ಮಡಿಕೇರಿ, ಡಿ. 31: ‘ಕೊಡಗಿನ ರೈತ ಬೆಳೆದಿರುವ ಭತ್ತವನ್ನು ಖರೀದಿಸುವವರಿಲ್ಲ. ಹುಲ್ಲನ್ನು ಕೂಡ ಮಾರಲು ನಿರ್ಬಂಧ, ಕಾಫಿ ಮೆಣಸು ಸಹಿತ ಎಲ್ಲದರ ಬೆಲೆ ಕುಸಿದಿದೆ, ಮನೆ ಕಟ್ಟಲು ಅವಕಾಶವಿಲ್ಲ, ಭೂ ಪರಿವರ್ತನೆ ಹೆಸರಿನಲ್ಲಿ ಸಮಸ್ಯೆ ಹುಟ್ಟು ಹಾಕಲಾಗಿದೆ. ರಸ್ತೆ ಕೆಲಸಕ್ಕೂ ಜಲ್ಲಿ, ಮರಳು ಯಾವದಕ್ಕೂ ಅವಕಾಶವಿಲ್ಲ, ಕೊಡಗಿನ ಜನತೆಯ ಬದುಕಿಗೆ ಪ್ರತಿ ಹಂತದಲ್ಲಿ ಕಾನೂನಿನ ತೊಡರುಗಾಲು ಎಂದಾದರೆ ಏನು ಮಾಡುವದು?’ಕೊಡಗು ಜಿಲ್ಲಾ ಪಂಚಾಯಿತಿಯಿಂದ 2018ರ ಕಡೆಯ ದಿನದ ಇಂದಿನ ಸಾಮಾನ್ಯ ಸಭೆಯಲ್ಲಿ ಪಕ್ಷಬೇಧ ಮರೆತು ಜನಪ್ರತಿನಿಧಿಗಳಿಂದ ಹುಟ್ಟಿಕೊಂಡ ಈ ಮೇಲಿನ ಪ್ರಶ್ನೆಗಳಿಗೆ ಯಾರೊಬ್ಬರೂ ಉತ್ತರಿಸುವಂತಿರಲಿಲ್ಲ. ಬದಲಾಗಿ ಹಾಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ಕಾರ್ಯ ವೈಖರಿ ಬಗ್ಗೆ ಈ ಮೂಲಕ ಜನಪ್ರತಿನಿಧಿಗಳು ತಮ್ಮ ಅಸಮಾಧಾನಗಳನ್ನು ಹೊರಗೆಡವಿದ ಸನ್ನಿವೇಶ ಎದುರಾಯಿತು.

ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡ ಸಭೆಯಲ್ಲಿ ಹಿಂದಿನ ವರ್ಷದ ಕಹಿ ಘಟನೆಗಳನ್ನು ಮರೆತು; ಹೊಸ ವರ್ಷದಲ್ಲಿ ಎಲ್ಲರಿಗೂ ಒಳಿತಾಗುವ ರೀತಿಯಲ್ಲಿ ಆಶಯದೊಂದಿಗೆ ಸಭೆ ಮುಂದುವರೆಸೋಣ ಎಂದು ಅಧ್ಯಕ್ಷರು ಚರ್ಚೆ ಆರಂಭಿಸಿದರು. ಈ ವೇಳೆ ಕೆಲವು ಸದಸ್ಯರು ಕಾರ್ಯಸೂಚಿ ಯಲ್ಲಿರುವ ಹಲವಷ್ಟು ಅಂಶಗಳ ಬಗ್ಗೆ ಉಲ್ಲೇಖಿಸುತ್ತಾ, ಜಿಲ್ಲೆಯಲ್ಲಿ ಯಾವದೇ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ತ್ರೈಮಾಸಿಕ ಸಭೆಗಳಲ್ಲಿ ಕಂಠಶೋಷಣೆ ಮಾತ್ರವೆನ್ನಿಸಿದೆ, ಸಂಬಂಧಿಸಿದ ಇಲಾಖೆಗಳ ಅಧಿಕಾರಿ ಗಳು ಕೆಲಸ ಕಾರ್ಯ ಮಾಡದೇ, ಮತ್ತು ಜನಪ್ರತಿನಿಧಿಗಳ ಮಾತುಗಳನ್ನು ಕೇಳದೇ ಇರುವಾಗ ನಮ್ಮಗಳ ಅವಶ್ಯಕತೆ ಬೇಕೇ ಎಂದು ಬೇಸರದ ನುಡಿಯಾಡಿದರು. ರಸ್ತೆ ಇತ್ಯಾದಿ ಕಾಮಗಾರಿ ಕೆ.ಆರ್. ನಗರ ಹಾಗೂ ಹೊರಗಿನ ಮಂದಿಯಿಂದ ನಡೆಸುವಂತಾದರೆ, ಜಿಲ್ಲೆಯ ಗುತ್ತಿಗೆದಾರರಿಗೆ ಮತ್ತು ಇಲ್ಲಿನ ಜನಪ್ರತಿನಿಧಿಗಳಿಗೆ ಏನು ಮಾಡಲಾದೀತು ಎಂದು ಅಸಮಾಧಾನ ತೋಡಿಕೊಂಡರು.

