ವೀರಾಜಪೇಟೆ, ಜ. 6: ಇಂದು ಬೆಳಗ್ಗಿನ ಜಾವ ಅಮ್ಮತ್ತಿ-ಒಂಟಿಯಂಗಡಿ ರಸ್ತೆಯಲ್ಲಿ ಅಕ್ರಮವಾಗಿ ಧೂಪ, ಅನಲ್ತಾರಿ ಹಾಗೂ ಇತರ ಕಾಡು ಜಾತಿಗೆ ಸೇರಿದ ಮರಗಳನ್ನು ಮಿನಿ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದುದನ್ನು ವೀರಾಜಪೇಟೆ ವಲಯದ ಅರಣ್ಯ ಸಿಬ್ಬಂದಿಗಳು ಧಾಳಿ ನಡೆಸಿ ಮಿನಿಲಾರಿ ಸೇರಿದಂತೆ ಅಂದಾಜು ರೂ. 3.50 ಲಕ್ಷದ ಸೊತ್ತನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿದ್ದಾರೆ. ನಾಪೋಕ್ಲುವಿನ ಸಾದಲಿ ಹಾಗೂ ಮಿನಿಲಾರಿ ಚಾಲಕ ಸಜನ ಎಂಬವರನ್ನು ಬಂಧಿಸಲಾಗಿದ್ದು, ಮಿನಿಲಾರಿಯನ್ನು (ಕೆಎ 12 ಎ 2213)ನ್ನು ಅಮಾನತ್ತು ಪಡಿಸಿಕೊಳ್ಳ ಲಾಗಿದೆ. ಸೊತ್ತನ್ನು ನಾಪೋಕ್ಲುವಿನಿಂದ ಪಿರಿಯಾಪಟ್ಟಣಕ್ಕೆ ಸಾಗಿಸುತ್ತಿರುವದಾಗಿ ತಿಳಿದು ಬಂದಿದೆ.
ವೀರಾಜಪೆಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತುರಾಜು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೋಷನಿ ಇವರ ಮಾರ್ಗದರ್ಶನದಲ್ಲಿ ಕೆ.ಪಿ. ಗೋಪಾಲ ವಲಯ ಅರಣ್ಯಾಧಿಕಾರಿ ಇವರ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿ ಕಾರಿ ಸುಬ್ರಾಯ, ಅರಣ್ಯ ರಕ್ಷಕ ಮಾಲತೇಶ ಬಡಿಗೇರ, ಚಂದ್ರಶೇಖರ್, ಅರಮಗೋಳ, ಹುಸೇನ ಮನ್ನಿಕೇರಿ, ನಾಗರಾಜ ರಡರಟ್ಟಿ, ಜೀಪು ಚಾಲಕ ಅಶೋಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.