ಗೋಣಿಕೊಪ್ಪಲು, ಜ. 8: ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ವರ್ತಕರಿಗೆ ವ್ಯಾಪಾರವಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇತ್ತೀಚೆಗೆ ನಗರದಲ್ಲಿ ಏಕ ಮುಖ ಸಂಚಾರ ಮಾರ್ಪಾಡು ಮಾಡಿದ್ದೇ ಇದಕ್ಕೆಲ್ಲ ಕಾರಣ ಎಂದು ವರ್ತಕರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.ಸದಾ ಗಿಜಿಗುಡುತ್ತಿದ್ದ ನಗರವು ಇತ್ತೀಚೆಗೆ ಏಕ ಮುಖ ಸಂಚಾರದಿಂದ ಸ್ತಬ್ಧವಾದಂತಾಗಿದೆ. ಮುಖ್ಯ ರಸ್ತೆಯ ಎರಡು ಬದಿಯಲ್ಲಿಯೂ ಖಾಲಿ ಜಾಗವಿದ್ದರು ಸಂಬಂಧಿಸಿದ ಪಂಚಾಯಿತಿ ಅಗಲಿಕರಣಕ್ಕೆ ಮುಂದಾಗಲಿಲ್ಲ. ಅಲ್ಲದೆ ವಾಹನಗಳು ಅಡ್ಡದಿಡ್ಡಿ ಪಾರ್ಕಿಂಗ್ ಮಾಡುವದನ್ನು ತಪ್ಪಿಸಲು ರಸ್ತೆಯ ಎರಡು ಬದಿಯಲ್ಲಿಯೂ ವಾಹನ ನಿಲ್ಲಲು ಬಣ್ಣ ಹಾಕಿರುವದಿಲ್ಲ. ಈ ವ್ಯವಸ್ಥೆಯಾದಲ್ಲಿ ವಾರದ ಶನಿವಾರ, ಭಾನುವಾರ ಹಾಗೂ ಸೋಮವಾರ ವಾಹನ ದಟ್ಟಣೆಯನ್ನು ನಿಭಾಯಿಸುವ ವ್ಯವಸ್ಥೆ ಇದ್ದರೂ ಇವುಗಳ ಬಗ್ಗೆ ಮುಂಜಾಗ್ರತೆಯನ್ನು ಕೈಗೊಳ್ಳದೆ ಒನ್‍ವೇ ಮಾಡಿದ್ದರಿಂದ ಸಮಸ್ಯೆ ಎದುರಾಗಿದಂತಾಗಿದೆ.
ಗೋಣಿಕೊಪ್ಪ, ವೀರಾಜಪೇಟೆ ಮುಖ್ಯ ರಸ್ತೆಯಲ್ಲಿ ಸದಾ ವಾಹನ ಸಂಚಾರದಿಂದ ಆಗಿಂದ್ದಾಗೆ ಟ್ರಾಫಿಕ್ ಜಾಮ್ ಆಗುತ್ತಿತ್ತು. ಪೊಲೀಸರು ವಾಹನ ಸಂಚಾರÀ ದಟ್ಟಣೆಯನ್ನು ನಿಭಾಯಿಸುವದೇ ದುಸ್ತರವಾಗಿತ್ತು. ಈ ಸಂದರ್ಭದಲ್ಲಿ ವರ್ತಕರು ಸ್ಥಳೀಯ ಛೇಂಬರ್ ಆಫ್ ಕಾಮರ್ಸ್‍ನ ಮಹಾ ಸಭೆಯಲ್ಲಿ ಏಕ ಮುಖ ಸಂಚಾರಕ್ಕೆ ಮನವಿ ಮಾಡಿದ್ದರು. ಬೈಪಾಸ್ ರಸ್ತೆಯನ್ನು ಏಕ ಮುಖ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಗ್ರಾಮ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿತ್ತು. ದಿನ ನಿತ್ಯದ ವಾಹನ ದಟ್ಟಣೆಯನ್ನು ತಹಬದಿಗೆ ತರಲು ಇತ್ತೀಚೆಗೆ ಗೋಣಿಕೊಪ್ಪ ಪೊಲೀಸ್ ಠಾಣೆಗೆ ಆಗಮಿಸಿದ ಠಾಣಾಧಿಕಾರಿ ಶ್ರೀಧರ್‍ರವರು ಸಾರ್ವಜನಿಕ, ಸಂಘ ಸಂಸ್ಥೆಯ ಪ್ರಮುಖರೊಂದಿಗೆ ನಗರದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಿ ಜನರ ಅಭಿಪ್ರಾಯ ಸಂಗ್ರಹಿಸಿದರು. ಈ ಸಂದರ್ಭ ಸಾರ್ವಜನಿಕರು ಏಕ ಮುಖ ಸಂಚಾರದ ಬಗ್ಗೆ ಪ್ರಸ್ತಾಪಿಸಿದ್ದರು. ನಾಗರಿಕರ ಕೋರಿಕೆಯಂತೆ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಾಯೋಗಿಕವಾಗಿ ಏಕ ಮುಖ ಸಂಚಾರದ ಬಗ್ಗೆ ಕ್ರಮ ವಹಿಸುವಂತೆ ಗೋಣಿಕೊಪ್ಪ ಠಾಣಾಧಿಕಾರಿ ಶ್ರೀಧರ್ ಹಾಗೂ ವೃತ್ತ ನಿರೀಕ್ಷಕ ದಿವಾಕರ್‍ರವರಿಗೆ ನಿರ್ದೇಶನ ನೀಡಿದ್ದರು.