ಕಸ್ತೂರಿ ರಂಗನ್ ವರದಿ: ಈ ವೇಳೆ ಮಧ್ಯೆ ಪ್ರವೇಶಿಸಿದ ಸದಸ್ಯ ಬಿ.ಎನ್. ಪೃಥ್ವಿ ಕಸ್ತೂರಿ ರಂಗನ್ ವರದಿ ವಿರೋಧಿ ನಿರ್ಣಯ ಕೈಗೊಂಡು ಹಿಂದಿನಿಂದಲೂ ಆ ಬಗ್ಗೆ ಪ್ರಸ್ತಾಪಿಸುತ್ತಾ ಬಂದರೂ, ಏನೂ ಪ್ರಯೋಜನವಾಗಿಲ್ಲವೆಂದು ಹರಿಹಾಯ್ದರು. ಜಿಲ್ಲೆಯ ಸಂತ್ರಸ್ತರ ಸಹಿತ ಜನರ ಕಷ್ಟಗಳಿಗೆ ಸ್ಪಂದಿಸುವ ಯಾವ ಕೆಲಸವೂ ಆಗುತ್ತಿಲ್ಲವೆಂದು ಬೇಸರದ ನುಡಿಯಾಡಿದರು. ಕಸ್ತೂರಿ ರಂಗನ್ ವರದಿ ಬಗ್ಗೆ ಮತ್ತೊಮ್ಮೆ ಸರ್ವಾನುಮತದ ನಿರ್ಣಯ ಕೈಗೊಂಡು, ಮತ್ತೊಮ್ಮೆ ಕೊಡಗಿನಲ್ಲಿ ಅನುಷ್ಠಾನಗೊಳಿಸದಂತೆ ಸರಕಾರಕ್ಕೆ ಕಳುಹಿಸೋಣ ಎಂದು ಒತ್ತಾಯಿಸಿದರು.

ಜಿ.ಪಂ. ಅಧ್ಯಕ್ಷರ ಸಹಿತ ಸದಸ್ಯರು ದ್ವನಿಗೂಡಿಸಿ, ಎಲ್ಲರೂ ಈ ಬಗ್ಗೆ ಮೊದಲಿನಿಂದಲೂ ವಿರೋಧಿಸುತ್ತಾ ಬಂದಿರುವದಾಗಿ ಸ್ಪಷ್ಟಪಡಿಸಿದರು. ಅಷ್ಟರಲ್ಲಿ ವರದಿ ಅನುಷ್ಠಾನದ ಬಳಿಕ ಇಲ್ಲಿ ಚರ್ಚೆಯಾದರೂ ಬೇಕೆ? ಎಂದು ಚಂದ್ರಕಲಾ ಪ್ರಶ್ನಿಸುತ್ತಾ, ಸಂಸದರ ಸಹಿತ ಎಲ್ಲರೂ ಭರವಸೆ ಮೂಲಕ ವಂಚಿಸಿದ್ದಾಗಿ ಟೀಕಿಸಿದರು. ಬಿಜೆಪಿ ಸದಸ್ಯರುಗಳಾದ ಸಿ.ಕೆ. ಬೋಪಣ್ಣ ಮತ್ತಿತರರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

(ಮೊದಲ ಪುಟದಿಂದ)

