ಮಡಿಕೇರಿ, ಜ. 2: ಕನ್ನಡ ಚಿತ್ರರಂಗ - ‘ಸ್ಯಾಂಡಲ್‍ವುಡ್’ ನಲ್ಲಿ ಈ ತನಕ ಸದ್ದು ಮಾಡುತ್ತಿದ್ದವರು ಕೊಡಗಿನ ಬೆಡಗಿಯರೇ ಅಧಿಕ. ಚಿತ್ರರಂಗದಲ್ಲಿ ಈ ಹಿಂದಿನಿಂದ ಜಿಲ್ಲೆಯಿಂದ ಗುರುತಿಸಿ ಕೊಂಡು ಹೆಸರು ಮಾಡಿರುವವರಲ್ಲಿ ಸಣ್ಣುವಂಡ ಶಶಿಕಲಾ ರಿಂದ ಹಿಡಿದು ಹೆಸರಾಂತ ತಾರೆಯರಾದ ಪ್ರೇಮಾ, ಡೈಸಿ ಬೋಪಣ್ಣ, ನಿಧಿ ಸುಬ್ಬಯ್ಯ, ಹರ್ಷಿಕಾಪೂಣಚ್ಚ, ತಾಪಂಡ ಕೃಷಿ, ಶ್ವೇತಾ ಚಂಗಪ್ಪ, ದಿಶಾ ಪೂವಯ್ಯ ಇದೀಗ ಹೆಚ್ಚು ಪ್ರಚಾರದಲ್ಲಿರುವ ರಶ್ಮಿಕಾ ಮಂದಣ್ಣ ಹೀಗೆ ಹಲವಷ್ಟು ಯುವತಿಯರು ಗುರುತಿಸಿಕೊಂಡಿದ್ದಾರೆ. ಇದೀಗ ಇವರ ಸಾಲಿನಲ್ಲಿ ಕೊಡಗಿನ ಹುಡುಗರೂ ಚಿತ್ರರಂಗದಲ್ಲಿ ಕಾಣಿಸಿಕೊಂಡು ಹೆಸರು ಮಾಡುತ್ತಿರುªದು ವಿಶೇಷವಾಗಿದೆ.
ಕೂಲ್, ಜಸ್ಟ್‍ಮಾತ್‍ಮಾತಲ್ಲಿ, ಮಂಜುನಾಥ ಎಲ್‍ಎಲ್‍ಬಿಯಂತಹ ಚಿತ್ರಗಳು, ಇಂಡಿಯನ್, ಬಿಗ್‍ಬಾಸ್‍ನಂತಹ ರಿಯಾಲಿಟಿ ಶೋನಲ್ಲಿ ಗಮನ ಸೆಳೆದಿರುವ ಯುವ ನಟ ಉಳ್ಳಿಯಡ ಭುವನ್ ಪೊನ್ನಣ್ಣ ಇದೀಗ ನಾಯಕ ನಟನಾಗಿ ಅಭಿನಯಿಸಿರುವ ಚಿತ್ರ ‘ರಾಂಧವ’ ಈ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನವೇ ರಾಂಧವ ಹೆಚ್ಚು ಸುದ್ದಿ ಮಾಡುತ್ತಿದ್ದು, ಉಳ್ಳಿಯಡ ಪೂವಯ್ಯ ಡಾಟಿ ಪೂವಯ್ಯ ದಂಪತಿಯ ಪುತ್ರನಾದ ಭುವನ್ ಪೊನ್ನಣ್ಣ ಈ ಚಿತ್ರದಲ್ಲಿ ನಾಯಕ ನಟನಾಗಿ ಪೂರ್ಣ ಪ್ರಮಾಣದಲ್ಲಿ ಅಭಿನಯಿಸಿರುವದು ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಕೊಡಗಿನ ನಟನೊಬ್ಬ
(ಮೊದಲ ಪುಟದಿಂದ) ‘ಹೀರೋ’ ಆಗಿ ನಟಿಸಿರುವ ಈ ಚಿತ್ರದ ಬಗ್ಗೆ ಚಿತ್ರರಂಗದ ಹಲವು ಪ್ರಮುಖರು ಮೆಚ್ಚುಗೆಯ ಮಾತನ್ನಾಡಿರುವದು ವಿಶೇಷವಾಗಿದ್ದು, ಈ ಮಾಸಾಂತ್ಯದಲ್ಲಿ ರಾಂಧವ ಚಿತ್ರವನ್ನು ಬೆಳ್ಳಿಪರದೆಯಲ್ಲಿ ವೀಕ್ಷಿಸಬಹುದಾಗಿದೆ.