ಮೇಲಾಧಿಕಾರಿಗಳ ನಿರ್ದೇಶನದಂತೆ ಏಕ ಮುಖ ಸಂಚಾರಕ್ಕೆ ಚಾಲನೇ ನೀಡಿದ ಪೊಲೀಸರು ಮೈಸೂರು ಮಾರ್ಗದಿಂದ ಗೋಣಿಕೊಪ್ಪಕ್ಕೆ ಬರುವ ಬಸ್,ಲಾರಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಾಹನಗಳನ್ನು ಪೊನ್ನಂಪೇಟೆ ಜಂಕ್ಷನ್ ರಸ್ತೆಯಿಂದ ತಿರುಗಿಸಿ ಬೈ ಪಾಸ್ ಮೂಲಕ ಉಮಾಮಹೇಶ್ವರಿ ದೇವಾಸ್ಥಾನದ ಸಮೀಪದ ರಸ್ತೆಗಾಗಿ ವೀರಾಜಪೇಟೆಗೆ ಹಾದು ಹೋಗಲು ಅವಕಾಶ ಕಲ್ಪಿಸಿದರು. ವೀರಾಜಪೇಟೆ ಕಡೆಯಿಂದ ಮೈಸೂರಿಗೆ ತೆರಳಲು ವೀರಾಜಪೇಟೆ ಗೋಣಿಕೊಪ್ಪ ಮುಖ್ಯ ರಸ್ತೆಯನ್ನು ಏಕಮುಖ ಸಂಚಾರಕ್ಕೆ ನಿಗದಿ ಪಡಿಸಿದರು. ಗೋಣಿಕೊಪ್ಪದಿಂದ ಪೊನ್ನಂಪೇಟೆಯ ಭಾಗಕ್ಕೆ ತೆರಳಲು ಇದೇ ಮುಖ್ಯ ರಸ್ತೆಯ ಪೊನ್ನಂಪೇಟೆ ಜಂಕ್ಷನ್‍ನಲ್ಲಿ ಪೊಲೀಸರನ್ನು ನಿಯೋಜಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು. ಮೈಸೂರು ಭಾಗದಿಂದ ಬರುವ ಬಸ್ ಲಾರಿ ಹೊರತುಪಡಿಸಿ ಎಲ್ಲಾ ವಾಹನಗಳು ಬೈ ಪಾಸ್ ರಸ್ತೆಯಿಂದಲೇ ಹಾದು ಹೋಗುವಂತೆ ಮಾಡಲಾಯಿತು.
