ಸೋಮವಾರಪೇಟೆ, ಜ. 13: ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತರಲು ಉದ್ದೇಶಿಸಿರುವ ಶೇ.10ರ ಮೀಸಲಾತಿಯನ್ನು ರಾಷ್ಟ್ರಪತಿಗಳು ಅಂಗೀಕರಿಸದೇ ತಿರಸ್ಕರಿಸಬೇಕೆಂದು ಸಿಪಿಐಎಂಎಲ್ ಪಕ್ಷ ಆಗ್ರಹಿಸಿದೆ.

ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಸಮಿತಿ ಸದಸ್ಯ ಡಿ.ಎಸ್. ನಿರ್ವಾಣಪ್ಪ, ಜಾತಿ ವ್ಯವಸ್ಥೆ ದೇಶದ ಶತ್ರುವಾಗಿದ್ದು, ಇಂದಿಗೂ ದಲಿತ ವರ್ಗ ಶೋಷಣೆ ಅನುಭವಿಸುತ್ತಲೇ ಇದೆ. ಜಾತಿ ಆಧಾರಿತ ಮೀಸಲಾತಿಯಲ್ಲಿ ಸಮಾಜದಲ್ಲಿ ತುಳಿತಕ್ಕೊಳಗಾದವರನ್ನು ಮೇಲೆತ್ತುವ ಪರಿಕಲ್ಪನೆ ಅಡಗಿದೆ. ಆದರೆ ಇದೀಗ ಮೇಲ್ಜಾತಿಯ ಬಡವರಿಗೆ ಶೇ.10 ಆರ್ಥಿಕ ಮೀಸಲಾತಿ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಿರುವದು ಕೇವಲ ಚುನಾವಣೆಯ ಉದ್ದೇಶ ಮಾತ್ರ ಅಡಗಿದೆ ಎಂದು ಆರೋಪಿಸಿದರು.

ಜಾತಿ ಆಧಾರಿತ ಮೀಸಲಾತಿಯ ಆಶಯಗಳು, ಆರ್ಥಿಕ ಮೀಸಲಾತಿ ಮಸೂದೆಗೆ ವಿರುದ್ಧವಾಗಿವೆ. ಈಗಿರುವ ಜಾತಿ ಮೀಸಲಾತಿಯಿಂದ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದವರಿಗೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಆಡಳಿತ ಜಾಗದಲ್ಲಿ ಇಂದಿಗೂ ಶೇ. 80ಕ್ಕೂ ಅಧಿಕ ಮೇಲ್ಜಾತಿಯವರೇ ಇದ್ದಾರೆ. ಆದರೂ ಆರ್ಥಿಕ ಮೀಸಲಾತಿ ಕಲ್ಪಿಸುವದು ಸರಿಯಲ್ಲ ಎಂದರು.

ಸಾಮಾಜಿಕ ಸಮಾನತೆ ಸಿಗುವವರೆಗೂ ಜಾತಿ ಆಧಾರಿತ ಮೀಸಲಾತಿ ಸಮರ್ಥನೀಯವಾಗಿದೆ. ಹೀಗಿದ್ದರೂ ಬಿಜೆಪಿ ಸರ್ಕಾರ ಮಂಡಿಸಿದ ಆರ್ಥಿಕ ಮೀಸಲಾತಿ ವಿಧೇಯಕ್ಕೆ ಬಿಎಸ್‍ಪಿ ಹಾಗೂ ನಕಲಿ ಕಮ್ಯೂನಿಸ್ಟ್ ಪಕ್ಷಗಳು ಸೇರಿಕೊಂಡು ಬೆಂಬಲ ಸೂಚಿಸಿರುವದು ಖಂಡನೀಯ. ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಬಿಜೆಪಿ ಯತ್ನಿಸುತ್ತಿದ್ದು, ಅದಕ್ಕಾಗಿಯೇ ಆರ್ಥಿಕ ಮೀಸಲಾತಿ ತರಲು ಹೊರಟಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಜನತೆಯ ಬೇಡಿಕೆಗಳನ್ನು ಈಡೇರಿಸಿಲ್ಲ. ಇದೀಗ ಜನತೆಯ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಆರ್ಥಿಕ ಮೀಸಲಾತಿ ಮಸೂದೆ ತರುತ್ತಿದೆ. ಇದಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಬಾರದು ಎಂದು ಒತ್ತಾಯಿಸಿದರು. ಈ ಸಂಬಂಧಿತ ಮನವಿಯನ್ನು ತಹಸೀಲ್ದಾರ್ ಮೂಲಕ ರಾಷ್ಟ್ರಪತಿ ಭವನಕ್ಕೆ ಸಲ್ಲಿಸಲಾಯಿತು. ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್.ಆರ್. ಮಂಜುನಾಥ್, ಸದಸ್ಯ ಹೆಚ್.ಈ. ಸಣ್ಣಪ್ಪ ಉಪಸ್ಥಿತರಿದ್ದರು.