ಮಡಿಕೇರಿ, ಜ. 8: ವೃತ್ತಿನಿರತ ಪತ್ರಕರ್ತರು ಪ್ರತಿನಿತ್ಯ ಸುದ್ದಿಯ ಒತ್ತಡದಲ್ಲಿರುವದು ಸಹಜ. ಜಿಲ್ಲೆಯ 20 ಪತ್ರಕರ್ತರು ದೈನಂದಿನ ಒತ್ತಡ ಬದಿಗಿಟ್ಟು, ಪ್ರಕೃತಿ ಸೊಬಗಿನ ಬ್ರಹ್ಮಗಿರಿ ಬೆಟ್ಟಕ್ಕೆ ಚಾರಣ ಹಮ್ಮಿಕೊಂಡಿದ್ದರು.
ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಭಾನುವಾರ, ಸೋಮವಾರ ದಕ್ಷಿಣ ಕೊಡಗಿನ ಇರ್ಪು ಜಲಪಾತದ ಹಿಂಭಾಗದಲ್ಲಿರುವ ಬ್ರಹ್ಮಗಿರಿ ಬೆಟ್ಟಕ್ಕೆ ಚಾರಣ ಹಮ್ಮಿಕೊಳ್ಳಲಾಗಿತ್ತು. ಭಾನುವಾರ ಬೆಳಿಗ್ಗೆ 11.30ಕ್ಕೆ ಅರಣ್ಯ ಇಲಾಖೆಯ ಐವರು ಸಿಬ್ಬಂದಿಗಳು, ಪತ್ರಕರ್ತರು ಬೆಟ್ಟದತ್ತ ನಡಿಗೆ ಪ್ರಾರಂಭಿಸಿದರು. ತಮ್ಮೊಂದಿಗೆ ಅಡುಗೆಗೆ ಬೇಕಾದ ಸಾಮಗ್ರಿಗಳನ್ನು ಹೊತ್ತು ಸಾಗಿದರು.
ಮಧ್ಯಾಹ್ನ 3 ಗಂಟೆ ಹೊತ್ತಿಗೆ 7 ಕಿಲೋಮೀಟರ್ ದೂರದ ಮೊದಲ ಹಂತದ ಚಾರಣ ಪೂರ್ಣಗೊಳಿಸಿದರು. ಆದಾಗಲೇ ಸುಸ್ತಾಗಿದ್ದ ಕೆಲವು ಪತ್ರಕರ್ತರು ಅರಣ್ಯ ಇಲಾಖೆ ವಸತಿ ಗೃಹದಲ್ಲಿ ಉಳಿದುಕೊಂಡರು. ತದನಂತರ ಉತ್ಸಾಹಿ ಪತ್ರಕರ್ತರು 7 ಕಿ.ಮೀ. ದೂರದ 2ನೇ ಸುತ್ತಿನ ಚಾರಣ ಪ್ರಾರಂಭಿಸಿದರು. ಕರ್ನಾಟಕ, ಕೇರಳ ರಾಜ್ಯದ ಗಡಿಭಾಗವನ್ನು ಖುದ್ದು ನೋಡಲು ಕುತೂಹಲಭರಿತರಾಗಿ ತೆರಳಿದರು.
