ಗೋಣಿಕೊಪ್ಪಲು, ಜ. 13: ನವಭಾರತ ಕನಸು ನನಸು ಮಾಡಲು ಜಿಲ್ಲಾ ಮಟ್ಟದಲ್ಲಿ ಯುವ ಸಂಸತ್ತು ಸ್ಪರ್ಧೆಯನ್ನು ತಾ. 17, 18 ಹಾಗೂ 19 ರಂದು ಬೆಳಿಗ್ಗೆ 10 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೆಗೆ ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ನಡೆಸಲಾಗುವದು. ಕೊಡಗು ಜಿಲ್ಲೆಯ ಒಂದು ಕಾಲೇಜಿನಿಂದ ಉತ್ತಮ ಭಾಷಣ ಮಾಡುವ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಬಹುದು. ಅಲ್ಲದೆ 18ರಿಂದ 25 ವರ್ಷ ಒಳಗಿನ ವಯೋಮಾನದ ಯುವಜನರು ನೇರವಾಗಿ ಅಥವಾ ಆನ್‍ಲೈನ್ ಮೂಲಕವು ಭಾಗವಹಿಸಬಹುದು. ಸ್ಪರ್ಧೆಯಲ್ಲಿ ಭಾಗವಹಿಸುವವರು ಸ್ವಚ್ಛತೆ, ಬಡತನ, ಭಯೋತ್ಪಾಧನೆ, ಕೋಮುವಾದ, ಜಾತಿವಾದ, ಉತ್ತಮ ಆಡಳಿತ, ಪರಿಸರ ಸಂರಕ್ಷಣೆ ಈ ವಿಷಯಗಳ ಕುರಿತು 2 ರಿಂದ 3 ನಿಮಿಷ ಭಾಷಣ ಮಾಡಬೇಕು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದವರು 28 ನೇ ತಾರೀಕು ಮಂಗಳೂರಿನಲ್ಲಿ ನಡೆಯುವ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಅಲ್ಲಿ ಆಯ್ಕೆ ಯಾದವರು ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ರಾಜ್ಯ ಮಟ್ಟದಲ್ಲಿ ವಿಜೇತರಾದವರು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಯುವ ಸಂಸತ್ತು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೊಡಗು ಜಿಲ್ಲಾ ನೋಡಲ್ ಅಧಿಕಾರಿ ಎಂ.ಎನ್. ವನಿತ್ ಕುಮಾರ್ ಇವರ ಮೊಬೈಲ್ ಸಂಖ್ಯೆ 9880504208ಗೆ ಸಂಪರ್ಕಿಸಬಹುದು.