ಜಂಕ್ಷನ್‍ನಿಂದ ಕೂಗಳತೆಯ ಬೈಪಾಸ್ ರಸ್ತೆಯ ಬಡಾವಣೆಗೆ ತೆರಳಲು ವೀರಾಜಪೇಟೆ ಕಡೆಯಿಂದ ಬರುವ ವಾಹನಗಳು ಬಸ್ ನಿಲ್ದಾಣ ಸಮೀಪವಿರುವ ಮಸೀದಿ ರಸ್ತೆಯನ್ನು ಅವಲಂಬಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಆಟೋ ರಿಕ್ಷಾಗಳು ಬಳಸಿಕೊಂಡು ಸಂಚಾರ ಮಾಡಬೇಕಾದ ಕಾರಣದಿಂದ ಗ್ರಾಹಕರಿಗೆ ಬೈಪಾಸ್ ರಸ್ತೆಯ ಆಗಲೀಕರಣಕ್ಕೆ ಶಾಸಕರ,ಜಿಲ್ಲಾ ಪಂಚಾಯಿತಿ ಅನುದಾನವನ್ನು ವಿನಿಯೋಗಿಸಿ ರಸ್ತೆ ಅಗಲೀಕರಣ ಮಾಡಲಾಗುವದು. ಈ ರಸ್ತೆಯಲ್ಲಿಯೇ ಎರಡು ಕಡೆಯಿಂದ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವದು. ಏಕಮುಖ ಸಂಚಾರದಿಂದ ಮುಖ್ಯ ರಸ್ತೆಯಲ್ಲಿ ಒಂದಷ್ಟು ವಾಹನ ದಟ್ಟಣೆ ಕಡಿಮೆಯಾಗಿದೆ. ಏಕಮುಖ ಸಂಚಾರ ಸಾರ್ವಜನಿಕರಿಗೆ ಅನುಕೂಲಕರವಾಗಿದೆ.
-ಸಿ.ಕೆ. ಬೋಪಣ್ಣ, ಅಧ್ಯಕ್ಷ, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ
ವಾಣಿಜ್ಯ ನಗರದಲ್ಲಿ ವಾಹನ ದಟ್ಟಣೆ ವಿಷಯದಲ್ಲಿ ಆಗಿಂದ್ದಾಗೆ ದೂರುಗಳು ಬಂದಿದ್ದವು ಈ ಹಿನ್ನೆಲೆಯಲ್ಲಿ ಹಲವು ಸಂಘ ಸಂಸ್ಥೆಯ ಮುಖಂಡರೊಂದಿಗೆ ಚರ್ಚಿಸಿ ಪ್ರಾಯೋಗಿಕವಾಗಿ ಏಕಮುಖ ಸಂಚಾರ ವ್ಯವಸ್ಥೆ ಮಾಡಿದ್ದೇವೆ. ಗೋಣಿಕೊಪ್ಪ ಠಾಣೆ ಸೇರಿದಂತೆ ಶ್ರೀಮಂಗಲ, ಪೊನ್ನಂಪೇಟೆ ಕುಟ್ಟ ಠಾಣೆಗಳಿಂದ ಪೊಲೀಸ್‍ರನ್ನು ಈ ಕಾರ್ಯಕ್ಕೆ ಬಳಸಿಕೊಂಡಿದ್ದೇವೆ. ಈಗಾಗಲೇ ಏಕಮುಖ ಸಂಚಾರದಿಂದ ತೊಂದರೆ ಆಗುತ್ತಿದೆ ಎಂದು ಮೊದಲಿನಂತೆಯೇ ಸಂಚಾರ ವ್ಯವಸ್ಥೆ ಕಲ್ಪಿಸಿ ಎಂದು ಸಾರ್ವಜನಿಕರು, ವರ್ತಕರು ಸಂಘ ಸಂಸ್ಥೆಯ ಪ್ರಮುಖರು ಮನವಿ ನೀಡಿದ್ದಾರೆ. ಸಾರ್ವಜನಿಕರಿಗೆ ತೊಂದರೆ ನೀಡುವ ಉದ್ದೇಶ ಪೊಲೀಸರದ್ದಲ್ಲ. ಪ್ರಾಯೋಗಿಕವಾಗಿ ಏಕ ಮುಖ ಸಂಚಾರ ಮಾಡಲಾಗಿದೆ. ಮುಂದೆ ಸಾಧಕ ಬಾಧಕಗಳನ್ನು ಚರ್ಚಿಸಿ ಅನುಷ್ಠಾನಕ್ಕೆ ತರುತ್ತೇವೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು.
