ಮಡಿಕೇರಿ, ಜ. 2: ವಿಶ್ವದ ಯಾವದೇ ಭೂಭಾಗದಲ್ಲಿ ಲಭಿಸದ ಅಧ್ಯಾತ್ಮಿಕ ಸಾಧನೆಯ ನೆಲ ಭಾರತವಾಗಿದ್ದು, ಆ ಮಾತ್ರದಿಂದಲೇ ನಮ್ಮ ದೇಶ ಕರ್ಮಭೂಮಿ ಎಂದು ಕರೆಸಿಕೊಂಡಿದ್ದು, ಜಗತ್ತಿನ ಮನುಕುಲಕ್ಕೆ ಇಲ್ಲಿನ ಋಷಿಮುನಿಗಳ ಪರಂಪರೆಯಿಂದ ಎಲ್ಲ ಕಾಲಕ್ಕೂ ಮಾರ್ಗದರ್ಶನ ಲಭಿಸಿದೆ ಎಂದು ಉಡುಪಿ ಜಿಲ್ಲೆ ಹಂಗಾರಕಟ್ಟೆಯ ಶ್ರೀಮಠ ಬಾಳೆಕುದ್ರು ನೃಸಿಂಹಾಶ್ರಮದ ಸ್ವಾಮೀಜಿ ಅಭಿಪ್ರಾಯಪಟ್ಟರು.ಮಡಿಕೇರಿಯ ಶ್ರೀ ವಿಜಯ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿ ಪೂಜಾ ಕೈಂಕರ್ಯ ನೆರವೇರಿಸಿ, ಆಡಳಿತ ಮಂಡಳಿ ಪ್ರಮುಖರಿಗೆ ಫಲ-ಮಂತ್ರಾಕ್ಷತೆ ನೀಡಿದ ಶ್ರೀಗಳನ್ನು ‘ಶಕ್ತಿ’ ಸಂದರ್ಶಿಸಿದ ವೇಳೆ ಅವರು ಭಾರತೀಯ ಜೀವನ ಮೌಲ್ಯಗಳನ್ನು ನೆನಪಿಸಿದರು.
ಪ್ರಸಕ್ತ ವರ್ಷದಲ್ಲಿ ಆಯೋಜನೆಗೊಳ್ಳುತ್ತಿರುವ ಪ್ರಯಾಗ ಕ್ಷೇತ್ರದ ಅರ್ಧಕುಂಭ ಮೇಳದತ್ತ ಚಿತ್ತ ಹರಿಸಿದ ಅವರು, ಜಗತ್ತಿನ ಬೇರೆಲ್ಲೂ ಇಷ್ಟೊಂದು ಬೃಹತ್ ಸಂಖ್ಯೆಯ ಋಷಿಮುನಿಗಳನ್ನು ಒಳಗೊಂಡಿರುವ ಸಂತ ಪರಂಪರೆಯ ಸಮ್ಮಿಲನ ಕಾಣುವದು ಅಸಾಧ್ಯವೆಂದು ನೆನಪಿಸಿದರು. ಪುರಾಣೋಕ್ತ ಇತಿಹಾಸವಿರುವ ಈ ಕುಂಭ ಮೇಳದಲ್ಲಿ ಭಾಗವಹಿಸುವದರಿಂದ ಸಂತರು ಸೇರಿದಂತೆ ಸದ್ಭಕ್ತರ ಸಂಶಯಗಳು ನಿವಾರಣೆಗೊಂಡು ಸುಜ್ಞಾನ ಲಭಿಸುವ ನಂಬಿಕೆ ಇದೆ ಎಂದು ವ್ಯಾಖ್ಯಾನಿಸಿದರು.
ಪುರಾಣೋಕ್ತ ಕಾಲದಲ್ಲಿ ವಿಷ್ಣುವಾಹನ ಗರುಡ ಅಮೃತ ಕಲಶ ಒಯ್ಯುವಾಗ, ಪ್ರಯಾಗ, ಹರಿದ್ವಾರ, ನಾಸಿಕ್‍ನಲ್ಲಿ ಬಿದ್ದ ಬಿಂದುಗಳಿಂದ ಆ ಕ್ಷೇತ್ರಗಳು ಪಾವನಗೊಂಡು, ಇಂದಿಗೂ ಮನುಕುಲದ ಪಾಪತೊಳೆಯುತ್ತಾ, ಜ್ಞಾನಸುಧೆ ಕಲ್ಪಿಸುವಂತಾಗಿದೆ ಎಂದು ಉಲ್ಲೇಖಿಸಿದ ಸ್ವಾಮೀಜಿ ಶಂಕರಾಚಾರ್ಯರು ಈ ದಿಸೆಯಲ್ಲಿ ಪ್ರದಾನ 10 ಅಖಾಡಗಳನ್ನು ನಿರ್ಮಿಸಿ ತೀರ್ಥ ಸ್ನಾನಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾಗಿ ವಿಶ್ಲೇಷಿಸಿದರು.