ಶಿವು ಮಾದಪ್ಪ ಟೀಕೆ: ಲೋಕೋಪಯೋಗಿ ಇಲಾಖೆಯಿಂದ ರಸ್ತೆಗಳ ಗುಂಡಿ ಮುಚ್ಚುವದು ಸೇರಿದಂತೆ ಎಲ್ಲವೂ ಕಾನೂನು ಬಾಹಿರವಾಗಿ, ಕೆಲವರಿಗೆ ಬೇಕಾದಂತೆ ಕಾಮಗಾರಿ ನಡೆಯುತ್ತಿದೆ ಎಂದು ಬೊಟ್ಟು ಮಾಡಿದ ಕಾಂಗ್ರೆಸ್ ಸದಸ್ಯ ಎಂ.ಬಿ. ಶಿವು ಮಾದಪ್ಪ, ಕುಟ್ಟ ವ್ಯಾಪ್ತಿ ಕೆಲಸ ಕೈಗೊಳ್ಳದ ಬಗ್ಗೆ ಟೀಕಾ ಪ್ರಹಾರ ನಡೆಸಿದರು. ಆ ಭಾಗದಲ್ಲಿ ಕೆಲಸ ಪೂರೈಸುವಂತೆ ಅಧ್ಯಕ್ಷರು ಅಧಿಕಾರಿಗೆ ಸೂಚಿಸಿದರು.

ಆರೋಗ್ಯ ಇಲಾಖೆ, ಕೃಷಿ ಇಲಾಖೆ, ನೀರಾವರಿ ಇಲಾಖೆ, ಐಟಿಡಿಪಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೇರಿದಂತೆ ಕೆಲವಷ್ಟು ಅಧಿಕಾರಿಗಳು ಜನಪರ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಆಸಕ್ತಿ ತೋರುತ್ತಿಲ್ಲವೆಂದು ಬಹುತೇಕ ಸದಸ್ಯರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಅಸಮಾಧಾನ ತೋಡಿಕೊಂಡರು.

ಪ್ರಕೃತಿ ವಿಕೋಪ: 300 ಕೋಟಿ ಪ್ರಸ್ತಾವನೆ

ಪ್ರಕೃತಿ ವಿಕೋಪದಿಂದಾಗಿ ಜಿಲ್ಲೆಯಲ್ಲಿ ಅಪಾರ ನಷ್ಟ ಉಂಟಾಗಿದ್ದು, ಈ ಸಂಬಂಧ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್, ಚರಂಡಿ ಇತರ ಮೂಲ ಸೌಲಭ್ಯಗಳಿಗೆ 300 ಕೋಟಿ ರೂ. ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿ.ಪಂ.ಅಧ್ಯಕ್ಷ ಬಿ.ಎ. ಹರೀಶ್ ತಿಳಿಸಿದರು. ಕೊಡಗು ಜಿಲ್ಲೆಯನ್ನು ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ಜಿ.ಪಂ.ಸರ್ವಪಕ್ಷ ನಿಯೋಗವು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಹೆಚ್ಚಿನ ಹಣ ಬಿಡುಗಡೆಗೆ ಮನವಿ ಮಾಡೋಣ ಎಂದು ಜಿ.ಪಂ. ಅಧ್ಯಕ್ಷರು ಸಲಹೆ ಮಾಡಿದರು.

ಈ ಕುರಿತು ವಿಷಯ ಪ್ರಸ್ತಾಪಿಸಿದ ಜಿ.ಪಂ.ಸದಸ್ಯ ಮುರಳಿ ಕರುಂಬಮ್ಮಯ್ಯ ಪ್ರಕೃತಿ ವಿಕೋಪಕ್ಕೆ ಸರ್ಕಾರದಿಂದ ಹೆಚ್ಚಿನ ಹಣ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸುವಂತಾಗಬೇಕು ಎಂದು ಸಲಹೆ ಮಾಡಿದರು. ಈಗಾಗಲೇ ಸರ್ಕಾರ ಲೋಕೋಪಯೋಗಿ, ಜಿ.ಪಂ. ಎಂಜಿನಿಯರಿಂಗ್ ವಿಭಾಗ, ಸೆಸ್ಕ್ ಮತ್ತಿತರ ಇಲಾಖೆಗಳಿಗೆ ಹಣ ಬಿಡುಗಡೆ ಮಾಡಿದೆ. ಹೆಚ್ಚುವರಿಯಾಗಿ ಹಣಕ್ಕೆ ಪ್ರಸ್ತಾವನೆ ಸಲ್ಲಿಸುವಂತಾಗಬೇಕು ಎಂದು ಹೇಳಿದರು.

