ಸಿದ್ದಾಪುರ,ಜ.8: ಪ್ರತಿಭಟನೆಯ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಕರಪತ್ರ ಹಾಗೂ ಧ್ವಜಕ್ಕೆ ಬೆಂಕಿ ಇಟ್ಟು ಸುಡಲಾಗಿದೆ ಎಂದು ಪುಕಾರು ನೀಡಿದ ಮೇರೆಗೆ ಹಿಂದೂ ಪರ ಸಂಘಟನೆಯ 7 ಮಂದಿಯ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಕಳೆದೆರಡು ದಿನಗಳ ಹಿಂದೆ ಸಿದ್ದಾಪುರದಲ್ಲಿ ನೆಲ್ಯಹುದಿಕೇರಿಯ ಶ್ರೀ ಅಯ್ಯಪ್ಪ ಸೇವಾಸಮಿತಿ ವತಿಯಿಂದ ಶಬರಿ ಮಲೆಯ ಶ್ರೀ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರು ಪ್ರವೇಶ ಮಾಡಿದನ್ನು ಖಂಡಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಿದ್ದಾಪುರದ ಬಸ್ಸು ನಿಲ್ದಾಣದ ಸಮೀಪ ಹಿಂದೂಪರ ಸಂಘಟನೆಯವರು ಸಿಪಿಐಎಂ ಪಕ್ಷದ ಕರಪತ್ರ ಹಾಗೂ ಧ್ವಜಕ್ಕೆ ಬೆಂಕಿ ಇಟ್ಟು ಸುಡಲಾಗಿದೆ ಎಂದು ಸಿಪಿಐಎಂ ಪಕ್ಷದ ಕಾರ್ಯದರ್ಶಿ ಎನ್.ಡಿ ಕುಟ್ಟಪ್ಪನ್ ಸಿದ್ದಾಪುರ ಪೊಲೀಸ್ ಠಾಣೆಗೆ ಪುಕಾರು ನೀಡಿದ್ದರು. ಹಿಂದೂಪರ ಸಂಘಟನೆಯ ಪದಾಧಿಕಾರಿಗಳು ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ್ದಾರೆ ಎಂದು ನೀಡಿದ ಪುಕಾರಿನ ಮೇರೆಗೆ ಹಿಂದೂಪರ ಸಂಘಟನೆಯ ಪದಾಧಿಕಾರಿಗಳಾದ ಗುಹ್ಯ ಹಾಗೂ ನೆಲ್ಯಹುದಿಕೇರಿ ನಿವಾಸಿಗಳಾದ ಪ್ರವೀಣ್, ಮಣಿ, ರಾಜ, ನಿಖಿಲ್, ಅನಿಲ್, ಅಜೇಶ್, ರಂಜಿತ್ ಹಾಗೂ ಇತರರ ಮೇಲೆ ಕೊಲೆ ಬೆದರಿಕೆ ಸೇರಿದಂತೆ ಇನ್ನಿತರ ಪ್ರಕರಣಗಳನ್ನು ಸಿದ್ದಾಪುರ ಪೊಲೀಸರು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.