ಮಡಿಕೇರಿ, ಜ. 9: ಜಿಲ್ಲೆಯಲ್ಲಿ ವಸತಿ ಯೋಜನೆಗಳು ಸೇರಿದಂತೆ ಮನೆ ನಿರ್ಮಾಣಕ್ಕಾಗಿ ಸಾರ್ವ ಜನಿಕರಿಗೆ ಮರಳು ದೊರೆಯು ವಂತಾಗಲು ಕೂಡಲೇ ಮರಳು ಸ್ಟಾಕ್ ಯಾರ್ಡ್‍ಗಳನ್ನು ಆರಂಭಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮರಳು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು. ಮರಳು ತೆಗೆಯುವದನ್ನು ಸ್ಥಗಿತಗೊಳಿಸಿ 6 ತಿಂಗಳಾಗಿದೆ. ಜಿಲ್ಲೆಯಲ್ಲಿ ಮರಳು ಅವಶ್ಯಕತೆ ಇದ್ದು, ಜಿ.ಪಂ.ಸಾಮಾನ್ಯ ಸಭೆ ಮತ್ತು ಕೆಡಿಪಿ ಸಭೆಗಳಲ್ಲಿ ಮರಳು ದೊರೆಯುತ್ತಿಲ್ಲ ಎಂಬ ಸುದೀರ್ಘ ಚರ್ಚೆ ನಡೆಯುತ್ತಿದೆ. ಸಾರ್ವಜನಿಕರಿಗೆ ಮರಳು ದೊರೆಯುವಂತಾಗಲು ತ್ವರಿತ ಕ್ರಮ ಕೈಗೊಳ್ಳುವಂತೆ ಅವರು ನಿರ್ದೇಶನ ನೀಡಿದರು.

ಮರಳು ಸ್ಟಾಕ್‍ಯಾರ್ಡ್‍ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ವಾಹನಗಳಿಗೆ ಜಿಪಿಎಸ್ ಅಳವಡಿಸುವದರ ಜೊತೆಗೆ ವಾಹನಗಳ ಓಡಾಟ ಬಗ್ಗೆ ನಿಗಾವಹಿಸಬೇಕು. ಈ ಸಂಬಂಧ ಪೊಲೀಸ್, ಕಂದಾಯ, ಆರ್.ಟಿ.ಓ ಇಲಾಖಾ ಅಧಿಕಾರಿಗಳ ತಂಡಗಳನ್ನು ಒಳಗೊಂಡ ಫ್ಲೇಯಿಂಗ್ ಸ್ಕ್ವಾಡ್ ಪಟ್ಟಿ ಸಿದ್ಧಪಡಿಸುವಂತೆ ಸೂಚನೆ ನೀಡಿದರು.

ಸ್ಟಾಕ್‍ಯಾರ್ಡ್‍ಗಳಲ್ಲಿ ಮರಳು ದೊರೆಯುವದರ ಜೊತೆಗೆ ಸರ್ಕಾರದ ನಿರ್ದೇಶನದಂತೆ ದರ ನಿಗದಿ ಮಾಡುವದು ಮತ್ತಿತರ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

(ಮೊದಲ ಪುಟದಿಂದ) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ಫ್ಲೇಯಿಂಗ್ ಸ್ಕ್ವಾಡ್ ತಂಡಗಳ ಅಧಿಕಾರಿಗಳನ್ನು ಕಡ್ಡಾಯವಾಗಿ ನಿಯೋಜಿಸಬೇಕು. ಅನಧಿಕೃತವಾಗಿ ಮರಳು ಸಾಗಾಣಿಕೆ ನಡೆಯದಂತೆ ನಿಗಾವಹಿಸಬೇಕು. ಫ್ಲೇಯಿಂಗ್ ಸ್ಕ್ವಾಡ್ ತಂಡದ ಪಟ್ಟಿ ಒದಗಿಸುವಂತೆ ತಿಳಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ರೇಷ್ಮ ಅವರು ಜಿಲ್ಲೆಯಲ್ಲಿ 29 ಮರಳು ಬ್ಲಾಕ್‍ಗಳನ್ನು ಗುರುತಿಸಲಾಗಿತ್ತು, ಇದರಲ್ಲಿ 17 ಮರಳು ಬ್ಲಾಕ್‍ಗಳಿಗೆ ಅನುಮೋದನೆ ದೊರೆತಿದ್ದು, 11 ಮರಳು ಬ್ಲಾಕ್‍ಗಳು ತಿರಸ್ಕøತಗೊಂಡಿವೆ ಎಂದು ಮಾಹಿತಿ ನೀಡಿದರು.