ಪ್ರಕೃತಿ ವಿಕೋಪದಡಿ ನೊಂದ ಸಂತ್ರಸ್ತರಿಗೆ ಸೂಕ್ತ ಪರಿಹಾರ ದೊರೆಯುವಂತಾಗಬೇಕು. ಯಾವದೇ ಕಾರಣಕ್ಕೂ ವಿಳಂಬ ಅನುಸರಿಸಬಾರದು ಎಂದು ಬಾನಂಡ ಪ್ರಥ್ಯು ಸಭೆಯ ಗಮನ ಸೆಳೆದರು. ಜಿಲ್ಲೆಯಲ್ಲಿ ರಸ್ತೆಗಳನ್ನು ಮೇಲ್ದರ್ಜೆಗೇರಿಸಬೇಕು. ವಾಹನ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಈ ಸಂಬಂಧ ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸಬೇಕು. ರಸ್ತೆ ಅಭಿವೃದ್ಧಿಗೆ ನಮ್ಮೆಲ್ಲರ ಬೆಂಬಲವಿದೆ ಎಂದು ಅವರು ತಿಳಿಸಿದರು.

ಸದಸ್ಯೆ ಕವಿತಾ ಪ್ರಭಾಕರ್ ಭಾಗಮಂಡಲ-ಕರಿಕೆ ರಸ್ತೆ ತುಂಬಾ ಹದಗೆಟ್ಟಿದ್ದು, ಸರಿಪಡಿಸುವಂತಾಗಬೇಕು ಎಂದರು. ಈ ಬಗ್ಗೆ ಮಾಹಿತಿ ನೀಡಿದ ಲೋಕೋಪಯೋಗಿ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ ಇನ್ನು ಒಂದು ತಿಂಗಳಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸಲಾಗುವದು ಎಂದು ಮಾಹಿತಿ ನೀಡಿದರು. ಜಿ.ಪಂ.ಸಿಇಓ ಕೆ.ಲಕ್ಷ್ಮಿಪ್ರಿಯಾ ಅವರು ಕುಡಿಯುವ ನೀರು ಸಂಬಂಧ ಹೊಸದಾಗಿ ಕಾಮಗಾರಿ ಪಟ್ಟಿ ಸಿದ್ಧಪಡಿಸಲಾಗುವದು ಎಂದು ತಿಳಿಸಿದರು.

ಸದಸ್ಯ ಅಬ್ದುಲ್ ಲತೀಫ್ ಜಿ.ಪಂ.ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಸದಸ್ಯರ ಗಮನಕ್ಕೆ ಬರುತ್ತಿಲ್ಲ. ಕಾಮಗಾರಿಯು ಸಹ ಗುಣಮಟ್ಟದಿಂದ ಕೂಡಿರುವದಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಹಿಂದಿನಿಂದಲೂ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಕಾರ್ಯಗಳು ನಡೆಯುತ್ತಿವೆ ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ ತಿಳಿಸಿದರು. ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಪೂರ್ಣಿಮಾ ಗೋಪಾಲ್ ವೈದ್ಯರು ಇಲ್ಲದಿದ್ದಲ್ಲಿ ಆಸ್ಪತ್ರೆಯನ್ನು ಮುಚ್ಚುವಂತೆ ಸಲಹೆ ನೀಡಿದರು. ಕರಿಕೆ ಸೇರಿದಂತೆ ಜಿಲ್ಲೆಯ ಹಲವು ಪ್ರಾಥಮಿಕ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ ಎಂದು ಹಲವು ಸದಸ್ಯರು ಸಭೆಯ ಗಮನ ಸೆಳೆದರು.

ಕೆ.ಪಿ.ಚಂದ್ರಕಲಾ ಮಾತನಾಡಿ ಬ್ಯಾಡಗೊಟ್ಟದಲ್ಲಿ ಗಿರಿಜನ ಕುಟುಂಬಗಳು ಅನಾರೋಗ್ಯಕ್ಕೆ ತುತ್ತಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಗಮನ ಸೆಳೆದರು. ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಪ್ರತೀ ವಾರ ವಿಶೇಷ ಆರೋಗ್ಯ ಶಿಬಿರ ಏರ್ಪಡಿಸಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಮುಂದಿನ ವಾರ ಬೃಹತ್ ಆರೋಗ್ಯ ಶಿಬಿರ ಆಯೋಜಿಸಲಾಗುವದು ಎಂದು ತಿಳಿಸಿದರು. ಕೆಲವು ಆಸ್ಪತ್ರೆಗಳಲ್ಲಿ 5 ಕ್ಕಿಂತ ಹೆಚ್ಚು ವರ್ಷ ಒಂದೇ ಕಡೆ ಇರುವ ಶ್ರುಶ್ರೂಷಕರನ್ನು ನಿಯೋಜನೆ ