ಮಡಿಕೇರಿ, ಜ.4: ಕೇರಳದ ಗಡಿಭಾಗದಿಂದ ಕೊಡಗಿನ ಮುಂಡ್ರೋಟು ಮೀಸಲು ಅರಣ್ಯಕ್ಕೆ ಬೇಟೆಗೆಂದು ತೆರಳಿದ್ದ ಟಿ.ಜೆ. ಜಾರ್ಜ್ ಎಂಬವರು ಸಂಶಯಾಸ್ಪದ ರೀತಿಯಲ್ಲಿ ಮೀಸಲು ಅರಣ್ಯದೊಳಗೆ ಡಿಸೆಂಬರ್ 11 ರಂದು ಸಾವನಪ್ಪಿದ್ದರು. ಈ ಕುರಿತು ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ದೂರು ದಾಖಲಾಗಿದ್ದು, ಯಾವದೇ ರೀತಿಯ ಬೆಳವಣಿಗೆ ಇಲ್ಲದ ಕಾರಣ ಇಂದು ಮೃತ ಟಿ.ಜೆ. ಜಾರ್ಜ್ನ ಕುಟುಂಬದವರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು ಈ ಕುರಿತಾದ ಕ್ರಿಮಿನಲ್ ಮೊಕದ್ದಮೆಯನ್ನು ಸಿಬಿಐ ತನಿಖೆಗೆ ಒಪ್ಪಿಸಲು ಕೋರಿದ್ದಾರೆ. ಲಿಖಿತ ಮನವಿಯೊಂದರಲ್ಲಿ, ಜಾರ್ಜ್ ಅವರ ಪತ್ನಿ ಸೋಫಿ, “ಜಾರ್ಜ್ರವರ ಹತ್ಯೆ ಪ್ರಕರಣದ ತನಿಖೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ನಡೆಸುತ್ತಿಲ್ಲ; ಇಲ್ಲಿಯವರೆಗೂ ಹತ್ಯೆಯ ಬಗ್ಗೆ ಯಾವ ಸುಳಿವೂ ದೊರೆತಿಲ್ಲ. ಹತ್ಯೆಗೆ ಬಳಸಲಾದ ಕೋವಿ ಕೂಡ ಅಧಿಕಾರಿಗಳಿಗೆ ದೊರೆತಿಲ್ಲ. ಈ ಹತ್ಯೆಗೆ ಸಂಬಂಧಪಟ್ಟಂತೆ ಪ್ರಧಾನ ಆರೋಪಿಗಳಾದ ಅಶೋಕನ್ ಹಾಗೂ ಚಂದ್ರನ್ ಇವರುಗಳನ್ನು ಪೊಲೀಸರು ಪ್ರಶ್ನಿಸಲೇ ಇಲ್ಲ. ಜಾರ್ಜ್ ಅವರು ಹತ್ತಿರದ ಅಂಗಡಿಯಿಂದ ಹಾಲು ತರಲು ಹೋದವರು ಮತ್ತೆ ಮನೆಗೆ ಹಿಂದಿರುಗಲಿಲ್ಲ. ಅಲ್ಲದೆ ಅವರ ಶರೀರದ ಮೇಲೆ ಇದ್ದ ಬಟ್ಟೆ ಅವರು ಮನೆಯಿಂದ ತೆರಳುವಾಗ ಧರಿಸಿದ್ದ ಬಟ್ಟೆಯಾಗಿರಲಿಲ್ಲ. ಇದು ಒಂದು ಪೂರ್ವಯೋಜಿತÀ ಹತ್ಯೆ ಪ್ರಕರಣ. ನಾವು ಸಿ.ಎಂ.ರೊಡನೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಕೋರಿದ್ದೇವೆ.” ಎಂದು ಗೋಷ್ಠಿಯಲ್ಲಿ ಮೃತನ ಕುಟುಂಬಸ್ಥರು ಅಭಿಪ್ರಾಯಪಟ್ಟರು.
ಡಿಸೆಂಬರ್ 11 ರಂದು ಜಾರ್ಜ್ ಹಾಗೂ ಅವರ ಸಂಗಡಿಗರಾದ ಅಶೋಕನ್ ಹಾಗೂ ಚಂದ್ರನ್ ಮುಂಡ್ರೋಟು ಮೀಸಲು ಅರಣ್ಯಕ್ಕೆ ಬೇಟೆಗೆಂದು ತೆರಳಿದ್ದರೆಂದು ಅಶೋಕನ್ ಹಾಗೂ ಚಂದ್ರನ್À ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನಲ್ಲಿ ಅಶೋಕನ್ ಹಾಗೂ ಚಂದ್ರನ್ ಜಾರ್ಜ್ನ ಜೊತೆಗೂಡಿ ಸ್ವಲ್ಪದೂರ ಅರಣ್ಯ ತಲುಪಿದ್ದಾಗಿ, ನಂತರ ಗುಂಡಿನ ಸದ್ದು ಕೇಳಿದ್ದು, ಅಶೋಕ್ ಹಾಗೂ ಚಂದ್ರನ್ ಹಿಂದೆಯಿದ್ದು ಮುಂದೆ ಬಂದು ನೋಡುವಷ್ಟರಲ್ಲಿ ಜಾರ್ಜ್ ರಕ್ತದ ಮಡುವಿನÀಲ್ಲಿ ಬಿದ್ದಿದ್ದು ಸಾವನ್ನಪ್ಪಿರುವದು ಗೋಚರವಾಯಿತು ಎಂದು ತಿಳಿಸಲಾಗಿದೆ. ಇದಾದನಂತರ, ಅಶೋಕನ್ ಹಾಗೂ ಚಂದ್ರನ್ ಈ ಇಬ್ಬರೂÀ ಅರಣ್ಯದೊಳಗಿನಿಂದ ತಪ್ಪಿಸಿಕೊಂಡು, ಮೊದಲು ಕೇರಳದ ಚಿತ್ತಾರಿಕಲ್ ಪೊಲೀಸ್ ಠಾಣೆಗೆ ತೆರಳಿ ಜಾರ್ಜ್ನ ಮರಣದ ಬಗ್ಗೆ ಸುಳಿವು ನೀಡಿದರು. ನಂತರ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಆದರೆ ಈವರೆಗೂ ಯಾವ ದೃಢ ಪುರಾವೆಯೂ ಈ ಪ್ರಕರಣದಲ್ಲಿ ದೊರೆತಿಲ್ಲ. “ಭಾಗಮಂಡಲ ಪೊಲೀಸರು ಅಶೋಕನ್ ಹಾಗೂ ಚಂದ್ರನ್ನನ್ನು ಪ್ರಶ್ನಿಸಿದ್ದಾರೆ. ಆದರೆ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಈ ಈರ್ವರ ವಿರುದ್ಧ ಯಾವ ರೀತಿಯ ಪುರಾವೆಯೂ ದೊರೆತಿಲ್ಲ. ಅಲ್ಲದೆ, ಕೃತ್ಯಕ್ಕೆ ಬಳಸಲಾದ ಕೋವಿಯೂ ದೊರೆತಿಲ್ಲ. ಪೊಲೀಸರು ಅಶೋಕನ್ ಹಾಗೂ ಚಂದ್ರನ್ ಇವರುಗಳÀ ಮನೆಗಳಿಗೆ ತೆರಳಿ ಕಾರ್ಯಾಚರಣೆ ನಡೆಸಿದರು. ಆದರೂ, ಈ ಇಬ್ಬರ ಮನೆಗಳಲ್ಲಿ ಪರವಾನಗಿ ಹೊಂದಿರುವ ಅಥವಾ ಅಕ್ರಮ ಕೋವಿ ದೊರೆತಿಲ್ಲ. 304 ಸೆಕ್ಷನ್ನ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಯುತ್ತಿದೆ,” ಎಂದು ಮಡಿಕೇರಿ ವಿಭಾಗದ ಡಿವೈಎಸ್ಪಿ ಸುಂದರ್ ರಾಜ್ “ಶಕ್ತಿ”ಗೆ ತಿಳಿಸಿದರು.