ಮಡಿಕೇರಿ, ಜ. 12: ಪ್ರತಿಷ್ಠಿತ ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಯ 13 ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 8 ಸ್ಥಾನಗಳಲ್ಲಿ ಗೆಲವು ಸಾಧಿಸುವ ಮೂಲಕ ಮರಳಿ ಅಧಿಕಾರದ ಗದ್ದುಗೆ ಹಿಡಿಯವಲ್ಲಿ ಯಶಸ್ವಿಯಾಗಿದ್ದಾರೆ. ಹಾಲಿ ಅಧ್ಯಕ್ಷ ಬಿ.ಕೆ. ಜಗದೀಶ್ ಹಾಗೂ ಉಪಾಧ್ಯಕ್ಷ ಎಸ್.ಸಿ. ಸತೀಶ್ ಸಹಿತ ಇತರ 6 ಮಂದಿ ಜಯಗಳಿಸಿದ್ದು, ಇತರ ಸಾಮಾನ್ಯ ವರ್ಗದ 3 ಸ್ಥಾನ ಗಳೊಂದಿಗೆ 2 ಮಹಿಳಾ ಸ್ಥಾನಗಳನ್ನು ಮೈತ್ರಿ ಬಣ ತನ್ನದಾಗಿಸಿಕೊಂಡಿದೆ.ಸಾಮಾನ್ಯ ವರ್ಗದ 7 ಸ್ಥಾನಗಳಿಗೆ 19 ಮಂದಿ ಸ್ಪರ್ಧೆಯಲ್ಲಿದ್ದು ಈ ಪೈಕಿ ಅತ್ಯಧಿಕ ಮತಗಳಿಂದ ಅಧ್ಯಕ್ಷ ಬಿ.ಕೆ. ಜಗದೀಶ್ (659) ಗೆಲವು ಸಾಧಿಸಿದರೆ, ಮೈತ್ರಿ ಬಣದಿಂದ ಬಿ.ಎಂ. ರಾಜೇಶ್ ಯಲ್ಲಪ್ಪ (518), ಕೋಡಿ ಚಂದ್ರಶೇಖರ್ (496), ಜಿ.ಎಂ. ಸತೀಶ್ ಪೈ (474) ಮತಗಳಿಂದ ಗೆಲುವಿನ ನಗು ಬೀರಿದರು. ಉಳಿದಂತೆ ಬಿಜೆಪಿ ಬೆಂಬಲಿತ ಕನ್ನಂಡ ಸಂಪತ್ (543), ಗಿರೀಶ್ ಆರಾಧಾನಾ (387), ಬಿ.ವಿ. ರೋಶನ್ (377) ಮತಗಳನ್ನು ಪಡೆದು ಕ್ರಮವಾಗಿ ಜಯ ಸಾಧಿಸಿದರು.
ಮಹಿಳಾ ಸ್ಥಾನ : ಎರಡು ಮಹಿಳಾ ಮೀಸಲು
(ಮೊದಲ ಪುಟದಿಂದ) ಸ್ಥಾನಗಳಿಗೆ ನಡೆದ ಪೈಪೋಟಿಯಲ್ಲಿ ಬಿಜೆಪಿ ಬೆಂಬಲಿತ ಭಾರತಿ ರಮೇಶ್ ಹಾಗೂ ಐ.ಜಿ. ಶಿವಕುಮಾರಿ ಪರಾಜಯಗೊಂಡು ಮೈತ್ರಿ ಬಣದ ಕಾವೇರಮ್ಮ ಸೋಮಣ್ಣ (417) ಹಾಗೂ ಈಶ್ವರಿ ಮಾಚಯ್ಯ (521) ಮತಗಳಿಂದ ಅಚ್ಚರಿಯ ಜಯ ಸಾಧಿಸಿದರು. ಪ್ರತಿ ಸ್ಪರ್ಧಿ ಭಾರತಿ ರಮೇಶ್ (396) ಸೋಲು ಅನುಭವಿಸಿದರು. ಕಾವೇರಮ್ಮ ಸೋಮಣ್ಣ ಅವರಿಗೆ ಕೊನೆ ಕ್ಷಣದವರೆಗೂ ಪೈಪೋಟಿ ನೀಡಿದ ಶಿವಕುಮಾರಿ ಕೇವಲ 4 ಮತಗಳ ಅಂತರದಿಂದ ಪರಾಜಿತರಾದರು. ಅವರು ಮರು ಮತಗಳ ಎಣಿಕೆಗೆ ಪಟ್ಟು ಹಿಡಿದ ಪ್ರಸಂಗವೂ ಎದುರಾಯಿತು.
ಉಪಾಧ್ಯಕ್ಷ ಪುನರಾಯ್ಕೆ : ಹಾಲೀ ಆಡಳಿತ ಮಂಡಳಿ ಉಪಾಧ್ಯಕ್ಷರಾಗಿರುವ ಪರಿಶಿಷ್ಠ ಜನಾಂಗದ ಮೀಸಲು ಅಭ್ಯರ್ಥಿ ಎಸ್.ಸಿ. ಸತೀಶ್ (652) ಮೊದಲನೆಯ ಗೆಲವು ದಾಖಲಿಸಿದರೆ, ಪ್ರತಿಸ್ಪರ್ಧಿ ಹೆಚ್.ಎಸ್. ಪ್ರೇಮ್ಕುಮಾರ್ (284) ಮತಗಳಿಂದ ಪರಾಜಯಗೊಂಡರು.
