ಸೋಮವಾರಪೇಟೆ, ಜ. 10: ಕಾಡಾನೆಗಳ ಹಿಂಡು ಭತ್ತದ ಗದ್ದೆಗೆ ನುಗ್ಗಿ ಬೆಳೆ ನಾಶಪಡಿಸಿರುವ ಘಟನೆ ಕಾರೆಕೊಪ್ಪ-ಬೇಳೂರು ಗ್ರಾಮದಲ್ಲಿ ನಡೆದಿದೆ.
ಸೋಮವಾರಪೇಟೆ ನಿವಾಸಿ ಸುಂದರಮೂರ್ತಿ ಎಂಬವರು ಕಾರೆಕೊಪ್ಪದ ತಮ್ಮ ಗದ್ದೆಯಲ್ಲಿ ಭತ್ತ ಕೃಷಿ ಮಾಡಿದ್ದು, ಕೊಯ್ಲಿಗೆ ಬಂದಿರುವಾಗಲೆ 8 ಕಾಡಾನೆಗಳು ನುಗ್ಗಿ ಪೈರನ್ನು ತಿಂದು, ತುಳಿದು ನಾಶಪಡಿಸಿವೆ.
ಮುಂಗಾರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ನಿಗದಿತ ಸಮಯದಲ್ಲಿ ನಾಟಿ ಮಾಡಲಾಗಿ ರಲಿಲ್ಲ.
ನಾಟಿ ಕೆಲಸ ವಿಳಂಬವಾದ ಕಾರಣ, ಭತ್ತ ಹಣ್ಣಾಗುವದು ವಿಳಂಬವಾಗಿದೆ. ಇದೀಗ ಭತ್ತದ ಫಸಲು ಕೊಯ್ಲಿಗೆ ಬಂದಿದ್ದು, ಮುಂದಿನ ವಾರ ಕೊಯ್ಲು ಮಾಡಬೇಕೆಂದು ನಿರ್ಧರಿಸಲಾಗಿತ್ತು. ಆದರೆ ಇದೀಗ ಯಡವನಾಡು ಮೀಸಲು ಅರಣ್ಯದಿಂದ ಬಂದಿರುವ ಕಾಡಾನೆಗಳು ಬೆಳೆಯನ್ನು ಸಂಪೂರ್ಣ ನಷ್ಟಪಡಿಸಿವೆ ಎಂದು ಕೃಷಿಕ ಸುಂದರ್ ಮೂರ್ತಿ ಅಳಲು ತೋಡಿ ಕೊಂಡಿದ್ದಾರೆ.
ಸುಮಾರು ಒಂದು ಎಕರೆ ಗದ್ದೆಯಲ್ಲಿ ಹಾನಿ ಮಾಡಿರುವ ಆನೆಗಳು, ಪಕ್ಕದ ಕಾಫಿ ತೋಟಕ್ಕೂ ನುಗ್ಗಿ ಬೇಲಿಯನ್ನು ಮುರಿದು, ಕಾಫಿ ಗಿಡಗಳನ್ನು ತುಳಿದಿವೆ ಎಂದು ಕೃಷಿಕ ಸಂಪತ್ ಹೇಳಿದ್ದಾರೆ. ಸೂಕ್ತ ಪರಿಹಾರವನ್ನು ನೀಡುವಂತೆ ಆಗ್ರಹಿಸಿದ್ದಾರೆ. ಡಿಆರ್‍ಎಫ್‍ಒ ಮಹದೇವನಾಯಕ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.