ವೀರಾಜಪೇಟೆ, ಜ. 2: ಇಲ್ಲಿನ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ದೇವಸ್ಥಾನದ ಅಯ್ಯಪ್ಪ ಸೇವಾ ಸಮಿತಿಯಿಂದ ಮೂರು ದಿನಗಳ ಕಾಲ ನಡೆದ ಅಯ್ಯಪ್ಪ ಉತ್ಸವ ನಿನ್ನೆ ಮೆರವಣಿಗೆ, ಮಧ್ಯರಾತ್ರಿ ವೇಳೆ ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ಸಲ್ಲಿಸುವದರೊಂದಿಗೆ ತೆರೆ ಕಂಡಿತು.
ನಿನ್ನೆ ರಾತ್ರಿ 8 ಗಂಟೆಗೆ ಸಿದ್ದಾಪುರ ರಸ್ತೆಯಲ್ಲಿರುವ ಅಯ್ಯಪ್ಪನ ದೇವಸ್ಥಾನದಿಂದ ಮೆರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ದೀಪಾರತಿ, ಅಯ್ಯಪ್ಪ ಉತ್ಸವ ಮೂರ್ತಿ (ತಡಂಬು) ಕೇರಳದ ಚಂಡೆಮದ್ದಳೆ, ಅಯ್ಯಪ್ಪ ಚಲನ ವಲನಗಳಿರುವ ವಿಗ್ರಹ, ಕೇರಳದ ಹುಲಿಕಲ್‍ನ ವಾದ್ಯಗೋಷ್ಠಿ ಮಹಿಳೆಯರ ನೃತ್ಯ ತಂಡ ಇತರ ಮನರಂಜನಾ ತಂಡಗಳು ಭಾಗವಹಿಸಿದ್ದವು.
ಮೆರವಣಿಗೆಯು ಗಡಿಯಾರಕಂಬದ ಮುಖ್ಯ ರಸ್ತೆಯ ಮಾರ್ಗವಾಗಿ ರಾತ್ರಿ 11 ಗಂಟೆಗೆ ಮಲಬಾರ್ ರಸ್ತೆಯಲ್ಲಿರುವ ಮುತ್ತಪ್ಪ ದೇವಾಲಯಕ್ಕೆ ತಲಪಿತು. ಅಲ್ಲಿ ಮುತ್ತಪ್ಪನಿಗೆ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಹಿಂದಿರುಗಿ ಅಯ್ಯಪ್ಪ ದೇವಾಲಯಕ್ಕೆ ತಲಪಿದ ನಂತರ ಸುಬ್ರಹ್ಮಣ್ಯನಿಗೆ ಪೂಜೆ ಸಲ್ಲಿಸಲಾಯಿತು.
ವೀರಾಜಪೇಟೆಯ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರ್ ಎನ್. ಕುಮಾರ್ ಆರಾಧ್ಯ ನೇತೃತ್ವದಲ್ಲಿ ಯಾವದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.