ಪ್ರೇಮ್‍ಕುಮಾರ್
ಸೋಮವಾರಪೇಟೆ, ಜ. 10: ಬದುಕಿನ ಅವಿಭಾಜ್ಯ ಅಂಗವಾಗಿರುವ ಪರಿಸರವನ್ನು ಉಳಿಸುವ ಕಾರ್ಯ ಸಾಮಾಜಿಕ ಜವಾಬ್ದಾರಿಯಾಗ ಬೇಕೆಂದು ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಚಾಲಕ ಟಿ.ಜಿ. ಪ್ರೇಮಕುಮಾರ್ ಹೇಳಿದರು.
ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಹಸಿರು ಪಡೆಯ ಡಾ. ಕೆ. ಶಿವರಾಮ ಕಾರಂತ ಇಕೋ ಕ್ಲಬ್ ವತಿಯಿಂದ ಏರ್ಪಡಿಸಿದ್ದ ಪರಿಸರ ಜಾಗೃತಿ ಆಂದೋಲನದಲ್ಲಿ ‘ಪರಿಸರ ಸಂರಕ್ಷಣೆಯಲ್ಲಿ ಇಕೋ ಕ್ಲಬ್‍ನ ಚಟುವಟಿಕೆಗಳು ಹಾಗೂ ವಿದ್ಯಾರ್ಥಿಗಳ ಪಾತ್ರ’ ಕುರಿತು ಮಾತ ನಾಡಿದ ಅವರು, ಪ್ರತಿಯೊಬ್ಬರೂ ತಮ್ಮನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ನೆಲ-ಜಲ, ಅರಣ್ಯ, ವನ್ಯ ಜೀವಿಗಳು ಹಾಗೂ ಜೀವ ವೈವಿಧ್ಯಗಳೊಂದಿಗೆ ಪರಿಸರವನ್ನು ಸಂರಕ್ಷಿಸದೆ ನಿರ್ಲಕ್ಷ್ಯ ವಹಿಸಿದಲ್ಲಿ ಭವಿಷ್ಯತ್ತಿನಲ್ಲಿ ತೀವ್ರ ಗಂಡಾಂತರ ಪರಿಸ್ಥಿತಿ ಎದುರಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಹಿರಿಯ ಉಪನ್ಯಾಸಕಿ ಎಂ.ಬಿ. ತಿಲೋತ್ತಮೆ ಮಾತನಾಡಿ, ಪರಿಸರದ ಮೇಲೆ ಮಾನವ ಎಸಗುತ್ತಿರುವ ಅಪಾಯವನ್ನು ತಡೆಗಟ್ಟದಿದ್ದಲ್ಲಿ ಭವಿಷ್ಯದಲ್ಲಿ ಶುದ್ಧ ಗಾಳಿ, ಶುದ್ಧ ಕುಡಿಯುವ ನೀರು ಮತ್ತು ಸ್ವಚ್ಛ ಪರಿಸರದ ಸಮಸ್ಯೆ ಎದುರಿಸಬೇಕಿದೆ. ಈ ದಿಸೆಯಲ್ಲಿ ನಾವು ಪರಿಸರಕ್ಕೆ ಯಾವದೇ ಧಕ್ಕೆಯನ್ನುಂಟು ಮಾಡದೆ ಪರಿಸರ ಸಂರಕ್ಷಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಇಕೋ ಕ್ಲಬ್‍ನ ಉಸ್ತುವಾರಿ ಉಪನ್ಯಾಸಕಿ ಸಿ.ಪಿ. ತ್ರಿವೇಣಿ, ಇಕೋ ಕ್ಲಬ್ ವತಿಯಿಂದ ವಿದ್ಯಾರ್ಥಿಗಳು ಮತ್ತು ಸಮುದಾಯದಲ್ಲಿ ಪರಿಸರದ ಅರಿವು ಮೂಡಿಸುವ ಮೂಲಕ ವೈವಿಧ್ಯಮಯ ಪರಿಸರ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಾದ ಹೃದಯ, ಅರ್ಪಿತ, ಹೇಮಾವತಿ ಪರಿಸರ ಚಟುವಟಿಕೆಗಳ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ವಿವಿಧ ಪರಿಸರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ನಡೆದ ಪರಿಸರ ಜಾಗೃತಿ ಆಂದೋಲನದಲ್ಲಿ ವಿದ್ಯಾರ್ಥಿಗಳು ನಮ್ಮ ನಡಿಗೆ ಪರಿಸರದೆಡೆಗೆ, ನೆಲ- ಜಲ, ಜೀವ ವೈವಿಧ್ಯ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿ ದಂತೆ ವಿವಿಧ ಘೋಷಣೆಗಳನ್ನು ಪ್ರಚುರಪಡಿಸುವ ಮೂಲಕ ಜನರ ಗಮನ ಸೆಳೆದರು.