ಹೆಮ್ಮೆಯ ಸಂಗತಿ: ಭಾರತದ ಸನಾತನ ಸಂತ ಪರಂಪರೆಯನ್ನು ಪ್ರತಿನಿಧಿಸುತ್ತಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ದೇಶದ ಪ್ರಧಾನಿ ನರೇಂದ್ರ ಮೋದಿ ಈ ಬಾರಿಯ ಕುಂಭ ಮೇಳಕ್ಕೆ ವಿಶೇಷ ಗಮನ ಹರಿಸಿ ವ್ಯವಸ್ಥೆ ಕಲ್ಪಿಸುತ್ತಿರುವದು ಹೆಮ್ಮೆಯ ಸಂಗತಿಯೆಂದು ನೃಸಿಂಹಾಶ್ರಮ ಶ್ರೀಗಳು ನುಡಿದರು.
ವಿಷಾದನೀಯ ಬೆಳವಣಿಗೆ: ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮರ್ಯಾಧಾ ಪುರುಷೋತ್ತಮ ಶ್ರೀರಾಮನ ಜನ್ಮಸ್ಥಳ ಅಯೋಧ್ಯಾ, ಶ್ರೀ ಕೃಷ್ಣ ಜನ್ಮಸ್ಥಳ ಮಥುರ ಹಾಗೂ ಶಿವನ ಆವಾಸ ಸ್ಥಾನ ಕಾಶಿಯಂತಹ ಪುಣ್ಯ ನಗರಿಗಳಲ್ಲಿ ಭಕ್ತ ಜನತೆಯ ಆಶಯದಂತೆ ದೇವನೆಲೆಗಳು ತಲೆಯೆತ್ತದಿರುವದು ವಿಷಾದನೀಯ ಬೆಳವಣಿಗೆ ಎಂದು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
(ಮೊದಲ ಪುಟದಿಂದ) ಮೆಕಾಲೆ ಶಿಕ್ಷಣ: ಬ್ರಿಟಿಷರು ದೇಶ ಬಿಟ್ಟು ತೊಲಗಿದರೂ, ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಇಲ್ಲಿನ ಸಂಸ್ಕøತಿ, ಪರಂಪರೆ, ರಾಷ್ಟ್ರೀಯ ಜೀವನ ಮೌಲ್ಯಗಳನ್ನು ರೂಪಿಸದೆ, ಮೆಕಾಲೆ ಶಿಕ್ಷಣ ಮುಂದುವರಿಸಿದ್ದು, ದುರಂತವೆಂದು ಬಣ್ಣಿಸಿದ ಅವರು, ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ಅವಶ್ಯಕವೆಂದು ಪ್ರತಿಪಾದಿಸುತ್ತಾ, ಆ ಮೂಲಕ ದೇಶಭಕ್ತಿ, ಹಿರಿಯರಲ್ಲಿ ಶ್ರದ್ಧೆಯೊಂದಿಗೆ ಮಕ್ಕಳಿಗೆ ಜ್ಞಾನವನ್ನು ಬೋಧಿಸುವಂತಾಗಬೇಕೆಂದು ನುಡಿದರು.
ಶಸ್ತ್ರ ಹಿಡಿದಿಲ್ಲ: ಭಾರತೀಯ ಪರಂಪರೆಯಲ್ಲಿ ಇಲ್ಲಿನ ಋಷಿಮುನಿಗಳು ಶಾಂತಿದೂತರಾಗಿ ಇತರ ದೇಶಗಳಿಗೆ ಮಾರ್ಗದರ್ಶನ ನೀಡಿದ ಇತಿಹಾಸ ನಮ್ಮದಾಗಿದ್ದು, ಇನ್ನೊಂದು ದೇಶದ ಮೇಲೆ ಶಸ್ತ್ರ ಹಿಡಿದು ಯುದ್ಧ ಮಾಡಿಲ್ಲವೆಂದು ಉಲ್ಲೇಖಿಸುತ್ತಾ, ವಿಶ್ವವನ್ನೇ ಸುಂದರ ಕುಟುಂಬದಂತೆ ಭಾವಿಸುತ್ತಾ, ಸರ್ವರಲ್ಲಿ ಹಿತವನ್ನು ಬಯಸುವವರು ನಾವೆಂದು ಹೆಮ್ಮೆಯ ನುಡಿಯಾಡಿದರು.