*ಗೋಣಿಕೊಪ್ಪಲು, ಜ. 4 : ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಗೆ ಶುಕ್ರವಾರ ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು. ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿಭಾಗದ ವಿದ್ಯಾರ್ಥಿಗಳು ಒಟ್ಟಿಗೆ ಸೇರಿ ಬೆಳಗಿನ ಪ್ರಾರ್ಥನೆ ಮಾಡುವ ಮೂಲಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಕೆಪಿಎಸ್‍ಗೆ ಚಾಲನೆ ನೀಡಿದರು.

ಪ್ರಾಂಶುಪಾಲರಾದ ಎ.ಕೆ.ಪಾರ್ವತಿ ಎಲ್ಲಾ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ನಾಡಗೀತೆ ಮತ್ತು ರಾಷ್ಟ್ರಗೀತೆ ಹಾಡಿಸುವ ಮೂಲಕ 1ರಿಂದ 12 ನೇ ತರಗತಿ ವರೆಗಿನ ಒಂದೇ ಸೂರಿನಡಿಯ ಶಿಕ್ಷಣಕ್ಕೆ ಚಾಲನೆ ಒದಗಿಸಿದರು.

ಪ್ರೌಢಶಾಲೆಯ 450 ಹಾಗೂ ಪದವಿ ಪೂರ್ವ ತರಗತಿಯ 256 ವಿದ್ಯಾರ್ಥಿಗಳು ಒಟ್ಟಿಗೆ ಪ್ರಾರ್ಥನೆ ಸಲ್ಲಿಸಿದರು. ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆಯೂ ಕೂಡ ಕೆಪಿಎಸ್ ವ್ಯಾಪ್ತಿಗೆ ಒಳಪಡಲಿದೆ. ಪ್ರಾಂಶುಪಾಲರು ಇದರ ಮುಖ್ಯಸ್ಥರಾಗಿದ್ದಾರೆ. ಇದರಿಂದ 12 ನೇ ತರಗತಿವರೆಗೆ ಒಂದೇ ಕಡೆ ಶಿಕ್ಷಣ ಸಿಗಬೇಕು. ಮಧ್ಯದಲ್ಲಿ ಯಾರೂ ಶಿಕ್ಷಣವನ್ನು ಮೊಟಕು ಮಾಡಬಾರದು ಎಂಬ ಸದುದ್ದೇಶದಿಂದ ಈ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ ಎಂದು ಪ್ರಾಂಶುಪಾಲರಾದ ಪಾರ್ವತಿ ತಿಳಿಸಿದರು.

ಉಪನ್ಯಾಸಕರಾದ ಸುರೇಶ್‍ಬಾಬು, ಡಾ.ಜೆ.ಸೋಮಣ್ಣ,

ಡಾ. ರಾಜೇಂದ್ರಪಸಾದ್, ಆರ್.ರಮೇಶ್, ಸಬಿತಾ, ತಮ್ಮಯ್ಯ, ಹರೀಶ್, ಗ್ರಂಥಪಾಲಕ ಸಿದ್ದಲಿಂಗಸ್ವಾಮಿ, ಉಪನ್ಯಾಸಕಿ ನೈತ್ರಾ, ಉಪ ಪ್ರಾಂಶುಪಾಲರಾದ ಅನಿತಾ, ಶಿಕ್ಷಕರಾದ ಚಂದನಾ, ಚಿದಾನಂದ, ಮಂಜುನಾಥ್ ಹಾಜರಿದ್ದರು.

-ಎನ್.ಎನ್.ದಿನೇಶ್