ಮಡಿಕೇರಿ, ಜ. 12: ವಯ್ಯಾರದ ರ್ಯಾಂಪ್ ವಾಕ್..., ತಕದಿಮಿತಕ್ಕೆ ಹೆಜ್ಜೆ..., ಹಾವ- ಭಾವದ ಭಂಗಿಗಳು..., ಸೂಚನೆಗೆ ತಕ್ಕ ಕಾರ್ಯಕ್ಷಮತೆ..., ಇವು ಯಾವದೋ ಶೋಡಷಿಯರ ಕಾರ್ಯಕ್ರಮವಲ್ಲ. ನಿಯತ್ತಿಗೆ ಮತ್ತೊಂದು ಹೆಸರಾಗಿರುವ ನಾವು- ನೀವೆಲ್ಲ ಪ್ರೀತಿಯಿಂದ ಸಾಕಿ ಸಲಹುವ ಶ್ವಾನಗಳ ಆಟಗಳು..., ಮನೆ- ಯಜಮಾನನ ಕಾವಲು ಕಾಯುವದಷ್ಟೇ ಅಲ್ಲ; ಎಲ್ಲದಕ್ಕೂ ನಾವುಗಳು ಸೈ ಎಂದು ತೋರಿಸಿಕೊಟ್ಟವು. ಗಾಂಧಿ ಮೈದಾನದಲ್ಲಿ ನಡೆದ ಶ್ವಾನ ಪ್ರದರ್ಶನದಲ್ಲಿ ಈ ಚಿತ್ರಣ ಕಂಡುಬಂದವು.'ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖಾ ವತಿಯಿಂದ ಕೊಡಗು ಪ್ರವಾಸಿ ಉತ್ಸವ ಪ್ರಯುಕ್ತ ಎರಡನೇ ದಿನವಾದ ಶನಿವಾರ ನಗರದ ಗಾಂಧಿ ಮೈದಾನದಲ್ಲಿ ಶ್ವಾನ ಪ್ರದರ್ಶನ ನಡೆಯಿತು.
ಶ್ವಾನ ಪ್ರದರ್ಶನದಲ್ಲಿ ಸೈಬಿರಿಯನ್ ಹಸ್ಕಿ, ಬೀಗಲ್, ಮಿನಿಯೇಚರ್ ಪಿನ್ಸರ್, ಪೊಮರೇನಿಯನ್, ಲ್ಯಾಬರಡಾರ್ ರಿಟೈವರ್, ಗೋಲ್ಡನ್ ರಿಟೈವರ್, ಜರ್ಮನ್ ಶೆಪರ್ಡ್, ಕ್ರಾಸ್ ಬ್ರೀಡ್ಸ್, ರಾಟ್ ವೀಲರ್ಸ್, ಡೊಬರ್ ಮನ್, ಡಾಶ್ ಹೌಂಡ್, ಬಾಕ್ಸರ್, ಡಾಲ್ ಮೆಶಿಯನ್, ಲಾಸಾ ಅಪ್ಸೊ, ಗ್ರೇಟ್‍ಡೇನ್, ಸ್ಟೆಂಟ್ ಬರ್ನಾರ್ಡ್, ಪಗ್, ಕಾಕರ್ ಸ್ಪಾನಿಯಲ್, ಸೈಂಟ್ ಬಾರ್ನಡ್, ಚೊ ಚೊ, ಪ್ರೆಂಚ್ ಮ್ಯಾಸ್ಟಿಫ್ ಜೊತೆಗೆ ಭಾರತೀಯ ತಳಿಗಳಾದ ಮುಧೋಳ ಮತ್ತು ಬುಲ್ಲಿಕುತ್ತ ಇಂತಹ 27 ತಳಿಯ ಸುಮಾರು 149 ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ನಗರದ ಗಾಂಧಿ ಮೈದಾನದಲ್ಲಿ ಶನಿವಾರ ಶ್ವಾನಗಳ ಬೌಬೌ ಶಬ್ದ ಜೋರಾಗಿಯೇ ಇತ್ತು, ಪುಣಾಣಿ ಶ್ವಾನಗಳು ನೋಡುಗರನ್ನು ಗಮನ ಸೆಳೆದವು.
