ಭಾಗಮಂಡಲ, ಜ. 1: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಚೇರಂಬಾಣೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಚೇರಂಬಾಣೆ, ಕೋಪಟ್ಟಿ, ಬೇಂಗೂರು ಮತ್ತು ಕೊಳಗದಾಳು ಗ್ರಾಮಗಳನ್ನು ಕಸ್ತೂರಿ ರಂಗನ್ ವರದಿಯಿಂದ ಹೊರಗಿಡುವಂತೆ ಈ ಸಂದರ್ಭ ಒತ್ತಾಯಿಸಿದರು.

ಮಡಿಕೇರಿ - ಭಾಗಮಂಡಲ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ತೆರಳಿದ ಪ್ರತಿಭಟನಾಕಾರರು ಕಸ್ತೂರಿ ರಂಗನ್ ವರದಿ ವಿರುದ್ಧ ಘೋಷಣೆ ಕೂಗಿದ್ದರು. ವರದಿ ಜಾರಿಗೆ ಪ್ರಯತ್ನಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು. ಸೇವ್ ಕೊಡಗು ಫೋರಂ ಸಂಚಾಲಕ ಮಧು ಬೋಪಣ್ಣ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಯಾದರೆ ಕೊಡಗಿನ ರೈತರು ಬಹಳ ಕಷ್ಟಪಡಬೇಕಾಗುತ್ತದೆ ಎಂದು ಹೇಳಿದರು. ವರದಿಯಲ್ಲಿ ಜನರ ಚಟುವಟಿಕೆಗಳ ಮೇಲೆ ಬಹಳಷ್ಟು ನಿರ್ಬಂಧ ಹೇರಲಾಗಿದ್ದು ಇದು ಜಿಲ್ಲೆಯ ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬೆರಳೆಣಿಕೆಯ ನಕಲಿ ಪರಿಸರ ವಾದಿಗಳಿಂದಾಗಿ ಜಿಲ್ಲೆಯ ಅಭಿವೃದ್ಧಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ, ಮನು ಮುತ್ತಪ್ಪ, ಪರಿಸರವಾದಿಗಳ ಕರ್ನಲ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 1956ರಲ್ಲಿ ಕೊಡಗನ್ನು ಕರ್ನಾಟಕ ರಾಜ್ಯಕ್ಕೆ ಮಾರಾಟ ಮಾಡಿದಂತಹ ವ್ಯಕ್ತಿಗಳ ಮಕ್ಕಳಿಂದ ನಾವು ಪರಿಸರ ಸಂರಕ್ಷಣೆ ಬಗ್ಗೆ ಪಾಠ ಕಲಿಯಬೇಕಿಲ್ಲ ಎಂದು ಟೀಕಿಸಿದರು.

ಮುಂದಿನ ದಿನಗಳಲ್ಲಿ ಗೋಣಿಕೊಪ್ಪದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಬೃಹತ್ ಹೋರಾಟ ಸಂಘಟಿಸಲಾಗುತ್ತದೆ ಎಂದು ಅವರು

ಇದೇ ಸಂದರ್ಭ ಮಾಹಿತಿ ನೀಡಿದರು. ಪ್ರತಿಭಟನೆಯಲ್ಲಿ ಅಯ್ಯಂಡ ಸತೀಶ್ ಬೆಳ್ಳ್ಯಪ್ಪ, ರೈತ ಹೋರಾಟ ಸಮಿತಿ ಮುಖ್ಯಸ್ಥ ಪಾಣತ್ತಲೆ ವಿಶ್ವನಾಥ್, ಬೇಂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಡಿ. ಅಶೋಕ್, ತಾಲೂಕು ಪಂಚಾಯಿತಿ ಸದಸ್ಯ ದಬ್ಬಡ್ಕ ಶ್ರೀಧರ್, ಎಪಿಎಂಸಿ ಸದಸ್ಯ, ಮೇದಪ್ಪ, ಸೇರಿದಂತೆ ಹಲವರು ಭಾಗವಹಿಸಿದ್ದರು.