆ. ಈ ನಿಟ್ಟಿನಲ್ಲಿ 2019-20 ರ ಸಾಲಿನಲ್ಲಿ ಮತ್ತೆ ರೂ.1 ಕೋಟಿ ನಿಧಿ ಸಂಗ್ರಹದ ಗುರಿ ಹೊಂದಲಾಗಿದ್ದು, ಜಿಲ್ಲೆಯಲ್ಲಿ ರುವ 10 ಸಾವಿರ ಒಕ್ಕಲಿಗರ ಕುಟುಂಬದಲ್ಲಿ ಶೇ.50 ರಷ್ಟು ಕುಟುಂಬವಾದರೂ ತಲಾ ರೂ.5 ಸಾವಿರದಂತೆ ವಂತಿಗೆ ನೀಡಿದರೂ ರೂ.2.50 ಕೋಟಿ ಮೊತ್ತ ಸಂಗ್ರಹವಾಗಲಿದೆ. ಈ ನಿಟ್ಟಿನಲ್ಲಿ ಗುರಿಸಾಧನೆಗೆ ಜಿಲ್ಲೆಯ ಎಲ್ಲ ಒಕ್ಕಲಿಗ ಕುಟುಂಬಗಳು ಸಹಕಾರ ನೀಡ ಬೇಕೆಂದು ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡ ಗಣ್ಯರು ಮನವಿ ಮಾಡಿದರು.

ಹಾತೂರು ಪ್ರೌಢಶಾಲಾ ಸಭಾಂಗಣದಲ್ಲಿ ಕೊಡಗು ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಒಕ್ಕಲಿಗರ ಒಗ್ಗಟ್ಟಿನ ಕುರಿತು ಪ್ರಮುಖವಾಗಿ ಚರ್ಚಿಸ ಲಾಯಿತಲ್ಲದೆ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು.

ದತ್ತಿನಿಧಿ ಸ್ಥಾಪನೆ ಅಗತ್ಯ

ಇದೇ ಪ್ರಥಮ ಬಾರಿಗೆ ಕೊಡಗು ಒಕ್ಕಲಿಗರ ಸಂಘದ ಮೂಲಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಚಿತ್ರ ನಿರ್ಮಾ ಪಕ, ನಟ ಕಾರೆಕೊಪ್ಪ ಜೈಜಗದೀಶ್ ಅವರು, ಪ್ರತಿಭೆಗಳಿಗೆ ಕೊಡಗಿನಲ್ಲಿ ಸೂಕ್ತ ಉತ್ತೇಜನದ ಕೊರತೆ ಇದೆ. ಕಳೆದ 43 ವರ್ಷದ ಸಿನೆಮಾರಂಗದ ಸಾಧನೆಯನ್ನು ಇದೀಗ ಗುರುತಿಸಿರುವ ಕೊಡಗು ಒಕ್ಕಲಿಗರ ಸಂಘದ ಗೌರವಕ್ಕೆ ತಾನು ಚಿರಋಣಿ. ಕೊಡಗಿನ ಒಕ್ಕಲಿಗ ಸಮುದಾಯದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕ್ರೀಡಾಪಟುಗಳು, ಸಂಗೀತ ಪ್ರತಿಭೆಗಳು, ವಿದ್ಯಾಕ್ಷೇತ್ರದ ಸಾಧಕರೂ ಇದ್ದಾರೆ. ಇವರನ್ನೆಲ್ಲಾ ಗುರುತಿಸಿ, ಆರ್ಥಿಕವಾಗಿ ಸಹಾಯಹಸ್ತ ನೀಡುವ ಕೆಲಸ ಆಗಬೇಕಾಗಿದೆ. ಕೊಡಗಿನ ಒಕ್ಕಲಿಗರ ಸಂಘವನ್ನು ಶ್ರೀಮಂತ ಸಂಘವನ್ನಾಗಿ ಮಾಡುವದು ಕಷ್ಟವಿಲ್ಲ. ಇಲ್ಲಿನ ಶ್ರೀಮಂತ ಒಕ್ಕಲಿಗರ ನೆರವು ಹಾಗೂ ರಾಜ್ಯ ಒಕ್ಕಲಿಗರ ಮಹಾ ಸಂಘದಿಂದ ಆರ್ಥಿಕ ಕ್ರೋಢೀಕರಣದೊಂದಿಗೆ ಬಡ ಪ್ರತಿಭೆಗಳು, ಸಾಧಕರಿಗೆ ಸಹಾಯಧನ ಕಲ್ಪಿಸಲು ವಿಶೇಷ ದತ್ತಿನಿಧಿ ಸ್ಥಾಪನೆ ಅಗತ್ಯ. ರಾಜ್ಯದಲ್ಲಿ ನಮ್ಮದೇ ಮುಖ್ಯಮಂತ್ರಿ,ವಿಧಾನ ಸೌಧದಲ್ಲಿ ಹಲವರು ನಮ್ಮ ಜನಾಂಗದವರಿದ್ದಾರೆ. ಇವರಿಂದ ಸಹಕಾರ ಹೊಂದಬಹುದು ಎಂದು ಸಲಹೆ ನೀಡಿದರು.

