ಮಡಿಕೇರಿ, ಜ. 1: ಕೊಡಗು ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ ಮನೆ ಕಟ್ಟಿಕೊಳ್ಳಲು ಕಲ್ಲು ಅಥವಾ ಮರಳು ಸಿಗದಂತಹ ಪರಿಸ್ಥಿತಿ ಒಂದೆಡೆ ಯಾದರೆ, ಹೊರಗಿನ ಮಂತ್ರಿಗಳ ಮಕ್ಕಳು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಮೂಗಿನಡಿ ದಂಧೆ ನಡೆಸುತ್ತಿದ್ದಾರೆ ಎಂದು ಜಿ.ಪಂ. ಸಾಮಾನ್ಯ ಸಭೆಯಲ್ಲಿ ಸ್ಥಳೀಯ ಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಇಂತಹ ದಂಧೆಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ.ಸ್ವತಃ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹಾಗೂ ಕಾಂಗ್ರೆಸ್ ಸದಸ್ಯೆ ಕೆ.ಪಿ. ಚಂದ್ರಕಲಾ ಅವರುಗಳು ಅಕ್ರಮ ಕಲ್ಲುಕೋರೆ ಗಳೊಂದಿಗೆ ಗಣಿಗಾರಿಕೆ ಮತ್ತು ಮರಳು ದಂಧೆ ಬಗ್ಗೆ ಪ್ರಸ್ತಾಪಿಸುತ್ತಾ, ಇಂತಹ ದಂಧೆಯಿಂದ ಇಲಾಖಾ ಮಂದಿ ಹಣಗಳಿಕೆಯಲ್ಲಿ ತೊಡಗಿದ್ದರೆ, ರಾಜ್ಯದ ಮಂತ್ರಿಗಳ ಮಕ್ಕಳು ಎಗ್ಗಿಲ್ಲದೆ ಕೊಡಗಿನ ಮೂಲಕ ಮರಳು ಸಾಗಾಟದಲ್ಲಿ ತೊಡಗಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.ನಿನ್ನೆ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಚಂದ್ರಕಲಾ ಮಾತಿಗೆ ಧ್ವನಿಗೂಡಿಸಿದ ಲೋಕೇಶ್ವರಿ ಗೋಪಾಲ್, ಸಂಬಂಧಿಸಿದ ಅಧಿಕಾರಿ ಯನ್ನು ತರಾಟೆಗೆ ತೆಗೆದುಕೊಂಡರು.
ರಾತ್ರಿ ವೇಳೆ ಜಿಲ್ಲೆಯ ಹಲವೆಡೆಗಳಿಂದ ಲಾರಿ ಲಾರಿಗಳಲ್ಲಿ ಮರಳು ಸಾಗಾಟಗೊಳ್ಳುತ್ತಿದ್ದರೆ, ಈ ಅಕ್ರಮ ದಂಧೆಯಲ್ಲಿ ಪೊಲೀಸರ ಸಹಿತ ಎಲ್ಲ ಇಲಾಖಾ ಮಂದಿ ಶಾಮಿಲಾಗಿರುವ ಶಂಕೆ ಇದೆ ಎಂದು ಚಂದ್ರಕಲಾ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಲೋಕೇಶ್ವರಿ ಗೋಪಾಲ್, ಮನೆ ಕಟ್ಟಲು ಅಥವಾ ರಿಪೇರಿ ಕೆಲಸಗಳಿಗೆ ರೈತ ತನ್ನ ಪಿಕಪ್ ವಾಹನದಲ್ಲಿ ಮರಳು ಸಾಗಿಸಿದರೆ ಪೊಲೀಸ್ ಮೊಕದ್ದಮೆ ದಾಖಲಿಸಿ, ವಾಹನ ಸಹಿತ ಮರಳು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರಿಗಳು, ಲಾರಿಗಟ್ಟಲೆ ಮರಳು ಸಾಗಾಟಕ್ಕೆ ಹೇಗೆ ಅವಕಾಶ ಕಲ್ಪಿಸುತ್ತೀರಿ? ಎಂದು ಪ್ರಶ್ನಿಸಿದರು.
ಅಧಿಕಾರಿಗೆ ಸವಾಲು: ಈ ವೇಳೆ ಸದಸ್ಯರುಗಳಾದ ಶಶಿ ಸುಬ್ರಮಣಿ, ಮಹೇಶ್ ಗಣಪತಿ, ಪ್ರಥ್ವಿ, ಸಿ.ಕೆ. ಬೋಪಣ್ಣ ಅಸಮಾಧಾನ ವ್ಯಕ್ತಪಡಿಸುತ್ತಾ,
(ಮೊದಲ ಪುಟದಿಂದ) ಈ ರಾತ್ರಿಯೇ ಮರಳು ಲಾರಿಗಳನ್ನು ಹಿಡಿದು ನಿಲ್ಲಿಸುತ್ತೇವೆ, ಯಾವ ರೀತಿ ಕ್ರಮ ಜರುಗಿಸುತ್ತೀರಿ? ಎಂದು ಸವಾಲು ಎಸೆದರಲ್ಲದೆ, ಅಕ್ರಮ ದಂಧೆಗೆ ಕಡಿವಾಣ ಹಾಕುವಂತೆ ಆಗ್ರಹಪಡಿಸಿದರು.
ಎಲ್ಲಿಗೆ ಹೋಗಬೇಕು: ನಮಗೆ ಜೆಲ್ಲಿ ಅಥವಾ ಮರಳು ಬೇಕಾದರೆ ಎಲ್ಲಿಗೆ ಹೋಗಬೇಕು? ನೀವೇ ಹೇಳಿ ಎಂದು ಇಲಾಖೆಯ ಅಧಿಕಾರಿಯನ್ನು ಪ್ರಶ್ನಿಸಲಾಗಿ, ಕಲ್ಲುಕೋರೆ ಅಥವಾ ನದಿ ತಟಗಳಲ್ಲಿ ದಾಸ್ತಾನು ಸಿಗಲಿದೆ ಎಂಬ ಉತ್ತರ ಬಂದಾಗ ಇಡೀ ಸಭೆ ನಗೆಗಡಲಲ್ಲಿ ತೇಲಿತು. ಮರುಕ್ಷಣ ಕೆರಳಿದ ಸದಸ್ಯೆ ಚಂದ್ರಕಲಾ, ಅಧಿಕಾರಿಗಳು ದಂಧೆಯಲ್ಲಿ ತೊಡಗಿರುವದಕ್ಕೆ ಇದೊಂದು ತಾಜಾ ಉದಾಹರಣೆ ಎಂದು ಮಾತಿನ ಚಾಟಿ ಬೀಸಿದರು.
ಮುಂದುವರಿದು ಜಿಲ್ಲೆಯ ಐಎಎಸ್ ಅಧಿಕಾರಿಗಳು ಪರಿಸರವಾದಿಗಳ ಅಣತಿಯಂತೆ ನಡೆಯುತ್ತಿರುವ ಪರಿಣಾಮ ಕೊಡಗಿಗೆ ಈ ಗತಿ ಬರುವಂತಾಗಿದೆ ಎಂದು ಟೀಕಿಸುತ್ತಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೇ, ಈ ಜಿಲ್ಲೆಯ ಜನಹಿತ ಗಮನದಲ್ಲಿ ಇರಿಸಿಕೊಂಡು ಅದಕ್ಕೆ ತಕ್ಕಂತೆ ನಡೆದುಕೊಳ್ಳಲು ಜಿಲ್ಲಾಧಿಕಾರಿ ಗಮನಕ್ಕೆ ತನ್ನಿ ಎಂದರು.
