ಮಡಿಕೇರಿ, ಜ. 2: ಕ್ಷಯ ರೋಗವನ್ನು ಪತ್ತೆ ಹಚ್ಚಿ 2023ರ ವೇಳೆಗೆ ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ತಿಳಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಸಭಾಂಗಣದಲ್ಲಿ ಬುಧವಾರ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರವನ್ನು 2025 ರ ವೇಳೆಗೆ ಕ್ಷಯರೋಗ ಮುಕ್ತ ದೇಶವನ್ನಾಗಿ ಮಾಡುವ ಉದ್ದೇಶದಿಂದ ಎರಡನೇ ಸುತ್ತಿನ ಸಕ್ರಿಯ ಕ್ಷಯರೋಗ ಆಂದೋಲನವನ್ನು ಜಿಲ್ಲೆಯಾದ್ಯಂತ ತಾ. 2 ರಿಂದ 12 ರವರೆಗೆ ಕ್ಷಯರೋಗ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 606829 ಜನ ಸಂಖ್ಯೆಯಿದ್ದು, ಅವುಗಳಲ್ಲಿ ರಾಜ್ಯ ಕ್ಷಯರೋಗದ ಮಾರ್ಗ ಸೂಚಿಯನ್ವಯ ಶೇ.20 ರಿಂದ 25 ರಷ್ಟು ಜನ ಸಂಖ್ಯೆಯನ್ನು ದುರ್ಬಲ ಮತ್ತು ಹಿಂದುಳಿದ ಪ್ರದೇಶ ಮತ್ತು ಉದ್ದೇಶಿತ ಜನಸಂಖ್ಯೆಯನ್ನು ಗುರುತಿಸಬೇಕಾಗಿದೆ. ಆದರೆ ಜಂಟಿ ನಿರ್ದೇಶಕರ ಸೂಚನೆಯಂತೆ ಜಿಲ್ಲೆಯ ಮಡಿಕೇರಿ ಕ್ಷಯರೋಗ ಚಿಕಿತ್ಸಾ ಘಟಕವನ್ನು ಪೂರ್ಣ ಪ್ರಮಾಣದಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ನಡೆಸಲು ಆಯ್ಕೆ ಮಾಡಲಾಗಿದೆ.
ಸುಮಾರು 1,72,431 ಮಂದಿಯನ್ನು ಆಯ್ದುಕೊಳ್ಳಲಾಗಿದೆ. ಅದರಂತೆ ಉಳಿದ ಚಿಕಿತ್ಸಾ ಘಟಕಗಳಾದ ಗೋಣಿಕೊಪ್ಪ ಮತ್ತು ಕುಶಾಲನಗರದಲ್ಲಿ ಮಾರ್ಗಸೂಚಿಯಂತೆ ಉದ್ದೇಶಿತ ಜನ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ವೀರಾಜಪೇಟೆ ತಾಲೂಕಿನ 45,199 ಜನಸಂಖ್ಯೆ ಮತ್ತು ಸೋಮವಾರಪೇಟೆ ತಾಲೂಕಿನ 64,227 ಜನಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಸುಮಾರು 2,81,857 ಜನಸಂಖ್ಯೆಯನ್ನು ಆಯ್ಕೆ ಮಾಡಿ ಈ ಸಕ್ರಿಯ ಕ್ಷಯರೋಗ ಆಂದೋಲನವನ್ನು ಯಶಸ್ವಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಶಾ ಕಾರ್ಯಕರ್ತರು, ವೈದ್ಯಾಧಿಕಾರಿಗಳು, ಕಿ.ಮ.ಆ.ಸ. ಮತ್ತು ಕಿ.ಪು.ಆ.ಸ., ಹಿರಿಯ ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರುಗಳಿಗೆ ಈ ಬಗ್ಗೆ ತಾಲ್ಲೂಕುವಾರು ತರಬೇತಿಯನ್ನು ಈಗಾಗಲೇ ನೀಡಿದ್ದು, ಜಿಲ್ಲೆಯಲ್ಲಿ ಒಟ್ಟು 62 ಸಾವಿರ ಉದ್ದೇಶಿತ ಮನೆಗಳನ್ನು ಕ್ಷಯರೋಗದ ಆಂದೋಲನ ನಡೆಸಲು ತೀರ್ಮಾನಿಸಲಾಗಿದೆ ಎಂದು ನುಡಿದರು.