ಒಕ್ಕಲಿಗರ ಮತ ವಿಭಜನೆ

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಒಕ್ಕಲಿಗ ಅಭ್ಯರ್ಥಿಯಾಗಿ ಪ್ರತ್ಯೇಕ ಪಕ್ಷದ ಉಮೇದುವಾರರಾಗಿ ಸ್ಪರ್ಧಿಸಿದ್ದ ತಮ್ಮ ಹಾಗೂ ಜೀವಿಜಯ ನಡುವೆ ಒಕ್ಕಲಿಗ ಮತಗಳು ವಿಭಜನೆಯಾಯಿತು. ಇದರಿಂದಾಗಿ ಒಕ್ಕಲಿಗರ ಸಮುದಾಯಕ್ಕೆ ಸಿಗಬೇಕಾದ ವಿಧಾನ ಸಭಾ ಸ್ಥಾನ ಕೈತಪ್ಪಿ ಹೋಯಿತು. ಮುಂದಿನ ದಿನಗಳಲ್ಲಿ ಒಂದೇ ಕ್ಷೇತ್ರದಲ್ಲಿ ಒಕ್ಕಲಿಗ ಅಭ್ಯರ್ಥಿಗಳು ಸ್ಪರ್ಧಿಸುವ ಸಂದರ್ಭ ಪೂರ್ವ ಯೋಜನೆ ಅಗತ್ಯ ಎಂದು ಮಾಜಿ ಜಿ.ಪಂ. ಅಧ್ಯಕ್ಷೆ ಹಾಗೂ ಹಾಲಿ ಜಿ.ಪಂ.ಸದಸ್ಯೆ ಕೆ.ಪಿ.ಚಂದ್ರಕಲಾ ಪ್ರಸನ್ನ ಅಭಿಪ್ರಾಯಪಟ್ಟರು. ಹಾಸನ, ಬೆಂಗಳೂರು ಇತ್ಯಾದಿ ಕಡೆ ಒಕ್ಕಲಿಗರ ಸಂಘಗಳು ಶ್ರೀಮಂತವಾಗಿವೆ. ಕೊಡಗಿನ ಒಕ್ಕಲಿಗರ ಸಮುದಾಯ ತೀವೃ ಹಿನ್ನೆಡೆಯಲ್ಲಿದ್ದು ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದರು. ಇದೇ ಸಂದರ್ಭ ಸೋಮವಾರಪೇಟೆಯ ಶಿಕ್ಷಣ ತಜ್ಞ ಎ.ಆರ್.ಮುತ್ತಣ್ಣ ಅವರ ಸಮಾಜ ಸೇವೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಗಂಟೆ ಕಟ್ಟುವ ಕೆಲಸ ಆಗಬೇಕು

