ನಾಪೋಕ್ಲು, ಜ.16: ಅರಂತೋಡು ಗ್ರಾಮದ ಶ್ರೀ ದುರ್ಗಾಮಾತಾ ಭಜನಾ ಮಂದಿರ ಮತ್ತು ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿಯ 75 ನೇ ಅಮೃತ ಮಹೋತ್ಸವ ಮತ್ತು ವಾರ್ಷಿಕ ಏಕಾಹ ಭಜನೆ ತಾ. 17ರಿಂದ 20 ರವರೆಗೆ ನಡೆಯಲಿದೆ.
ತಾ.17ರಂದು (ಇಂದು) ಬೆಳಿಗ್ಗೆ 6-55ರ ಸೂರ್ಯೋದಯದಿಂದ ತಾ. 20 ರ ಬೆಳಿಗ್ಗೆ 6 ಗಂಟೆಯವರೆಗೆ ನಿರಂತರ 75 ಗಂಟೆಗಳವರೆಗೆ ಭಜನೆ ಮತ್ತು ವಾರ್ಷಿಕ ಏಕಾಭಜನೆಯ ದೀಪ ಪ್ರತಿಷ್ಠಾ ಕಾರ್ಯಕ್ರಮ ಜರುಗಲಿದೆ. ಮಧ್ಯಾಹ್ನ 12-30 ರಿಂದ ಪ್ರಧಾನ ಅರ್ಚಕ ಅಂಬರೀಷ್ ಭಟ್ ಅವರ ನೇತೃತ್ವದಲ್ಲಿ ಶ್ರೀ ದೇವಿಗೆ ಮಹಾಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಶ್ರೀ ದುರ್ಗಾಮಾತಾ ಭಜನಾ ಮಂದಿರದ ಅಧ್ಯಕ್ಷ ಯಂ.ಯಂ. ನಾರಾಯಣ ಗೌಡ ಅವರ ಅಧ್ಯಕ್ಷತೆಯಲ್ಲಿ ತಾ.20 ರಂದು ಬೆಳಿಗ್ಗೆ 11 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ಶಕ್ತಿ ದಿನಪತ್ರಿಕೆಯ ಸಹ ಸಂಪಾದಕ ಸೋಮೇಶ್ ಧಾರ್ಮಿಕ ಉಪನ್ಯಾಸ ನೀಡಲಿರುವರು. ಇದೇ ಸಂದರ್ಭ ಅಂಬರೀಷ್ ಭಟ್, ನರಸಿಂಹ ಭಟ್, ಪುಂಡರೀಕ ಕೆ.ಎಂ. ಸರಸ್ವತಿ ಅಡ್ಸಲೆ, ಶಿವಾನಂದ ಕುಕ್ಕುಂಬಳ, ಎ.ಸಿ. ವಸಂತ, ಎಲ್ಯಣ್ಣ ಪಾನತ್ತಿಲ, ಮಾಸ್ಟರ್ ಪವನ್ ಕಲ್ಲುಗದ್ದೆ ಇವರುಗಳನ್ನು ಸನ್ಮಾನಿಸಲಾಗುವದು.
- ದುಗ್ಗಳ