ಕೋಟಿ ಹಣಕ್ಕೆ ಲೆಕ್ಕ ಕೊಡಿ: ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕೆ ಕೇಂದ್ರ ಹಾಗೂ ರಾಜ್ಯ ವಲಯದಿಂದ ಕೋಟಿಗಟ್ಟಲೆ ಹಣ ಬಿಡುಗಡೆಯಾಗಿದ್ದು, ಆ ಜನಾಂಗದ ಫಲಾನುಭವಿಗಳಿಗೆ ಯಾವ ರೀತಿ ನೆರವು ಕಲ್ಪಿಸಲಾಗಿದೆ ಎಂಬ ಕುರಿತು ವಿವರ ಒದಗಿಸುವಂತೆ ಸದಸ್ಯರು ಒತ್ತಾಯಿಸಿದರು. ಈ ಬಗ್ಗೆ ಲೆಕ್ಕ ಒದಗಿಸಲು ಅಧ್ಯಕ್ಷರು ಸೂಚಿಸಿದರು.
ಸಹಾಯಧನ ವಂಚನೆ: ಕೃಷಿ ಹಾಗೂ ತೋಟಗಾರಿಕೆ ಮತ್ತು ಪಶು ಸಂಗೋಪನಾ ಇಲಾಖೆಗಳಿಂದ ಪರಿಶಿಷ್ಟ ಜಾತಿ ಮತ್ತು ವರ್ಗ ಸೇರಿದಂತೆ ಇತರ ಕೃಷಿಕ ಸಮುದಾಯಕ್ಕೆ ಲಭಿಸುವಂತಹ ಯಾವದೇ ಸಹಾಯಧನ ದೊರಕುತ್ತಿಲ್ಲ ಎಂದು ಸದಸ್ಯೆ ಪಂಕಜ ಅಸಮಾಧಾನ ತೋಡಿಕೊಂಡರು. ಇತರ ಸದಸ್ಯರು ದನಿಗೂಡಿಸಿ ಇಲಾಖೆಗಳಿಂದ ಲಭಿಸುವ ಟಾರ್ಪಾಲುಗಳು, ಕೃಷಿ ಉಪಕರಣಗಳ ದರವು ಸಹಾಯಧನ ಹೊರತಾಗಿಯೂ, ಬೆಂಗಳೂರು-ಮೈಸೂರುಗಳಲ್ಲಿ ತೀರಾ ಅಗ್ಗದಲ್ಲಿ ಲಭ್ಯವಿದೆ ಎಂದು ಬೊಟ್ಟು ಮಾಡಿದರು.
ಹಣ ಬಿಡುಗಡೆಗೊಳಿಸಿಲ್ಲ: ಪ್ರಾಕೃತಿಕ ವಿಕೋಪ ಸಂದರ್ಭ ಜಿಲ್ಲೆಯ ಸಂಪರ್ಕ ರಸ್ತೆಗಳನ್ನು ಸ್ಥಳೀಯ ಗುತ್ತಿಗೆದಾರರನ್ನು ಬಳಸಿಕೊಂಡು ತುರ್ತು ದುರಸ್ತಿಗೊಳಿಸಲಾಗಿದೆ. ಈ ಕಾಮಗಾರಿ ಹಣ ಬಿಡುಗಡೆಗೊಳಿಸಿಲ್ಲ. ಬದಲಾಗಿ ಮುಂದುವರಿದ ಕೆಲಸವನ್ನು ಕೆ.ಆರ್. ನಗರ ಮತ್ತು ಹಾಸನ ಮಂದಿಗೆ ಕಲ್ಪಿಸಲಾಗಿದೆ ಎಂಬ ಆಕ್ರೋಶ ವ್ಯಕ್ತವಾಯಿತು. ಆ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆಯುವದಾಗಿ ಅಧಿಕಾರಿ ಲಕ್ಷ್ಮೀಪ್ರಿಯ ಪ್ರತಿಕ್ರಿಯಿಸಿದರು.