ಕೊಡಗು ಜಿಲ್ಲೆಯಲ್ಲಿ ಕಡಿಮೆ ಜನಸಂಖ್ಯೆ ಹೊಂದಿರುವ ಜನಾಂಗದ ಸಮಾಜಗಳು ಉತ್ತಮವಾಗಿ ಸಮುದಾಯ ಸಂಘಟನೆ ಮಾಡುತ್ತಿವೆ. ನಮ್ಮದು ಕೃಷಿ ಪ್ರಧಾನ ಒಕ್ಕಲುತನದ ಸಮುದಾಯ. ಆಹಾರ ಬೆಳಿಯುವ, ಪ್ರೀತಿ ಹಾಗೂ ಭ್ರಾತೃತ್ವವನ್ನು ಉಣಬಡಿಸಬೇಕಾದ ಸಮುದಾಯ. ಆದರೆ, ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ನಾವು ಒಂದಾಗಿಲ್ಲ ಎಂದು ಮಾಜಿ ಜಿ.ಪಂ.ಸದಸ್ಯ ಹಾಗೂ ಸಂಘದ ನಿರ್ದೇಶಕ ವಿ.ಪಿ.ಶಶಿಧರ್ ಅಭಿಪ್ರಾಯ ಪಟ್ಟರು. ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ರಾಜ್ಯದ ವಿವಿಧೆಡೆ ನಾವು ಪ್ರಬಲವಾಗಿದ್ದರೂ ಜಿಲ್ಲೆಯಲ್ಲಿ ನಮ್ಮ ಸಮುದಾಯ ಮುನ್ನುಗ್ಗುವ ಪ್ರವೃತ್ತಿಯ ಕೊರತೆ ಹಾಗೂ ಸೋಮಾರಿತನ ದಿಂದಾಗಿ ಹಿಂದುಳಿಯುವಂತಾಗಿದೆ. ಕೊಡಗು ಜಿಲ್ಲೆಯ ಹೋಬಳಿ ಮಟ್ಟದಲ್ಲಿ ಸಂಘಟನೆ ಬಲಗೊಳ್ಳ ಬೇಕು.ಎಲ್ಲ ಒಕ್ಕಲಿಗ ಕುಟುಂಬಗಳು ಸದಸ್ಯತನ ನೋಂದಾವಣೆ ಮಾಡಿಕೊಳ್ಳಬೇಕಲ್ಲದೆ, ಸಂಘಕ್ಕೆ ತಾವೇ ಮುಂದಾಗಿ ಧನಸಹಾಯ ನೀಡುವ ಮೂಲಕ ಸಹಕರಿಸಬೇಕು. ಆರ್ಥಿಕ, ಸಾಮಾಜಿಕ, ಔದ್ಯೋಗಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡದೇ ಹೋದಲ್ಲಿ ಸ್ಪರ್ಧಾತ್ಮಕ ಯುಗದಲ್ಲಿ ನಾವು ಹಿಂದುಳಿಯಬೇಕಾಗುತ್ತದೆ. ಒಕ್ಕಲಿಗರಲ್ಲಿ ಎಲ್ಲಾ ಸಾಮಥ್ರ್ಯದ ಗುಣ ಇದ್ದರೂ ಕೊಡಗಿನಲ್ಲಿ ಏನೂ ಇಲ್ಲದಂತೆ ನಾವು ಅನಾಥ ಸ್ಥಿತಿಯಲ್ಲಿದ್ದೇವೆ ಎಂದು ಶಶಿಧರ್ ವಿಷಾದಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಾತೂರು ಗ್ರಾಮದ ಹಿರಿಯರು ಹಾಗೂ ದಾನಿಗಳಾದ ದೊಡ್ಡಮನೆ ಸುಬ್ರಮಣಿ ಅವರು ಕೊಡಗು ಒಕ್ಕಲಿಗರಲ್ಲಿ ಬುದ್ಧಿಜೀವಿ ಗಳು, ಜ್ಞಾನಿಗಳು ಹಲವರು ಇದ್ದಾರೆ. ಕೊಡಗು ಒಕ್ಕಲಿಗರ ಸಂಘವನ್ನು ಬಲಿಷ್ಠವಾಗಿ ಕಟ್ಟಲು 1984 ರಲ್ಲಿ ಲಕ್ಕೇಗೌಡರು ರಾಜ್ಯಾಧ್ಯಕ್ಷರಾಗಿದ್ದಾಗಲೇ ಪ್ರಯತ್ನ ನಡೆಯಿತು. ಬಾಲಗಂಗಾಧರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಸಹಕಾರ ಕೋರಿದರೂ ನಿರೀಕ್ಷಿತ ಕೆಲಸ ಆಗಲಿಲ್ಲ. ಸಂಘದಲ್ಲಿ ಯುವ ಸಮೂಹವನ್ನೂ ಸೆಳೆಯುವ ಕೆಲಸ ಆಗಬೇಕು. ನಮ್ಮಲ್ಲಿರುವ ಯುವ ಮುಖಂಡರು ಒಕ್ಕಲಿಗ ಸಂಘದ ಏಳಿಗೆಗೆ ಇನ್ನಾದರೂ ಕೈಜೋಡಿಸು ವಂತಾಗಬೇಕು ಎಂದು ಅಭಿಪ್ರಾಯಪಟ್ಟರು.ಅಂತರಾಷ್ಟ್ರೀಯ ಹಾಕಿ ಆಟಗಾರ ವಿ.ಎಸ್.ವಿನಯ್ ಮಾತನಾಡಿ, ತನ್ನನ್ನು ಕೊಡಗು ಒಕ್ಕಲಿಗರ ಸಂಘದ ಮೂಲಕ ಗೌರವಿಸಿದ್ದು ನಿಜಕ್ಕೂ ಖುಷಿಯಾಗಿದೆ. ಸಂಘದ ಯಾವದೇ ಕಾರ್ಯಕ್ರಮ ವಿದ್ದಲ್ಲಿ ತಾನು ಭಾಗವಹಿಸಿ, ಸಹಕರಿಸುವದಾಗಿ ಹೇಳಿದರು.

