ಸೋಮವಾರಪೇಟೆ,ಜ.6: ಗ್ರಾಮೀಣ ಪ್ರದೇಶಗಳಲ್ಲಿರುವ ಜಾನಪದ ಕಲೆಗಳನ್ನು ಉಳಿಸಿ, ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಜಾನಪದ ಪರಿಷತ್‍ನ ಪ್ರಯತ್ನ ಸಾಗಿದೆ ಎಂದು ಪರಿಷತ್‍ನ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಹೇಳಿದರು.

ಪರಿಷತ್‍ನಿಂದ ಜಿಲ್ಲೆಯ ಅತ್ಯಂತ ಎತ್ತರದ ಬೆಟ್ಟವಾದ ತಡಿಯಂಡ ಮೋಳ್‍ಗೆ ಹಮ್ಮಿಕೊಳ್ಳಲಾಗಿದ್ದ ‘ಪ್ರಕೃತಿ ಅಧ್ಯಯನ ಚಾರಣ’ದಲ್ಲಿ ಅವರು ಮಾತನಾಡಿದರು.

ಜಾನಪದ ಕಲೆಗಳಿಗೆ ಪ್ರಾಕೃತಿಕ ಸೌಂದರ್ಯವೂ ತಳಹದಿಯಾಗಿದ್ದು, ಪ್ರಕೃತಿಯ ಮಡಿಲಲ್ಲಿರುವ ಅನೇಕರು ಜಾನಪದ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ಹಲವಷ್ಟು ಕಲೆಗಳು ಸಮಾಜದ ಮುಖ್ಯವಾಹಿನಿಗೆ ಬಾರದೇ ಕಲಾವಿದರೊಂದಿಗೇ ಕಣ್ಮರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿರುವ ಕಲೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಪರಿಷತ್‍ನಿಂದ ನಡೆಯುತ್ತಿದೆ ಎಂದರು.

ವೀರಾಜಪೇಟೆ ಭಾಗದಲ್ಲಿ ಹಲವಷ್ಟು ಹಾಡಿಗಳಿದ್ದು, ಹಾಡಿವಾಸಿಗಳಲ್ಲಿ ವೈವಿಧ್ಯಮಯ ಸಂಸ್ಕøತಿ, ಜಾನಪದ, ಆಚಾರ ವಿಚಾರಗಳು, ಕಲೆ, ಸಾಹಿತ್ಯಗಳಿವೆ. ಇವುಗಳನ್ನು ಸಮಾಜಕ್ಕೆ ಪರಿಚಯಿಸಿ, ಪ್ರೋತ್ಸಾಹಿಸುವ ಕಾರ್ಯವನ್ನು ಘಟಕದಿಂದ ಮಾಡಲಾಗುವದು. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಜಾನಪದ ಉತ್ಸವ ನಡೆಸುವದ ರೊಂದಿಗೆ, ಸ್ಮರಣ ಸಂಚಿಕೆಯನ್ನು ಹೊರತರಲಾಗುವದು ಎಂದರು.

ಜಿಲ್ಲಾ ಜಾನಪದ ಪರಿಷತ್‍ನ ಸುಮಾರು 30 ಮಂದಿ ಸದಸ್ಯರು, ಕಕ್ಕಬ್ಬೆ ಸಮೀಪವಿರುವ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ಕೈಗೊಂಡು, ಬೆಟ್ಟದ ಮೇಲಿರುವ ವೈವಿಧ್ಯಮಯ ಗಿಡಮರ, ಸಸ್ಯಗಳು, ವನ್ಯ ಪ್ರಾಣಿಗಳ ಬಗ್ಗೆ ಮಾಹಿತಿ ಪಡೆದರು.

ಕೊಡಗಿನ ಮೂಲ ನಿವಾಸಿಗಳು, ಆಚಾರ ವಿಚಾರಗಳು, ತಡಿಯಂಡ ಮೋಳ್ ಬೆಟ್ಟದ ವೈಶಿಷ್ಟ್ಯಗಳ ಬಗ್ಗೆ ಹಿರಿಯ ಕಲಾವಿದರಾದ ಕುಡಿಯರ ಮುತ್ತಪ್ಪ ಅವರು ಮಾಹಿತಿ ಒದಗಿಸಿದರು.

ಜಾನಪದ ಪರಿಷತ್‍ನ ಉಪಾಧ್ಯಕ್ಷ ಅಂಬೇಕಲ್ ಕುಶಾಲಪ್ಪ, ಕಾರ್ಯದರ್ಶಿ ಮುನೀರ್ ಅಹ್ಮದ್, ರವೀಂದ್ರ ರೈ, ರಮೇಶ್ ಜೋಯಪ್ಪ, ರಾಜೇಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಚಂದ್ರಮೋಹನ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್, ಜೀಸೀ ಸಂಸ್ಥೆಯ ಅಧ್ಯಕ್ಷ ಪ್ರಕಾಶ್, ಜಾನಪದ ಪರಿಷತ್‍ನ ಪದಾಧಿಕಾರಿಗಳಾದ ಕಿಗ್ಗಾಲು ಗಿರೀಶ್, ಸುಶೀಲ, ನ.ಲ. ವಿಜಯ, ಹಾ.ತಿ. ಜಯಪ್ರಕಾಶ್ ಸೇರಿದಂತೆ ಇತರರು ಈ ಸಂದರ್ಭ ಉಪಸ್ಥಿತರಿದ್ದರು.

ಹಿರಿಯ ಕಲಾವಿದರಾದ ಶೋಭಾ ಸುಬ್ಬಯ್ಯ, ಕುಡಿಯರ ಮುತ್ತಪ್ಪ ಮತ್ತು ಜಿ.ಆರ್. ಪ್ರಜ್ಞಾ ಅವರುಗಳಿಂದ ಜಾನಪದ ಗೀತೆಗಳ ಗಾಯನ ನಡೆಯಿತು.