ಕವಡೆ ಕಿಮ್ಮತ್ತಿಲ್ಲ: ಜಿಲ್ಲೆಯಲ್ಲಿ 48 ಗಂಟೆಯೊಳಗೆ ಭತ್ತ ಖರೀದಿ ವ್ಯವಸ್ಥೆ ಕಲ್ಪಿಸುವದಾಗಿ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವರು ನೀಡಿದ್ದ ಆಶ್ವಾಸನೆ ಹುಸಿಯಾಗಿದೆ; ಈ ಸಂಬಂಧ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮದ ಭರವಸೆ ಜಾರಿಯಿಲ್ಲ. ಕೊಡವ ಹೆರಿಟೇಜ್ ಸಂಬಂಧ ತಪ್ಪಿತಸ್ಥ ಅಧಿಕಾರಿ ವಿರುದ್ಧವೂ ಕ್ರಮಕೈಗೊಳ್ಳದೆ, ಸಚಿವರ ಮಾತಿಗೂ ಕವಡೆ ಕಿಮ್ಮತ್ತು ಇಲ್ಲವಾಗಿದೆ ಎಂದು ಸದಸ್ಯರುಗಳು ಅಸಮಾಧಾನÀ ತೋಡಿಕೊಂಡರು.
ಸರಕಾರವೇ ಕಾರಣ: ಕೃಷಿ ಇಲಾಖೆ ನೀಡಿರುವ ಬಿತ್ತನೆಯ ಬೀಜದಿಂದ ಬೆಳೆದ ಭತ್ತ ಖರೀದಿಸುವವರಿಲ್ಲ, ಹುಲ್ಲು ಮಾರಾಟಕ್ಕೆ ನಿರ್ಬಂಧವಿದೆ; ಕೃಷಿ ಉಪಕರಣಗಳ ಸಹಾಯಧನದಲ್ಲೂ ಮೋಸ ನಡೆಯುತ್ತಿದೆ, ಈ ಪರಿಸ್ಥಿತಿಯಿಂದ ಕೊಡಗಿನಲ್ಲಿ ಭತ್ತದ ಗದ್ದೆಗಳು ಪಾಳು ಬಿಡಲು ಸರಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ಕಾರಣರಾಗಿದ್ದಾರೆ ಎಂದು ಸಭೆ ಅಸಮಾಧಾನ ವ್ಯಕ್ತಪಡಿಸಿತು.
ಒಟ್ಟಿನಲ್ಲಿ 2018ರ ಡಿ. 31 ರಂದು ಜರುಗಿದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಸರಿಸುಮಾರು ಏಳು ತಾಸುಗಳ ಸುದೀರ್ಘ ಚರ್ಚೆಯೊಂದಿಗೆ, ಜಿ.ಪಂ. ಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರಗಳ ಜನತೆಯ ಸಮಸ್ಯೆಗಳತ್ತ ದನಿಯೆತ್ತಿದರಾದರೂ, ಅಧಿಕಾರಿಗಳು ಸ್ಪಂದಿಸುವ ಆಶ್ವಾಸನೆ ನೀಡಿದ್ದು, ಯಾರಿಗೂ ತೃಪ್ತಿ ನೀಡಲಿಲ್ಲ. ಕಾರಣ ಹಿಂದಿನ ಪ್ರತಿಯೊಂದು ತ್ರೈಮಾಸಿಕ ಸಭೆಗಳಲ್ಲಿ ಇದೇ ಭರವಸೆ ಹೊರತು ಯಾವದೂ ಕಾರ್ಯಗತವಾಗಿಲ್ಲ ಎಂಬ ಅಸಮಾಧಾನದೊಂದಿಗೆ ನಿನ್ನೆಯ ಸಭೆ ಮುಕ್ತಾಯಗೊಂಡಿತು.