ಸೋಮವಾರಪೇಟೆ, ಜ. 11: ಪ್ರಸ್ತುತ ದೇಶದಲ್ಲಿರುವ ಅತೀ ಹೆಚ್ಚು ಮೌಲ್ಯದ ನೋಟು ಎಂಬ ಹೆಗ್ಗಳಿಕೆ ಹೊಂದಿರುವ, ರೂ. 2 ಸಾವಿರ ಮುಖ ಬೆಲೆಯ ನೋಟುಗಳನ್ನು ಪಡೆಯುವಾಗ ಇನ್ನು ತೀವ್ರ ಎಚ್ಚರಿಕೆ ವಹಿಸಬೇಕು. ರೂ. 2 ಸಾವಿರ ಮುಖಬೆಲೆಯ ಖೋಟಾ ನೋಟುಗಳೂ ಸಹ ಮಾರುಕಟ್ಟೆ ಪ್ರವೇಶಿಸಿದ್ದು, ಗ್ರಾಹಕರಿಗೆ ಆತಂಕ ತಂದಿಟ್ಟಿದೆ.

ಸೋಮವಾರಪೇಟೆಯಲ್ಲಿ ಪಿಗ್ಮಿ ಸಂಗ್ರಾಹಕರೊಬ್ಬರಿಗೆ ಈ ಖೋಟಾ ನೋಟು ಸಿಕ್ಕಿದೆ. ಪಿಗ್ಮಿ ಸಂಗ್ರಹದ ತರಾತುರಿಯಲ್ಲಿ ಪರಿಶೀಲಿಸದೇ ರೂ. 2 ಸಾವಿರದ ನೋಟನ್ನು ಪಡೆದಿದ್ದು, ಬ್ಯಾಂಕ್‍ಗೆ ಡೆಪಾಸಿಟ್ ಮಾಡುವ ಸಂದರ್ಭ ನಕಲಿ ನೋಟಿನ ಅಸಲಿ ಬಣ್ಣ ಬಯಲಾಗಿದೆ.

ಬ್ಯಾಂಕ್‍ನ ಸಿಬ್ಬಂದಿ ನೋಟಿನ ಮೇಲೆ ‘ಫೇಕ್’ ಎಂದು ಬರೆದಿದ್ದು, ಪಿಗ್ಮಿ ಸಂಗ್ರಾಹಕರಿಗೆ 2 ಸಾವಿರ ರೂಪಾಯಿ ನಷ್ಟವಾಗಿದೆ. ಅತೀ ಹೆಚ್ಚು ಮೌಲ್ಯದ ನೋಟುಗಳನ್ನು ನಕಲಿಯಾಗಿ ಮುದ್ರಿಸಿ ಮಾರುಕಟ್ಟೆಗೆ ಹರಿಯಬಿಡಲಾಗಿದ್ದು, ಸಾರ್ವಜನಿಕರು ನೋಟುಗಳನ್ನು ಪಡೆಯುವಾಗ ಎಚ್ಚರಿಕೆ ವಹಿಸುವದು ಒಳಿತು. - ವಿಜಯ್