ಶ್ವಾನ ಪ್ರದರ್ಶನಕ್ಕೆ ಪಶುಪಾಲನಾ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಡಾ.ಕನ್ನಂಡ ಅಯ್ಯಪ್ಪ ಅವರು ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಪ್ರವಾಸಿ ಉತ್ಸವ ಪ್ರಯುಕ್ತ ಜಿಲ್ಲಾಡಳಿತದ ಸಹಕಾರದಲ್ಲಿ ಶ್ವಾನ ಪ್ರದರ್ಶನ ಏರ್ಪಡಿಸಿರುವದು ವಿಶೇಷವಾಗಿದೆ. ಶ್ವಾನ ಪ್ರದರ್ಶನಕ್ಕೆ ಜಿಲ್ಲೆಯ ನಾನಾ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವದು ವಿಶೇಷವಾಗಿದೆ ಎಂದರು.
ಪ್ರದರ್ಶನದಲ್ಲಿ ಭಾಗವಹಿಸಿದ್ದ ಶ್ವಾನಗಳಿಗೆ ಉಚಿತವಾಗಿ ರೇಬೀಸ್ ರೋಗ ನಿರೋಧಕ ಲಸಿಕೆ ಹಾಕಲಾಯಿತು. ಪೊಲೀಸ್ ಇಲಾಖೆಯ ಶ್ವಾನದಳ ವಿಭಾಗದಿಂದ ಅಪರಾಧ ಪತ್ತೆ ಹಚ್ಚುವಿಕೆ ಪ್ರಾತ್ಯಕ್ಷಿಕೆ ನಡೆಯಿತು.
ಗೋಣಿಕೊಪ್ಪದ ಗೌರವ್ ಕಾರ್ಯಪ್ಪ ಅವರ ಜರ್ಮನ್ ಶಫರ್ಡ್, ಕಿರಂದಾಡು ಗ್ರಾಮದ ಪ್ರಮೀಳಾ ಪಳಂಗಪ್ಪ ಅವರ ಮುಧೊಳ, ಮೈಸೂರು ಜೋಯಲ್ ಅವರ ಬೀಗಲ್, ವೀರಾಜಪೇಟೆಯ ನವೀನ್ ಅವರ ರಾಟ್‍ವೀಲರ್ ಮತ್ತು ಕಿರಗೂರು ಗ್ರಾಮದ ರಾಕೇಶ್ ಅವರ ಮಿನಿಯೇಚರ್ ಪಿನ್ಸರ್, ಸಣ್ಣ ತಳಿಯ ವಿಭಾಗದಲ್ಲಿ ಅಂಜಲಿ ಅನಂತಶಯನ ಅವರ ಕಾಕಾರ್ಸ್ ಸ್ಪ್ಯಾನಿಯಲ್ ತಳಿಯ ಶ್ವಾನಗಳು ಬಹುಮಾನ ಗಿಟ್ಟಿಸಿಕೊಂಡವು.
ಪ್ರಬಾರ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ಅವರು ಶ್ವಾನ ಪ್ರದರ್ಶನ ವೀಕ್ಷಿಸಿದರು, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಎ.ಬಿ.ತಮ್ಮಯ್ಯ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ (ನಬಾರ್ಡ್) ಸಹಾಯಕ ಮಹಾ ಪ್ರಬಂಧಕರಾದ ಮುಂಡಂಡ ಸಿ.ನಾಣಯ್ಯ, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಗುಪ್ತಾಜೀ, ಪಾಲಿಕ್ಲೀನಿಕ್ ಘಟಕದ ಉಪ ನಿರ್ದೇಶಕರಾದ ಡಾ.ಚಿದಾನಂದ, ಪಶುಪಾಲನಾ ಇಲಾಖೆಯ ತಾಲೂಕು ಪಶುವೈದ್ಯರಾದ ಡಾ.ಪಿ.ಬೋಲ್ಕ (ಮಡಿಕೇರಿ), ನಾಗರಾಜು (ಸೋಮವಾರಪೇಟೆ) ಮತ್ತಿತರರು ಇದ್ದರು. ತೀರ್ಪುಗಾರರಾಗಿ ಡಾ.ಅಮರನಾಥ್, ಡಾ.ಹೇಮಂತ್, ಡಾ.ರಮೇಶ್, ಡಾ.ನಿತೀನ್ ಪ್ರಭು ಭಾಗವಹಿಸಿದ್ದರು.