ಸೋಮವಾರಪೇಟೆಯ ಶಿಕ್ಷಣ ತಜ್ಞರೂ, ಹಿರಿಯರೂ ಆದ ಎ.ಆರ್.ಮುತ್ತಣ್ಣ ಅವರು ಮಾತನಾಡಿ, 1968 ರಲ್ಲಿ ಕೆ.ಎಸ್.ಮಲ್ಲೇಗೌಡ ಎಂಬವರು ಕೊಡಗು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ಸೋಮವಾರಪೇಟೆಯಲ್ಲಿ ಒಕ್ಕಲಿಗರ ಸಂಘ ಸ್ಥಾಪನೆಗೆ ಮೊದಲು ರೂ.250 ವಂತಿಗೆ ನೀಡಿದ್ದಾರೆ. ಇದೀಗ ಸೋಮವಾರಪೇಟೆ ಗೌಡ ಸಮಾಜಕ್ಕೆ 50 ರ ಸಂಭ್ರಮ. 1983 ರಿಂದ1989 ರವರೆಗೆ ಒಂದೂವರೆ ಎಕರೆ ದಾನವಾಗಿ ನೀಡಿದ ನಿವೇಶನದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯವಾಗಿದೆ. ಸೋಮವಾರಪೇಟೆ ತಾಲೂಕು ಒಕ್ಕಲಿಗ ಸಮಾಜದ ಆಶ್ರಯದಲ್ಲಿ ಶಾಲೆಯೂ ಒಳಗೊಂಡಂತೆ ಸುಮಾರು ರೂ.15 ಕೋಟಿ ಆಸ್ತಿ ಇದೆ. ಸುವರ್ಣ ಮಹೋತ್ಸವ ಅಂಗವಾಗಿ ಮತ್ತಷ್ಟು ಕಾಮಗಾರಿ ನಡೆಯಬೇಕಾಗಿದೆ ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ ಅವರು, ಜಿಲ್ಲೆಯ ಸಂಘ ಬಲಗೊಳ್ಳಲು ಸೋಮವಾರಪೇಟೆ, ವೀರಾಜಪೇಟೆ, ಕುಶಾಲನಗರ ಯುವ ವೇದಿಕೆಗಳು ಸದಸ್ಯತನ ಹೊಂದಿಕೊಂಡು ಸಹಕರಿಸಬೇಕಾಗಿದೆ. ಜಿಲ್ಲೆಯಲ್ಲಿ ಹೋಬಳಿ ಮಟ್ಟದಲ್ಲಿಯೂ ಒಕ್ಕಲಿಗರ ವೇದಿಕೆ ಅಸ್ತಿತ್ವ ಪಡೆಯುವ ಮೂಲಕ ಜಿಲ್ಲಾ ಸಂಘವನ್ನು ಸದೃಢವಾಗಿ ಕಟ್ಟಲು ಸಾಧ್ಯವಿದೆ. ಮಡಿಕೇರಿ ಸುತ್ತ ಮುತ್ತಲು ನಿವೇಶನ ಗುರುತಿಸುವ ಪ್ರಯತ್ನ ನಡೆದಿದ್ದು 2019-20 ನೇ ಸಾಲಿನಲ್ಲಿ ರೂ.1 ಕೋಟಿ ನಿಧಿ ಸಂಗ್ರಹಕ್ಕೆ ಎಲ್ಲರೂ ಸಹಕರಿಸಲು ಕರೆ ನೀಡಿದರು.

