ವೀರಾಜಪೇಟೆ, ಜ. 8: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ 29 ಮಳಿಗೆಗಳನ್ನು ಕಳೆದ ಹನ್ನೊಂದು ತಿಂಗಳ ಹಿಂದೆ ಬಹಿರಂಗ ಹರಾಜು ಮಾಡಿದ್ದು ಕಾನೂನು ಬಾಹಿರ, ಈ ಮಳಿಗೆಗಳ ಹರಾಜಿಗೆ ಬಹುತೇಕ ಬಿಡ್‍ದಾರರು ಆಕ್ಷೇಪಣೆ ವ್ಯಕ್ತಪಡಿಸಿದರಲ್ಲದೆ ಮಳಿಗೆಗಳ ಬಿಡ್ ಮುಗಿದು ಒಂದು ತಿಂಗಳ ಅವಧಿಯಲ್ಲಿ ಕಾನೂನುಬದ್ಧವಾಗಿ ಮಳಿಗೆಯನ್ನು ಬಿಡ್‍ದಾರರಿಗೆ ವಹಿಸಬೇಕಾಗಿತ್ತಾದರೂ ಮಳಿಗೆ ವಹಿಸಲು 11 ತಿಂಗಳ ವಿಳಂಬ ಮಾಡಿರುವದು ಕಾನೂನಿಗೆ ವಿರೋಧ ಎಂದು ಬಿಡ್‍ದಾರರು ಪಟ್ಟಣ ಪಂಚಾಯಿತಿ ವಿರುದ್ಧ ಆರೋಪಿಸಿದರು.

ಪಂಚಾಯಿತಿಯ ಆಡಳಿತಾಧಿಕಾರಿ ಆರ್. ಗೋವಿಂದರಾಜು ಅವರ ಸಮ್ಮುಖದಲ್ಲಿ ಇಲ್ಲಿನ ಪುರಭವನದಲ್ಲಿ ಆಯೋಜಿಸಲಾಗಿದ್ದ

ಬಹಿರಂಗ ಹರಾಜಿನಲ್ಲಿ ಮಳಿಗೆಗಳನ್ನು ಪಡೆದ ಬಿಡ್‍ದಾರರ ಸಮನ್ವಯ ಸಭೆಯಲ್ಲಿ ಮುಖ್ಯಾಧಿಕಾರಿ ಶ್ರೀಧರ್ ಅವರು ರಾಜ್ಯದ ಉಚ್ಚ ನ್ಯಾಯಾಲಯದ ಆದೇಶದಂತೆ ಮಳಿಗೆಗಳ ಹರಾಜಿನ ಟೆಂಡರ್ ಪ್ರಕ್ರಿಯೆ ನಡೆದಿದೆ. ಜಿಲ್ಲಾಧಿಕಾರಿಯ ಅನುಮೋದನೆಯೂ ಆಗಿದೆ. ಹರಾಜಿನಲ್ಲಿ ಮಳಿಗೆಗಳನ್ನು ಪಡೆದ ಬಿಡ್‍ದಾರರಿಗೆ ಮುಂದಿನ ಹತ್ತು ದಿನಗಳ ನಂತರ ಕಾನೂನು ಪ್ರಕಾರ ಹಸ್ತಾಂತರಿಸಲಾಗವದು ಎಂದು ಹೇಳಿದರು. ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಬಿಡ್‍ದಾರರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಬಿಡ್‍ದಾರರ ಪರವಾಗಿ ಮಾತನಾಡಿದ ಪಟ್ಟಣ ಪಂಚಾಯಿತಿಯ ನೂತನ ಸದಸ್ಯ ಸಿ.ಕೆ.ಪೃಥ್ವಿನಾಥ್ ಬಹಿರಂಗ ಟೆಂಡರ್ ಕರೆಯುವ ಮೊದಲೇ ಮಳಿಗೆಗಳನ್ನು ತೆರವುಗೊಳಿಸಬೇಕಾಗಿತ್ತು. ಹಿಂದಿನ ಬಾಡಿಗೆದಾರರು ಮಳಿಗೆಯಲ್ಲಿಯೇ ಇದ್ದು ಅವಧಿಗೂ ಮೀರಿ ಬಾಡಿಗೆ ಪಾವತಿಸುತ್ತಿದ್ದಾಗಲೇ ಹಿಂದಿನ ಆಡಳಿತ ಟೆಂಡರ್ ಕರೆದಿರುವದು ಕಾನೂನು ಬಾಹಿರವಾಗಿದೆ. ಪಟ್ಟಣ ಪಂಚಾಯಿತಿ ಟೆಂಡರ್‍ದಾರರಿಗೆ ಮೋಸ ಮಾಡುವ ಉದ್ದೇಶದಿಂದ ಈ ಟೆಂಡರ್ ಪ್ರಕ್ರಿಯೆಯಲ್ಲಿ ಮಳಿಗೆಯನ್ನು ತೆರವುಗೊಳಿಸದೆ ಟೆಂಡರ್ ಕರೆಯಲಾಗಿದೆ. ಇದನ್ನು ಪರಿಶೀಲಿಸಿ ಕಾನೂನುಬದ್ಧವಾಗಿ ಮರು ಟೆಂಡರ್‍ಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.

