ಶ್ರೀಮಂಗಲ, ಜ. 2: ಮಕ್ಕಳಲ್ಲಿ ಕೊಡವ ಸಾಹಿತ್ಯದ ಆಸಕ್ತಿ ಬೆಳೆಸುವ ಉದ್ದೇಶದಿಂದ ಕೊಡವ ತಕ್ಕ್ ಎಳ್ತ್ಕಾರಡ ಕೂಟವು ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕವನ ಹಾಗೂ ಕಥೆ ಬರೆಯುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸುವ ಸಮಾರಂಭವನ್ನು ಪೊನ್ನಂಪೇಟೆ ಸಾಯಿಶಂಕರ್ ವಿದ್ಯಾಸಂಸ್ಥೆಯ ಸಹಕಾರದಲ್ಲಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಮಾತನಾಡಿ ಯಾವದೇ ಕಲಿಕೆಯು ಪ್ರಾಥಮಿಕ ಹಂತದಿಂದಲೆ ಆರಂಭವಾದರೆ ಮುಂದಿನ ಬೆಳವಣಿಗೆ ಸುಲಭ ಸಾಧ್ಯ. ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಿದರೆ ಮುಂದೆ ಕೊಡವ ಸಾಹಿತ್ಯದ ಬೆಳವಣಿಗೆಗೆ ಲೇಖಕರ ಕೊರತೆ ಇರುವದಿಲ್ಲ. ಆ ಕಾರಣಕ್ಕಾಗಿ ದಾನಿಗಳಾದ ಕೈಬಿಲೀರ ಪಾರ್ವತಿ ಬೋಪಯ್ಯ ಅವರು ತಮ್ಮ ಪತಿ ದಿ. ಕೈಬಿಲೀರ ಬೋಪಯ್ಯ ಅವರ ಜ್ಞಾಪಕಾರ್ಥ ‘ಕೂಟ’ದಲ್ಲಿ ಸ್ಥಾಪಿಸಿರುವ ದತ್ತಿ ನಿಧಿಯಲ್ಲಿ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಕವನ ಬರೆಯುವ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 500 ಶಬ್ಧಗಳಿಗೆ ಮೀರದಂತೆ ಕಥೆ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ನೀಡಲಾಯಿತು ಎಂದರು.
ಈ ಸಂದರ್ಭ ದತ್ತಿನಿಧಿಯ ಪ್ರಾಯೋಜಕರಾದ ಕೈಬಿಲೀರ ಪಾರ್ವತಿ ಬೋಪಯ್ಯ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಪಠ್ಯ ಕಲಿಕೆಯೊಂದಿಗೆ ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಲು ಉತ್ತಮ ಲೇಖಕರ ಲೇಖನಗಳನ್ನು ಹೆಚ್ಚು ಹೆಚ್ಚು ಓದಿ ಮನನ ಮಾಡಿಕೊಳ್ಳಬೇಕು. ಆರಂಭದಲ್ಲಿ ಬೇರೆ ಭಾಷೆಯಿಂದ ತರ್ಜುಮೆ ಮಾಡಿ ಕಲಿಯಬೇಕು. ನಂತರ ಸ್ವತಂತ್ರವಾಗಿ ಬರೆಯಲು ಆರಂಭಿಸಬೇಕು. ಯಾವದೆ ಕಾರಣಕ್ಕೂ ಹಿಂಜರಿಯದೆ ಮಕ್ಕಳು ಈಗಿನಿಂದಲೆ ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದರು. ಜೊತೆಗೆ ತಂದೆ ತಾಯಿಗೆ ಕಷ್ಟ ನೀಡದೆ ಓದಿದ ಶಾಲೆ, ಪೋಷಕರು ಹಾಗೂ ನಾಡಿಗೆ ಕೀರ್ತಿ ತರಲು ಪ್ರಯತ್ನಿಸಿ ಎಂದು ಕರೆ ನೀಡಿದರು.
ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕವನ ಬರೆಯುವ ಸ್ಪರ್ಧೆಯಲ್ಲಿ ಗೋಣಿಕೊಪ್ಪ ಲಯನ್ಸ್ ವಿದ್ಯಾಸಂಸ್ಥೆಯ ಚೆಟ್ಟಂಗಡ ಕೆ. ಕಂಚನ್ ಕಮಲಾಕ್ಷಿ ಪ್ರಥಮ, ಮಡಿಕೇರಿ ಜನರಲ್ ತಿಮ್ಮಯ್ಯ ವಿದ್ಯಾಸಂಸ್ಥೆಯ ಹಂಚೆಟ್ಟಿರ ದಿಯಾ ದೇಚಮ್ಮ ದ್ವಿತೀಯ, ಟಿ. ಶೆಟ್ಟಿಗೇರಿ ರೂಟ್ಸ್ ವಿದ್ಯಾಸಂಸ್ಥೆಯ ಚಿಮ್ಮಚ್ಚಿರ ತೇಜಸ್ ದೇವಯ್ಯ, ಗೋಣಿಕೊಪ್ಪ ಲಯನ್ಸ್ ವಿದ್ಯಾಸಂಸ್ಥೆಯ ಚೆಟ್ಟಂಗಡ. ಕೆ. ಕೀರ್ತನ್ ಕಾವೇರಮ್ಮ ಹಾಗೂ ಪೊನ್ನಂಪೇಟೆ ಸಾಯಿಶಂಕರ್ ವಿದ್ಯಾಸಂಸ್ಥೆಯ ಕಾಳಪಂಡ ಶಿವಾನಿ ಬೋಜಮ್ಮ ತೃತೀಯ ಬಹುಮಾನ ಪಡೆದುಕೊಂಡರು.
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕಥೆ ಬರೆಯುವ ಸ್ಪರ್ಧೆಯಲ್ಲಿ ಮಡಿಕೇರಿ ಜನರಲ್ ತಿಮ್ಮಯ್ಯ ವಿದ್ಯಾಸಂಸ್ಥೆಯ ಚೆಟ್ಟೀರ ಗ್ರಂಥ ಕಾರ್ಯಪ್ಪ ಪ್ರಥಮ, ಸಾಯಿಶಂಕರ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರಾದ ಎ.ಪಿ. ಮೋನಿಷ ದ್ವಿತೀಯ, ವಿಶ್ಮ ಹಾಗೂ ಸಿ.ಎಸ್. ಮೋನಿಕ ತೃತೀಯ ಸ್ಥಾನ ಪಡೆದುಕೊಂಡರು.
ಈ ಸಂದರ್ಭ ವೇದಿಕೆಯಲ್ಲಿ ಸಾಯಿಶಂಕರ್ ವಿದ್ಯಾಸಂಸ್ಥೆಯ ಅಧ್ಯಕ್ಷ ಕೋಳೇರ ಝರು ಗಣಪತಿ, ಉದÀ್ಯಮಿ ಮಂಡೀರ ವಿವೇಕ್ ಚೆಂಗಪ್ಪ, ಚೊಟ್ಟೆಯಾಂಡಮಾಡ ಸುಜಿತ್ ಅಪ್ಪಣ್ಣ, ಚೊಟ್ಟೆಯಾಂಡಮಾಡ ಲಲಿತ ಕಾರ್ಯಪ್ಪ, ‘ಕೊಡವ ತಕ್ಕ್ ಎಳ್ತ್ ಕಾರಡ ಕೂಟ’ದ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚೆಂಗಪ್ಪ, ಸಹಕಾರ್ಯದರ್ಶಿ ಬೊಜ್ಜಂಗಡ ನಿತಿನ್ ನಂಜಪ್ಪ, ನಿರ್ದೇಶಕ ಕಾಳಿಮಾಡ ಮೋಟಯ್ಯ ಉಪಸ್ಥಿತರಿದ್ದರು.