ಅಂತೆಯೇ ಪರಿಶಿಷ್ಟ ಪಂಗಡದ ಮೀಸಲು ಸ್ಥಾನಕ್ಕೆ ನಡೆದ ನೇರ ಸ್ಪರ್ಧೆಯಲ್ಲಿ ಬಿಜೆಪಿ ಬೆಂಬಲಿತ ಕೆ.ಆರ್. ನಾಗೇಶ್ (509) ಮತಗಳಿಂದ ಗೆಲವು ದಾಖಲಿಸಿದರೆ, ಪ್ರತಿಸ್ಪರ್ಧಿ ಮೈತ್ರಿ ಬಣ ಎಂ.ಎಂ. ಧರ್ಮಾವತಿ (421) ಮತಗಳಿಸಿ ಸೋಲೊಪ್ಪಿಕೊಂಡರು. ಇನ್ನು ಹಿಂದುಳಿದ ವರ್ಗದ ಒಂದು ಸ್ಥಾನಕ್ಕೆ ನಡೆದ ಸ್ಪರ್ಧೆಯಲ್ಲಿ ಬಿಜೆಪಿ ಬೆಂಬಲಿತ ಸಿ.ಕೆ. ಬಾಲಕೃಷ್ಣ (607) ಹಾಗೂ ಬಿ.ವಿ. ರೋಷÀನ್ (632) ಗೆಲವು ಸಾಧಿಸಿದರು. ಪ್ರತಿಸ್ಪರ್ಧಿ ಬಿ.ಪಿ. ಕಿರಣ್ (421) ಹಾಗೂ ಉಮೇಶ್ (193) ಮತಗಳಿಸಿ ಪರಾಜಯಗೊಂಡರು.
ಒಟ್ಟಿನಲ್ಲಿ ಬೆಳಿಗ್ಗೆಯಿಂದಲೇ ಬಾಲಭವನ ಸಭಾಂಗಣದ ಎರಡು ಪ್ರತ್ಯೇಕ ಮತಗಟ್ಟೆಗಳಲ್ಲಿ ಜರುಗಿದ ಚುನಾವಣೆಯಲ್ಲಿ ಉತ್ಸಾಹದಿಂದಲೇ ಮತದಾರ ಸದಸ್ಯರು ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸತೊಡಗಿದ್ದರು. ಸ್ಪರ್ಧಾ ಕಣದಲ್ಲಿದ್ದ ಎಲ್ಲ ಅಭ್ಯರ್ಥಿಗಳ ಸಹಿತ ರಾಜಕೀಯ ಪಕ್ಷಗಳ ಪ್ರಮುಖರು ಕೂಡ ಒಗ್ಗೂಡಿ ತಮ್ಮ ತಮ್ಮ ಅಭ್ಯರ್ಥಿ ಹಾಗೂ ಚಿಹ್ನೆಗಳನ್ನು ಪ್ರದರ್ಶಿಸಿ ಮತ ಯಾಚನೆಯಲ್ಲಿ ತೊಡಗಿದ್ದು ಗೋಚರಿಸಿತು.
ಒಟ್ಟು 1112 ಮಂದಿ ಮತದಾರರ ಪೈಕಿ (996) ಮಂದಿ ತಮ್ಮ ಹಕ್ಕುಗಳನು ಚಲಾಯಿಸಿದರು. ಆ ಪ್ರಕಾರ ಶೇ. 89.65ರಷ್ಟು ಮತದಾನ ನಡೆದಿರುವದು ಕಂಡುಬಂತು. ಸಂಜೆ ನಾಲ್ಕು ಗಂಟೆಯ ಬಳಿಕ ಪೊಲೀಸ್ ಭದ್ರತೆಯಲ್ಲಿ ಎಣಿಕೆ ಪ್ರಕ್ರಿಯೆ ಆರಂಭಗೊಂಡಿತ್ತು.
ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಇತಿಹಾಸದಲ್ಲಿ ಮೊದಲ ಬಾರಿಗೆ ತೀವ್ರ ಕುತೂಹಲಕ್ಕೆ ಈ ಬಾರಿಯ ಚುನಾವಣೆ ಕಾರಣವಾಗಿದೆ ಎಂದು ಪ್ರತಿಯೊಬ್ಬರು ಬಣ್ಣಿಸುತ್ತಿದ್ದದ್ದು ಕಂಡುಬಂತು. ಕಾರಣ ಆಡಳಿತ ಮಂಡಳಿಯ 13 ಸ್ಥಾನಗಳಿಗೆ ಈ ಬಾರಿ ತೀವ್ರ ಪೈಪೋಟಿಯೊಂದಿಗೆ 32 ಮಂದಿ ಸ್ಪರ್ಧೆಯಲ್ಲಿದ್ದರು. ಚುನಾವಣೆಗೆ ಮುನ್ನವೇ ಬಿಜೆಪಿ ಬೆಂಬಲಿತ ಹಿರಿಯ ಸದಸ್ಯೆ ಬೇಬಿ ಪೂವಯ್ಯ ಕಣದಿಂದ ಹಿಂದೆ ಸರಿಯುವದರೊಂದಿಗೆ ಒಟ್ಟು 33 ಅಭ್ಯರ್ಥಿಗಳಲ್ಲಿ 32ಕ್ಕೆ ಇಳಿದಿತ್ತು.