ಹರಾಜಿನಲ್ಲಿ ಮಳಿಗೆಯೊಂದನ್ನು ಒಂದೂವರೆ ಲಕ್ಷಕ್ಕೂ ಅಧಿಕವಾಗಿ ಮಾಸಿಕ ಬಾಡಿಗೆಗೆ (ಒಟ್ಟು 132 ಅಡಿಗಳಷ್ಟು) ಪಡೆದ ಬಿಡ್‍ದಾರರಾದ ಟಿ.ಪಿ.ಕೃಷ್ಣ ಮಾತನಾಡಿ ಕಳೆದ ಫೆಬ್ರವರಿ ತಿಂಗಳಲ್ಲಿ ಪಟ್ಟಣ ಪಂಚಾಯಿತಿಯ ಹಿಂದಿನ ಆಡಳಿತ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ಎಲ್ಲ ರೀತಿಯಲ್ಲಿ ಕಾನೂನನ್ನು ಉಲ್ಲಂಘಿಸಲಾಗಿದೆ. ಹರಾಜು ಕಾನೂನು ಬದ್ಧವಾಗಿ ನಡೆದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಹರಾಜು ಪ್ರಕ್ರಿಯೆ ಕಳೆದು ಒಂದು ವಾರದಲ್ಲಿಯೇ ಆಕ್ಷೇಪಣೆ ಸಲ್ಲಿಸಲಾಗಿದೆ. ಹಿಂದಿನ ಹರಾಜು ಪ್ರಕ್ರಿಯೆಯನ್ನು ತಡೆಹಿಡಿದು ಮರು ಟೆಂಡರ್‍ಗೆ ಅವಕಾಶ ನೀಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.

ಹರಾಜಿನಲ್ಲಿ ಮಳಿಗೆಗಳನ್ನು ಸ್ಪರ್ಧಾತ್ಮಕವಾಗಿ ದುಬಾರಿ ಬಾಡಿಗೆಯಲ್ಲಿ ಪಡೆದ ಕೆಲವು ಬಿಡ್‍ದಾರರು ಹರಾಜಿಗೆ ಆಕ್ಷೇಪಣೆ ವ್ಯಕ್ತಪಡಿಸುವದಾಗಿ ತಿಳಿಸಿದಾಗ ಯಾವ ಆಕ್ಷೇಪಣೆ ಸಲ್ಲಿಸಿದರೂ ಅದನ್ನು ಜಿಲ್ಲಾಧಿಕಾರಿಗೆ ಕಳುಹಿಸುವದಾಗಿ ತಿಳಿಸಿದರು.

ಪಂಚಾಯಿತಿ ಆಡಳಿತಾಧಿಕಾರಿ ಆರ್. ಗೋವಿಂದರಾಜು ಮಾತನಾಡಿ ಅನಿವಾರ್ಯ ಕಾರಣಗಳಿಂದ ಬಿಡ್‍ದಾರರಿಗೆ ಮಳಿಗೆಗಳ ಹಸ್ತಾಂತರ ವಿಳಂಬವಾಗಿದೆ. ಇದು ಬಿಡ್‍ದಾರರಿಗೂ ತಿಳಿದಿದೆ. ಮುಂದಿನ ಹತ್ತು ದಿನಗಳೊಳಗೆ ಹಿಂದಿನ ಬಾಡಿಗೆದಾರರನ್ನು ತೆರವುಗೊಳಿಸಿ ಬಿಡ್‍ದಾರರಿಗೆ ಮಳಿಗೆಗಳನ್ನು ಕಾನೂನುಬದ್ಧವಾಗಿ ಹಸ್ತಾಂತರಿಸಲಾಗುವದು

ಪಟ್ಟಣ ಪಂಚಾಯಿತಿ ಹಾಗೂ ಬಿಡ್‍ದಾರರ ನಡುವೆ ಪರಸ್ಪರ ಸಹಕಾರ ಅಗತ್ಯ ಎಂದರು. ರಾಜ್ಯ ಉಚ್ಚನ್ಯಾಯಾಲಯದ ಆದೇಶದಂತೆ ಪಟ್ಟಣ ಪಂಚಾಯಿತಿಯು ತಾ. 19.2.18 ರಂದು ಹರಾಜು ಪ್ರಕ್ರಿಯೆ ನಡೆಸಿತ್ತು. ಸುಮಾರು 32 ಮಳಿಗೆಗಳ ಪೈಕಿ 29 ಮಳಿಗೆಗಳು ಹರಾಜು ಆಗಿ ಪಟ್ಟಣ ಪಂಚಾಯಿತಿಗೆ ಮಾಸಿಕವಾಗಿ ರೂ 7,81,934 ಬಾಡಿಗೆ ನಿಗದಿಯಾಗಿತ್ತು. ಬಿಡ್‍ದಾರರಿಂದ ರೂ 43 ಲಕ್ಷ ಠೇವಣಿ ಸಂಗ್ರಹವಾಗಿತ್ತು. ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಭಿಯಂತರ ಎನ್.ಪಿ. ಹೇಮ್‍ಕುಮಾರ್ ಇದ್ದರು. ಎಲ್ಲ ಬಿಡ್‍ದಾರರು ಭಾಗವಹಿಸಿದ್ದರು.