ಮಡಿಕೇರಿ, ಜ. 2: ಮಡಿಕೇರಿ ಕೊಡವ ಸಮಾಜದ ವತಿಯಿಂದ ಕಾರ್ಯನಿರ್ವಹಿಸಲ್ಪಡುತ್ತಿರುವ ಕೊಡಗು ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ನಿಂದ ನಿನ್ನೆ ಕೊಡವ ಸಮಾಜದ ಸಭಾಂಗಣದಲ್ಲಿ ಸೌಹಾರ್ದ ಸಹಕಾರಿ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಅಧ್ಯಕ್ಷ ಚೋವಂಡ ಡಿ. ಕಾಳಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾಗಿರುವ ಹಿರಿಯ ಸಹಕಾರಿ ಮಂಡುವಂಡ ಪಿ. ಮುತ್ತಪ್ಪ ಅವರು ಧ್ವಜಾರೋಹಣ ನೆರವೇರಿಸಿ ದರು. ಸಭಾ ಕಾರ್ಯಕ್ರಮವನ್ನು ಕೊಡವ ಸಮಾಜದ ಉಪಾಧ್ಯಕ್ಷ ಮಣವಟ್ಟಿರ ಚಿಣ್ಣಪ್ಪ ಅವರು ನೆರವೇರಿಸಿದರು.
ಅಧ್ಯಕ್ಷತೆ ವಹಿಸಿದ್ದ ಚೋವಂಡ ಡಿ. ಕಾಳಪ್ಪ ಅವರು ಸೌಹಾರ್ದ ಸಹಕಾರಿ ದಿನಾಚರಣೆಯ ಮಹತ್ವದ ಬಗ್ಗೆ, ಸೌಹಾರ್ದ ಸಹಕಾರಿ ಕಾಯ್ದೆ ಜಾರಿಗೆ ಬಂದ ಬಗ್ಗೆ ಹಾಗೂ ಸಹಕಾರಿಯ ಸ್ಥಾಪನೆಯ ಬಗ್ಗೆ ವಿವರಿಸಿದರು. ಅವುಗಳಿಂದ ಸಹಕಾರಿಯ ಸದಸ್ಯರುಗಳಿಗೆ ಆಗುವ ಅನುಕೂಲಗಳನ್ನು ವಿವರಿಸುತ್ತಾ, ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಆಗಸ್ಟ್ ತಿಂಗಳಲ್ಲಿ ಅತಿವೃಷ್ಟಿ ಹಾಗೂ ಪ್ರಕೃತಿ ವಿಕೋಪದಿಂದ ಮನೆ, ಭೂಮಿ, ಕಾಫಿ ತೋಟ ಕಳೆದುಕೊಂಡ ಸಂತ್ರಸ್ತ ಸದಸ್ಯರುಗಳನ್ನು ಸಹ ಆಹ್ವಾನಿಸಿ, ಕಳೆದ ಮಹಾಸಭೆಯ ತೀರ್ಮಾನದಂತೆ ಸದಸ್ಯರುಗಳ ಸಹಮತದೊಂದಿಗೆ 2017-18ನೇ ಸಾಲಿನ ಪೂರ್ತಿ ಡಿವಿಡೆಂಡನ್ನು ಸಂತ್ರಸ್ತ ಸಹಾಯ ನಿಧಿಯನ್ನು ಸ್ಥಾಪಿಸಿ ಸಾಲ ಪಡೆದ ಸದಸ್ಯರುಗಳ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿ ಸಾಲವನ್ನು ನವೀಕರಿಸಲು ತೀರ್ಮಾನಿಸಿ ಆಹ್ವಾನಿತ ಫಲಾನುಭವಿ ಗಳಿಗೆ ಬಡ್ಡಿ ಮನ್ನಾದ ಆದೇಶವನ್ನು ವಿತರಿಸಲಾಯಿತು.
ಫಲಾನುಭವಿ ಸದಸ್ಯ ಶಾಂತೆಯಂಡ ಪಿ. ಬೋಪಯ್ಯ ಅವರು ಕೊಡಗು ಸೌಹಾರ್ದ ಸಹಕಾರಿಯು ಸದಸ್ಯರುಗಳ ಹಿತದೃಷ್ಟಿ ಯಿಂದ ತೆಗೆದುಕೊಂಡ ತೀರ್ಮಾನ ವನ್ನು ಸಭೆಯಲ್ಲಿ ಶ್ಲಾಘಿಸಿದರು. ಎಂ.ಪಿ. ಮುತ್ತಪ್ಪ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಸಹಕಾರಿಯ ಅಭಿವೃದ್ಧಿ ಬಗ್ಗೆ ಮಾಹಿತಿಯಿತ್ತರು. ಇದೀಗ ಸಂತ್ರಸ್ತ ಸಾಲಗಾರ ಸದಸ್ಯರುಗಳ ಸಾಲದ ಮೇಲಿನ ಬಡ್ಡಿಯನ್ನು ಪರಿಹಾರ ನಿಧಿಯಿಂದ ಮನ್ನಾ ಮಾಡುತ್ತಿರುವ ದಾಗಿದೆ ಎಂಬದಾಗಿ ತಿಳಿಸುತ್ತಾ ಸಹಕಾರಿಯಲ್ಲಿ ಸಾಲದ ಸೌಲಭ್ಯವಿದ್ದು, ಠೇವಣಿ ಹೂಡುವ ವ್ಯವಸ್ಥೆಯಿದ್ದು, ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುವ ಮೂಲಕ ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದರು.
ಮುಖ್ಯ ಅತಿಥಿಯಾಗಿದ್ದ ಕೊಡವ ಸಮಾಜ ಅಧ್ಯಕ್ಷ ಕೊಂಗಾಂಡ ಎಸ್. ದೇವಯ್ಯ ಅವರು ಕೊಡಗು ಸೌಹಾರ್ದ ಸಹಕಾರಿಯು ಉತ್ತಮ ವಾಗಿ ಕಾರ್ಯನಿರ್ವಹಿಸುತ್ತಿದೆ. ಕೊಡವ ಸಮಾಜದಿಂದ ಎಲ್ಲಾ ತರಹದ ಸಹಕಾರವನ್ನು ನೀಡುವದಾಗಿ ಆಶ್ವಾಸನೆ ನೀಡಿದರು. ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಕೊಡವ ಸಮಾಜ ತೆಗೆದುಕೊಂಡ ಕಾರ್ಯಕ್ರಮ ವನ್ನು ಮತ್ತು ಕೊಡಗು ಸೌಹಾರ್ದ ಸಂಯುಕ್ತ ಸಹಕಾರಿಯು ತನ್ನ ಸಂತ್ರಸ್ತ ಸದಸ್ಯರುಗಳಿಗೆ ಸಹಾಯ ಹಸ್ತ ನೀಡಿರುವದನ್ನು ಶ್ಲಾಘಿಸಿದರು. ಸಭೆಯಲ್ಲಿ ಸಹಕಾರಿಯ ಆಡಳಿತ ಮಂಡಳಿ ಸದಸ್ಯರು, ಕೊ.ಸ. ಮಡಿಕೇರಿ ಇದರ ಆಡಳಿತ ಮಂಡಳಿ ಸದಸ್ಯ ಹಾಗೂ ಸಿಬ್ಬಂದಿಗಳು ಮತ್ತು ಸಂತ್ರಸ್ತ ಸದಸ್ಯರುಗಳು ಉಪಸ್ಥಿತರಿದ್ದರು.