ಇದೇ ಸಂದರ್ಭ ಸಿನೆಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜೈಜಗದೀಶ್, ಹಾಕಿ ಕ್ಷೇತ್ರದಲ್ಲಿ ವಿ.ಎಸ್.ವಿನಯ್ ಹಾಗೂ 2018 ರ ಏಷ್ಯಾಡ್‍ನ 4x400 ಮೀಟರ್ ರಿಲೇಯಲ್ಲಿ ರಜತ ಗೆದ್ದ ಕೆ.ಎಸ್.ಜೀವನ್ ಅವರನ್ನು ಬೆಳ್ಳಿತಟ್ಟೆ ನೀಡಿ ಸನ್ಮಾನಿಸಲಾಯಿತು.

ವಿದ್ಯಾಕ್ಷೇತ್ರದಲ್ಲಿ ಎಸ್‍ಎಸ್‍ಎಲ್‍ಸಿ ಯಲ್ಲಿ ಅತ್ಯಧಿಕ ಅಂಕಗಳಿಸಿದ ಜತಿನ್, ವಿಲನ್ಯಾ ಹಾಗೂ ಸ್ಪಂದನಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವೇದಿಕೆಯಲ್ಲಿ ಮೂರು ತಾಲೂಕು ಉಪಾಧ್ಯಕ್ಷರಾದ ವಿ.ಕೆ.ದೇವಲಿಂಗಯ್ಯ, ವಿ.ಪಿ.ಸುರೇಶ್, ಶಿವಯ್ಯ, ನಿರ್ದೇಶಕ ರಾದ ಕೆ.ಪಿ.ನಾಗರಾಜ್, ಕೆ.ಕೆ. ಮಂಜುನಾಥ್, ವಿ.ಪಿ.ರಾಜ, ಕೆ.ಆರ್.ಸುರೇಶ್, ಜಾನಕಿ, ಬೋಜಮ್ಮ, ಕಮಲ, ದೀರ್ಘಕೇಶಿ ಶಿವಣ್ಣ, ಗೋಪಾಲಕೃಷ್ಣ, ನೀಲೇಶ್, ನಂಜೇಗೌಡ, ಎಸ್.ಪಿ.ಪೆÇನ್ನಪ್ಪ, ಭುವನೇಂದ್ರ, ಅಪ್ಪಸ್ವಾಮಿ, ಲೋಕೇಶ ಮುಂತಾದವರು ಉಪಸ್ಥಿತರಿದ್ದರು. ನಿಧನರಾದ ಸದಸ್ಯರಿಗೆ ಸಂತಾಪ ವ್ಯಕ್ತಪಡಿಸಲಾಯಿತು.