ಮಡಿಕೇರಿ, ಜ. 4 : ಯೋಗ ಮತ್ತು ವ್ಯಾಯಾಮ ಮಾಡುವದರಿಂದ ಹಲವು ರೋಗಗಳಿಂದ ದೂರವಿರಬಹುದು ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.
ನಗರದ ಮಹದೇವಪೇಟೆಯ ಆಯುಷ್ ಕಚೇರಿಯ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಎಸ್.ಸಿ.ಪಿ ಮತ್ತು ಟಿಎಸ್‍ಪಿ ಉಪ ಯೋಜನೆಯಡಿ ಜಿಲ್ಲಾ ಮಟ್ಟದ ಎಸ್.ಸಿ.ಪಿ. ಆರೋಗ್ಯ ಮತ್ತು ಆಯುಷ್ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹಸಿ ತರಕಾರಿ ಮತ್ತು ಸೊಪ್ಪು ತಿನ್ನಬೇಕು. ಸ್ವಾಭಾವಿಕವಾಗಿ ದೊರೆಯುವ ಪದಾರ್ಥಗಳನ್ನು ಸೇವಿಸಬೇಕು. ಇದರಿಂದ ನರಗಳು ಚಲನ ಶೀಲತೆಯಿಂದ ಕೂಡಿರುತ್ತವೆ ಎಂದು ಅಪ್ಪಚ್ಚುರಂಜನ್ ತಿಳಿಸಿದರು.
ವೀರಾಜಪೇಟೆ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿ ಆದಷ್ಟು ಜೀರ್ಣವಾಗುವ ಆಹಾರ ಬಳಸುವಂತಾಗಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ಕೇಂದ್ರ ಮಡಿಕೇರಿ, ಕರಿಕೆ, ಬಲ್ಲಾಮವಟಿ, ಪಾರಣೆ, ವೀರಾಜಪೇಟೆ, ಶ್ರೀಮಂಗಲ, ನಲ್ಲೂರು, ತೊರೆನೂರು ಮತ್ತಿತರ ಕಡೆಗಳಲ್ಲಿ ಆಯುಷ್ ಆಸ್ಪತ್ರೆಗಳು ಇವೆ ಎಂದು ಮಾಹಿತಿ ನೀಡಿದರು. ಡಾ.ಈಶ್ವರಿ ಸ್ವಾಗತಿಸಿದರು, ಡಾ.ಅಮೂಲ್ಯ ನಿರೂಪಿಸಿದರು, ಡಾ.ಶುಭಾ ಪ್ರಾರ್ಥಿಸಿದರು, ಡಾ.ಶ್ರೀನಿವಾಸ್ ವಂದಿಸಿದರು.