*ಗೋಣಿಕೊಪ್ಪಲು, ಜ. 2 : ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ಸಾಕಾನೆ ಶಿಬಿರದ ಮರಿಯಾನೆ ಸಹದೇವ (7) ಮಂಗಳವಾರ ಮೃತಪಟ್ಟಿತು. ನಾಲ್ಕೈದು ತಿಂಗಳಿನಿಂದ ಸಹದೇವ ಆನೆ ಧನುರ್ವಾಯು ಕಾಯಿಲೆಯಿಂದ ಬಳಲುತ್ತಿತ್ತು ಎನ್ನಲಾಗಿದೆ. ಮೈಸೂರು ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದ ಮೇರಿ ಆನೆಯಿಂದ ಜನಿಸಿದ್ದ ಸಹದೇವ ಮತ್ತಿಗೋಡು ಶಿಬಿರದಲ್ಲಿ ಬೆಳೆದಿತ್ತು.ಕಾಯಿಲೆ ಗುಣಪಡಿಸಲು ಹುಣಸೂರು ವನ್ಯ ಜೀವಿ ವಿಭಾಗದ ವೈದ್ಯಾಧಿಕಾರಿ ಮುಜೀಬ್ ರೆಹಮಾನ್ ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕ್ಷೇತ್ರ ನಿರ್ದೇಶಕ ನಾರಾಯಣ ಸ್ವಾಮಿ ತಿಳಿಸಿದ್ದಾರೆ. ಎಸಿಎಪ್ ಪ್ರಸನ್ನಕುಮಾರ್, ಆರ್‍ಎಫ್‍ಒ ಶಿವಾನಂದ್ ವೈದ್ಯಾಧಿಕಾರಿ ಮೂಲಕ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಅಂತ್ಯ ಸಂಸ್ಕಾರ ನಡೆಸಿದರು.

- ಎನ್.ಎನ್.ದಿನೇಶ್