ಭುವನ್ ನಟನೆಯ ರಾಂಧವ ಒಂದೆಡೆಯಾದರೆ, ಇದೀಗ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸುತ್ತಿರುವ ಸೂಪರ್ ಹಿಟ್ ಚಿತ್ರವಾದ ಯಶ್ ಅಭಿನಯದ ‘ಕೆಜಿಎಫ್’ ನಲ್ಲಿ ಕೊಡಗಿನ ಇಬ್ಬರು ಖಳ ನಾಯಕರಾಗಿ ಅಭಿನಯಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಇಬ್ಬರು ವಿಲನ್‍ಗಳು ಕೊಡಗಿನವರು ಎಂಬದು ಜಿಲ್ಲೆಯ ಬಹುತೇಕ ಚಿತ್ರಪ್ರಿಯರಿಗೆ ಅರಿವಾಗಿಲ್ಲ.
ಕೆಜಿಎಫ್ ಚಿತ್ರದಲ್ಲಿ ಮುಖ್ಯ ಖಳನಾಯಕನಾಗಿ ನಟಿಸಿರುವ ಪಾತ್ರ ಧಾರಿಯ ತಮ್ಮ ಗ್ಯಾಂಗ್‍ಸ್ಟರ್ ದಯಾ ಆಗಿ ಅಭಿನಯಿಸಿರುವದು ಕುಂಜಿಲ ಗೇರಿಯವರಾದ ಕೂತಂಡ ತಾರಕ್ ಪೊನ್ನಪ್ಪ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಜ ರಾಣಿ ಸೀರಿಯಲ್‍ನಲ್ಲಿ ನಟಿಸಿರುವ ತಾರಕ್ ಪೊನ್ನಪ್ಪ ಅವರು ಇದೀಗ ಚಿತ್ರೀಕರಣವಾಗುತ್ತಿರುವ ಆವರ್ತ, ಮೋಕ್ಷ ಎಂಬ ಚಿತ್ರದಲ್ಲೂ ನಟಿಸುತ್ತಿದ್ದಾರೆ.
ಇವರೊಂದಿಗೆ ಗಾಳಿಬೀಡಿನವರಾದ ವಿನಯ್ ಬಿದ್ದಪ್ಪ ಕೂಡ ಖಳನಾಯಕ ಪಾತ್ರಧಾರಿ ‘ಗರುಡ’ನ ತಮ್ಮ ‘ವಿರಾಟ್’ ಆಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಕೊನೆಯಲ್ಲಿ ತಂದೆಯನ್ನೇ ಕೊಲ್ಲುವ ಪಾತ್ರದಲ್ಲಿ ಅಭಿನಯಿಸಿರುವ ಈ ವಿರಾಟ್ (ವಿನಯ್ ಬಿದ್ದಪ್ಪ) ಈ ಹಿಂದೆ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಮಾಸ್ಟರ್ ಪೀಸ್ ಚಿತ್ರದಲ್ಲೂ ನಟಿಸಿದ್ದಾರೆ. ಮೂಲತಃ ಹಾಕಿಪಟುವಾಗಿರುವ ವಿನಯ್ ಇದೀಗ ಚಿತ್ರರಂಗದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
ಮತ್ತೊಬ್ಬರು ಕೊಡಗಿನವರಾದ ಸಾಕಷ್ಟು ಚಿತ್ರಗಳಲ್ಲಿ ‘ವಿಲನ್’ ಆಗಿ ಅಭಿನಯಿಸಿರುವ ಕರಡದವರಾದ ಬೇಪಡಿಯಂಡ ಡ್ಯಾನಿ ಕುಟ್ಟಪ್ಪ, ಸುಮಾರು 70ಕ್ಕೂ ಅಧಿಕ ಕನ್ನಡ ಚಿತ್ರದಲ್ಲಿ ಅಭಿನಯಿಸಿರುವ ಇವರು ತಮಿಳು ಚಿತ್ರ ಬಾಹುಬಲಿ -2, ತೆಲುಗು ಚಿತ್ರ ಹಲೋ ಗುರು ಪ್ರೇಮ ಕೂಸಮೆ ಚಿತ್ರದಲ್ಲಿ ಅಭಿನಯಿಸಿದ್ದು, ಇದೀಗ ಶಿವಲಿಂಗಂ ಎಂಬ ಮತ್ತೊಂದು ತಮಿಳು ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇವರು ನಟಿಸಿರುವ ಮತ್ತೊಂದು ಚಿತ್ರ ಪರದೇಶಿ ಛಿ/o ಲಂಡನ್ ಶುಕ್ರವಾರ ತೆರೆ ಕಂಡಿದೆ. ಮತ್ತೊಬ್ಬ ಕೊಡಗಿನವರಾದ ನಟ ಜೈ ಜಗದೀಶ್ ಇವರೆಲ್ಲರಿಗಿಂತ ಚಿತ್ರರಂಗದಲ್ಲಿ ಹಿರಿಯರು. ಇವರು ಈಗಾಗಲೇ 500ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದವರಾಗಿದ್ದಾರೆ.
-ಶಶಿ ಸೋಮಯ್ಯ