ಸದ್ಯ ತ್ವರಿತವಾಗಿ ಕಡಿಯತ್ತೂರು, ಎಮ್ಮೆಮಾಡು ಬ್ಲಾಕ್ ನಂ.1 ಮತ್ತು 2 ನಲ್ಲಿ ವೇ ಬ್ರಿಡ್ಜ್, ಸಿಸಿಟಿವಿ ಸೇರಿದಂತೆ ಎಲ್ಲಾ ರೀತಿಯ ಸಿದ್ದತೆಗಳು ನಡೆದಿದ್ದು, ಈ ಮೂರು ಮರಳು ಬ್ಲಾಕ್‍ಗಳಲ್ಲಿ ಸ್ಟಾಕ್‍ಯಾರ್ಡ್ ಆರಂಭಿಸಬಹುದಾಗಿದೆ ಎಂದು ಅವರು ತಿಳಿಸಿದರು. ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರು ಮರಳುಗಾರಿಕೆ ಸಂಬಂಧಿಸಿ ದಂತೆ ಹಲವು ಸಲಹೆ ನೀಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜು ನಾಥ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಮತಾ, ಪ್ರಾದೇಶಿಕ ಸಾರಿಗೆ ಕಚೇರಿಯ ಯೋಗೀಶ್, ತಹಶೀಲ್ದಾರರಾದ ಕುಸುಮ, ಮಹೇಶ್ ಇತರರು ಮರಳುಗಾರಿಕೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.

ಶನಿವಾರಸಂತೆ: ಕೊಡ್ಲಿಪೇಟೆ ಹೋಬಳಿಯ ಖ್ಯಾತೆ ಗ್ರಾಮದ ಹೊಳೆಯಿಂದ ಸರಕಾರದ ಯಾವದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮರಳು ತೆಗೆದು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ದಾಸ್ತಾನು ಮಾಡುತ್ತಿರುವ ಬಗ್ಗೆ ಸೋಮವಾರ ರಾತ್ರಿ ಗಸ್ತಿನಲ್ಲಿದ್ದ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಅವರಿಗೆ ದೊರೆತ ಖಚಿತ ವರ್ತಮಾನದ ಮೇರೆ ಸಿಬ್ಬಂದಿಗಳೊಡನೆ ಸ್ಥಳಕ್ಕೆ ಧಾವಿಸಿ (ನಂ. ಕೆಎ-12 ಬಿ-5161) ಪಿಕ್‍ಅಪ್ ಜೀಪು, ಚಾಲಕ ಹಾಗೂ ಮರಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಖ್ಯಾತೆ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿ ಪಿಕ್‍ಅಪ್ ಜೀಪಿನಲ್ಲಿ 4 ಜನ ಸೇರಿ ಮರಳನ್ನು ತಂದು ಸುರಿಯುತ್ತಿದ್ದು, ಪೊಲೀಸರನ್ನು ನೋಡಿ ಕೆ.ಟಿ. ರಮೇಶ್, ಬಾಷೀತ್ ಹಾಗೂ ಸಂಜು ಮೂವರು ಕಾಫಿ ತೋಟದ ಒಳಗಡೆ ಓಡಿ ಪರಾರಿಯಾದರು. ಜೀಪು ಚಾಲಕ ರಂಜನ್‍ನನ್ನು ಬಂಧಿಸಿ, ಜೀಪು ಹಾಗೂ 8-10 ಪಿಕ್‍ಅಪ್ ಲೋಡಿನಷ್ಟು ಮರಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ನಂಜುಂಡೇಗೌಡ ಭೇಟಿ ನೀಡಿದ್ದಾರೆ.