-ದಿವಾಕರ್ ವೃತ್ತ ನಿರೀಕ್ಷಕ, ಗೋಣಿಕೊಪ್ಪ
ವರ್ತಕರ ಹಿತ ದೃಷ್ಟಿಯನ್ನು ಕಾಪಾಡುವದು ಚೇಂಬರ್‍ನ ಕರ್ತವ್ಯ ಈ ಹಿಂದೆ ಏಕಮುಖ ಸಂಚಾರಕ್ಕೆ ವರ್ತಕರು ಅನುಮೋದನೆ ನೀಡಿದ್ದರು. ಇದೀಗ ವರ್ತಕರಿಗೆ ವ್ಯಾಪಾರವಿಲ್ಲದೆ ಕಷ್ಟದಲ್ಲಿರುವದರಿಂದ ಇವರ ಸಂಕಷ್ಟದಲ್ಲಿ ಚೇಂಬರ್ ನಿಲ್ಲಬೇಕಾಗಿದೆ. ಅನೇಕ ಸಂಘ-ಸಂಸ್ಥೆಗಳು ವರ್ತಕರು ಏಕ ಮುಖ ಸಂಚಾರವನ್ನು ರದ್ದುಗೊಳಿಸುವಂತೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಚೇಂಬರ್‍ನ ಸಭೆಯಲ್ಲಿ ಚರ್ಚಿಸಿ ವರ್ತಕರ ರಕ್ಷಣೆಗೆ ನಿಲ್ಲಲಾಗುವದು.
-ಕಡೇಮಾಡ ಸುನೀಲ್ ಮಾದಪ್ಪ, ಅಧ್ಯಕ್ಷ, ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್
ಪೊನ್ನಂಪೇಟೆಯಿಂದ ತೆರಳುವ ವಾಹನಗಳು ನಗರಕ್ಕೆ ತಲಪಲು ಬೈಪಾಸ್ ರಸ್ತೆಯನ್ನು ಅವಲಂಭಿಸಬೇಕಾಗಿದೆ ಇದರಿಂದ ಇಂದನ ವೆಚ್ಚ ಸೇರಿದಂತೆ ಸಮಯವು ವ್ಯರ್ಥವಾಗುತ್ತಿದೆ. ಸರಿಯಾದ ರೀತಿಯಲ್ಲಿ ಪೊಲೀಸರು ಟ್ರಾಫಿಕ್ ಕೆಲಸ ನಿರ್ವಹಿಸಿದಲ್ಲಿ ಏಕಮುಖ ಸಂಚಾರದ ಅವಶ್ಯಕತೆ ನಗರಕ್ಕಿಲ್ಲ. ವರ್ತಕರಿಗೆ ವ್ಯಾಪಾರವಿಲ್ಲದೆ. ಕಷ್ಟದಲ್ಲಿದ್ದಾರೆ. ಒನ್‍ವೇ ಮಾಡಿದರೆ ಎಲ್ಲಾ ವಾಹನಗಳನ್ನು ಮಾಡಲಿ, ಇಲ್ಲದಿದ್ದರೆ ಅವೈಜ್ಞಾನಿಕ ರೀತಿಯಲ್ಲಿ ಮಾಡಿರುವ ಏಕಮುಖ ಸಂಚಾರದಿಂದ ನಾಗರಿಕರಿಗೆ ವಿನಾಃ ಕಾರಣ ತೊಂದರೆ ನೀಡುವದು ಸರಿಯಲ್ಲ.
-ಶ್ರೀಜಾ ಸಾಜಿ ಅಚ್ಚುತ್ತನ್, ಜಿಲ್ಲಾ ಪಂಚಾಯಿತಿ ಸದಸ್ಯ, ಪೊನ್ನಂಪೇಟೆ ಹೆಚ್ಚಿನ ಹೊರೆ ಬಿದ್ದಿದೆ. ಒಟ್ಟಾಗಿ ಏಕಮುಖ ಸಂಚಾರದಿಂದ ಮುಖ್ಯ ರಸ್ತೆಯಲ್ಲಿ ಹಲವು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ವರ್ತಕರು ದಿನನಿತ್ಯದ ವ್ಯಾಪಾರವಿಲ್ಲದೆ ಹೈರಣಾಗಿದ್ದಾರೆ. ಏಕಮುಖ ಸಂಚಾರದಿಂದ ಮುಖ್ಯ ರಸ್ತೆಯಲ್ಲಿ ವಾಹನ ನಿಲುಗಡೆಗೆ ಇದೀಗ ಕೊಂಚ ಸ್ಥಳಾವಕಾಶ ಲಭ್ಯವಾಗಿದೆ. ಆದರೆ ಗ್ರಾಹಕರು ಮಾತ್ರ ಅಂಗಡಿ ಮುಂಗಟ್ಟುಗಳಿಗೆ ಪ್ರವೇಶÀ ಮಾಡುತ್ತಿಲ್ಲ. ಇದರಿಂದ ವರ್ತಕರಿಗೆ ನಷ್ಟ ಉಂಟಾಗತೊಡಗಿದೆ. - ಹೆಚ್.ಕೆ. ಜಗದೀಶ್