ಅತ್ಯಂತ ಸವಾಲಿನ, ಕಠಿಣ, ಧೈರ್ಯವಂತಿಕೆ ಮನೋಭಾವದ 8 ಪತ್ರಕರ್ತರು ಬ್ರಹ್ಮಗಿರಿ ಬೆಟ್ಟದ ತುತ್ತದ ತುದಿ ತಲಪುವಲ್ಲಿ ಸಫಲರಾಗಿದ್ದರು. ಬ್ರಹ್ಮಗಿರಿ ಬೆಟ್ಟದ ತಪ್ಪಲಿನಿಂದ ಅರ್ಧ ಭಾಗಕ್ಕೆ ಬಂದ ಕೆಲವು ಪತ್ರಕರ್ತರು ತಮ್ಮಿಂದ ಸಾಧ್ಯವಿಲ್ಲ ಎಂದು ಕೈಚೆಲ್ಲಿದರು. ಅಜ್ಜಮಾಡ ರಮೇಶ್ ಕುಟ್ಟಪ್ಪ, ಎಂ.ಎ. ಅಜೀಜ್, ರೆಜಿತ್‍ಕುಮಾರ್ ಗುಹ್ಯ, ಕಿಶೋರ್ ರೈ ಕತ್ತಲೆಕಾಡು, ವಿಘ್ನೇಶ್ ಎಂ. ಭೂತನಕಾಡು, ಅಶೋಕ್, ದಿವಾಕರ್ (ಜಾಕಿ), ಚನ್ನನಾಯಕ್ ಬ್ರಹ್ಮಗಿರಿ ಬೆಟ್ಟದ ತುದಿ ಮುಟ್ಟಿದರು. ಬೆಟ್ಟದ ತುದಿಯಿಂದ ಕಾಣಸಿಗುವ ಬೆಟ್ಟ ಸಾಲಿನ ವಿಹಂಗಮ ನೋಟ, ಕೇರಳ, ಕರ್ನಾಟಕ ರಾಜ್ಯದ ಪಟ್ಟಣಗಳನ್ನು ಕುತೂಹಲಭರಿತರಾಗಿ ವೀಕ್ಷಿಸಿದರು. ರಾತ್ರಿ 7 ಗಂಟೆ ಹೊತ್ತಿಗೆ ಚಾರಣದಲ್ಲಿದ್ದ ಎಲ್ಲರೂ ವಸತಿಗೃಹಕ್ಕೆ ತಲುಪಿದರು. ಬೆಚ್ಚನೆಯ ಹೊದಿಕೆಯಲ್ಲಿ ರಾತ್ರಿ ಕಳೆದರು.
ಸೋಮವಾರ ಮುಂಜಾನೆ ನರಿಮಲೆ ಬೆಟ್ಟಕ್ಕೆ ತೆರಳಿ, ಪ್ರಕೃತಿ ಸೊಬಗನ್ನು ಸವಿದರು. ಅಲ್ಲಿಂದ ಬೆಳಗ್ಗೆ 8.45 ಕ್ಕೆ ಮರಳಿ 7 ಕಿ.ಮೀ. ನಡಿಗೆ ಪ್ರಾರಂಭಿಸಿ, 10.15ರ ಹೊತ್ತಿಗೆ ಚಾರಣ ಪ್ರಾರಂಭಿಸಿದ ಸ್ಥಳಕ್ಕೆ ತಲಪಿದರು. ಕೆಲವು ಪತ್ರಕರ್ತರಿಗೆ ನಡೆಯಲು ಸಾಧ್ಯವೆ ಇಲ್ಲ ಎಂಬ ಸ್ಥಿತಿಗೆ ತಲಪಿದ್ದರು. ಎರಡು ದಿನ ಬ್ರಹ್ಮಗಿರಿ ಬೆಟ್ಟದಲ್ಲಿ ಕಳೆದಿದ್ದೂ, ಆವಿಸ್ಮರಣೀಯ ಎಂದು ಚಾರಣದಲ್ಲಿ ಪಾಲ್ಗೊಂಡಿದ್ದ ಪತ್ರಕರ್ತರು ಸಂಭ್ರಮಿಸಿದರು.
ಹಿರಿಯ ಪತ್ರಕರ್ತ ಅಜ್ಜಮಾಡ ಕುಶಾಲಪ್ಪ ಚಾರಣ ಸಂಘಟಿಸಿದ್ದರು. ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ, ಉಪಾಧ್ಯಕ್ಷ ಕೆ.ಎ. ಆದಿತ್ಯ, ನಿರ್ದೇಶಕರಾದ ಕುಪ್ಪಂಡ ದತ್ತಾತ್ರಿ, ಪ್ರೇಮ್‍ಕುಮಾರ್, ಕೊಳಂಬೆ ಉದಯ್ ಮೊಣ್ಣಪ್ಪ, ಕೊಡಗು ಪ್ರೆಸ್‍ಕ್ಲಬ್ ನಿರ್ದೇಶಕ ಚೀಯಂಡಿ ತೇಜಸ್ ಪಾಪಯ್ಯ, ಪತ್ರಕರ್ತರಾದ ಕೆ.ಬಿ. ಮಂಜುನಾಥ್, ಪುತ್ರಂ ಪ್ರದೀಪ್, ರಾಕೇಶ್ ಕೊಡಗು, ನಾಗೇಶ್, ಜಗದೀಶ್ ಚಾರಣದಲ್ಲಿ ಪಾಲ್ಗೊಂಡಿದ್ದರು.