ಆಶಾ ಕಾರ್ಯಕರ್ತರ ತಂಡವು ಮನೆ ಮನೆಗೆ ಭೇಟಿ ನೀಡಿ ಕ್ಷಯರೋಗದ ಲಕ್ಷಣ, ಚಿಕಿತ್ಸೆ ಇವುಗಳ ಬಗ್ಗೆ ಸಮಾಲೋಚನೆ ನಡೆಸಿ ಅವಶ್ಯಪಟ್ಟ ರೋಗಿಗಳ ಕಫದ ಮಾದರಿಗಳನ್ನು ಸಹ ಸ್ಥಳದಲ್ಲಿಯೇ ಸಂಗ್ರಹಿಸಿ ಸಮೀಪದ ನಿಯೋಜಿತ ಕಫ ಪರೀಕ್ಷಾ ಕೇಂದ್ರಗಳಿಗೆ ಸಾಗಿಸಿ ಪರೀಕ್ಷೆ ನಡೆಸಲಾಗುವದು. ಕಫದಲ್ಲಿ ಕ್ಷಯರೋಗ ದೃಡಪಡದ ಶಂಕಿತ ರೋಗಿಗಳಿಗೆÀ ಕ್ಷಯ ಕಿರಣ ಪರೀಕ್ಷೆಯನ್ನು ನಡೆಸಲಾಗುವದು. ಕ್ಷಯ ಕಿರಣದಲ್ಲಿ ಕ್ಷಯರೋಗದ ಪ್ರಕರಣ ದೃಢಪಟ್ಟ ಈ ರೋಗಿಗಳ ಕಫದ ಮಾದರಿ ಸಂಗ್ರಹಿಸಿ ಸಿ.ಬಿ.ನ್ಯಾಟ್ ಯಂತ್ರದ ಮೂಲಕ ಪರೀಕ್ಷೆ ನಡೆಸಿ ರೋಗ ದೃಡಪಟ್ಟಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುವದು ಎಂದು ಹೇಳಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಶಿವಕುಮಾರ್ ಅವರು ಮಾತನಾಡಿ ಕ್ಷಯರೋಗ ದೃಢಪಟ್ಟ ಕ್ಷಯರೋಗಿಗಳಿಗೆ 2018 ನೇ ಏಪ್ರಿಲ್ ತಿಂಗಳಿನಿಂದ ಅನ್ವಯವಾಗುವಂತೆ ರೋಗಿಗಳಿಗೆ ಪೌಷ್ಠಿಕ ಆಹಾರವನ್ನು ಪಡೆದುಕೊಳ್ಳಲು ಉಪಯೋಗವಾಗುವಂತೆ ಕ್ಷಯರೋಗಿಗಳ ಚಿಕಿತ್ಸೆ ಪೂರ್ಣಗೊಳ್ಳುವವರೆಗೆ ಮಾಸಿಕ ರೂ.500 ಪ್ರೋತ್ಸಾಹ ಧನವನ್ನು ರೋಗಿಗಳ ಖಾತೆಗೆ ನೇರವಾಗಿ ನೀಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಆರ್ಸಿಎಚ್ ಅಧಿಕಾರಿ ಡಾ. ನಿಲೇಶ್, ಡಾ. ರಾಮಚಂದ್ರ ಕಾಮತ್, ಡಾ. ಮಹೇಶ್, ಆರೋಗ್ಯ ಇಲಾಖೆ ಸಿಬ್ಬಂದಿಗಳು ಇತರರು ಇದ್ದರು. ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಎಂ.ಮಹಾದೇವಪ್ಪ ಅವರು ಸ್ವಾಗತಿಸಿದರು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್ ನಿರೂಪಿಸಿ, ವಂದಿಸಿದರು.