ಕುಶಾಲನಗರ, ಜ. 10: ವಿಶ್ವ ಮಧ್ವ ಮಹಾ ಪರಿಷತ್ತಿನ ಅಂಗ ಸಂಸ್ಥೆಯಾದ ಸೌರಭ ದಾಸ ಸಾಹಿತ್ಯ ವಿದ್ಯಾಲಯ ಆಶ್ರಯದಲ್ಲಿ ಕರ್ನಾಟಕ ಪ್ರಸಿದ್ಧ ಹರಿದಾಸರುಗಳು, ವೇದ ಪುರಾಣಗಳ ಬಗ್ಗೆ ತಾ. 13 ರಂದು ನಡೆಯಲಿರುವ ಪ್ರಥಮ ವರ್ಷದ ದಾಸ ಪರೀಕ್ಷೆಯಲ್ಲಿ ಕುಶಾಲನಗರದ 38 ಮಹಿಳೆಯರು ಪಾಲ್ಗೊಳ್ಳಲಿದ್ದಾರೆ.
ಭಾರತ ಹಾಗೂ ವಿದೇಶಗಳಲ್ಲಿ ಒಟ್ಟು 4 ಸಾವಿರ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿದ್ದು ವಿಶ್ವದ ಎಲ್ಲೆಡೆ 50 ಪರೀಕ್ಷಾ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಹರಿದಾಸರು ವೇದ ಪುರಾಣಗಳ ಬಗ್ಗೆ ಅಧ್ಯಯನ ನಡೆಸುವ ಈ ದಾಸ ಪರೀಕ್ಷೆ 5 ವರ್ಷಗಳ ಅವಧಿ ವ್ಯಾಸಂಗ ಮಾಡಬೇಕಾಗುತ್ತದೆ. ಕುಶಾಲನಗರದ ಮಹಿಳಾ ಭಜನಾ ಮಂಡಳಿಯ ಆಯ್ದ 38 ಮಹಿಳೆಯರು ಈ ಹಿನ್ನಲೆಯಲ್ಲಿ ಕಳೆದ ಹಲವು ತಿಂಗಳಿನಿಂದ ಪರೀಕ್ಷೆಗೆ ತರಬೇತಿ ಹಾಗೂ ಪೂರ್ವಸಿದ್ದತೆ ನಡೆಸುತ್ತಿದ್ದಾರೆ. ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ರಮಾ ವಿಜಯೇಂದ್ರ ಅವರ ನೇತೃತ್ವದಲ್ಲಿ ಮಹಿಳೆಯರು ಪರೀಕ್ಷೆಗೆ ಸಿದ್ದರಾಗುತ್ತಿದ್ದಾರೆ. ಕುಶಾಲನಗರದ ಅನುಗ್ರಹ ಕಾಲೇಜು ಸಭಾಂಗಣದಲ್ಲಿ ತಾ. 13 ರಂದು ಸಂಜೆ 4 ರಿಂದ 1 ಗಂಟೆ ಅವಧಿಯ ಪರೀಕ್ಷೆ ನಡೆಯಲಿದೆ.