ಕರ್ತವ್ಯ ಪ್ರಜ್ಞೆ ಮೆರೆದ ಪೊಲೀಸ್ ಶ್ವಾನಗಳು
ಮಾರ್ಗದರ್ಶಕರ ಆಜ್ಞೆಯನ್ನು ವಿಧೇಯತೆಯಿಂದಲೇ ಪಾಲಿಸುವ, ಕೊಟ್ಟ ಕೆಲಸವನ್ನು ಜೀವ ತೆತ್ತಾದರೂ ಧೈರ್ಯದಿಂದ ನಿರ್ವಹಿಸುವ ಈ ನಾಲ್ವರು ನಾಯಕರು, ಮಡಿಕೇರಿಯಲ್ಲಿ ಶನಿವಾರ ಪ್ರತ್ಯಕ್ಷರಾಗಿದ್ದರು. ಶೌರ್ಯ, ಲಿಯೋ, ರ್ಯಾಂಬೋ ಮತ್ತು ಪ್ರಥ್ವಿ ಎಂಬ ಜಿಲ್ಲೆಯ ಹೆಮ್ಮೆಯ ಪೊಲೀಸ್ ಶ್ವಾನಗಳು ತಮ್ಮ ಅಸಾಧಾರಣ ಪ್ರತಿಭೆಯನ್ನು ಸಾರ್ವಜನಿಕರ ಮುಂದೆ ಪ್ರದರ್ಶಿಸಿದವು.
(ಮೊದಲ ಪುಟದಿಂದ) ಬುದ್ಧಿವಂತಿಕೆ ಮತ್ತು ನಂಬಿಕೆಗೆ ಹೆಸರಾದ ಅಪರಾಧ ಪತ್ತೆದಳದ ಶ್ವಾನಗಳ ಕಾರ್ಯಾಚರಣೆ ಬಗ್ಗೆ ನಡೆದ ರೋಚಕ ಪ್ರಾತ್ಯಕ್ಷಿಕೆ, ಜನರನ್ನು ಸೂಜಿಗಲ್ಲಿನಂತೆ ಸೆಳೆಯಿತು. ತಮ್ಮ ಗೈಡ್‍ಗಳ ಆಣತಿಯನ್ನು ಶ್ವಾನಗÀಳು ಚಾಚೂ ತಪ್ಪದೆ ಪಾಲಿಸಿದವು. ಅತಿಥಿಗಳಿಗೆ ನಮನ ಸಲ್ಲಿಸುವ ಮೂಲಕ ತಮ್ಮ ಚಾಕಚಕ್ಯತೆ ಪ್ರದರ್ಶಿಸಿದ ಶ್ವಾನಗಳು, ಸುರುಳಿ ನಡಿಗೆ, ರಿಂಗ್ ಜಂಪ್, ಬಿಸ್ಕೆಟ್ ಕ್ಯಾಚ್, ಪಥ ಸಂಚಲನ ಚಟುವಟಿಕೆಗಳಿಂದ ಜನರ ಮೆಚ್ಚುಗೆಗೆ ಪಾತ್ರವಾದವು.
ಇದೇ ವೇಳೆ ಕರವಸ್ತ್ರದ ವಾಸನೆ ಗ್ರಹಿಸಿ ಆರೋಪಿಯ ವಸ್ತ್ರವನ್ನು ಹುಡುಕುವ ಕಾರ್ಯಾಚರಣೆ, ಬಾಂಬ್ ಪತ್ತೆ ಕಾರ್ಯಾಚರಣೆ ಮತ್ತು ವಾಸಗೆಯ ಆಧಾರದಲ್ಲಿ ಆರೋಪಿತನನ್ನೇ ಕಚ್ಚಿಹಿಡಿದು ತರುವ ಕಾರ್ಯಾಚರಣೆಯ ಅಣುಕು ಪ್ರದರ್ಶನವನ್ನು ನೋಡಿದ ಸಾರ್ವಜನಿಕರು ಮೂಗಿನ ಮೇಲೆ ಬೆರಳಿಟ್ಟರು.
ಪೊಲೀಸ್ ಸಿಬ್ಬಂದಿಗಳಾದ ಜಿತೇಂದ್ರ ರೈ, ಮನಮೋಹನ್, ಸುಕುಮಾರ್ ಮತ್ತು ಶಿವು ಕ್ರಮವಾಗಿ ಶೌರ್ಯ, ಲಿಯೋ, ರ್ಯಾಂಬೋ ಮತ್ತು ಪ್ರಥ್ವಿ ಶ್ವಾನಗಳ ಮಾರ್ಗದರ್ಶಕರಾಗಿ ಪಾಲ್ಗೊಂಡಿದ್ದರು. ಅಪರಾಧ ಪತ್ತೆದಳದ ಕಾರ್ಯಾಚರಣೆಯಲ್ಲಿ ಪೊಲೀಸ್ ಇಲಾಖೆಯ ತನಿಖೆಗೆ ಈ ಶ್ವಾನಗಳು ಬೆನ್ನೆಲುಬಾಗಿ ನಿಂತಿವೆ. - ಚಿತ್ರ: ಲಕ್ಷ್ಮೀಶ್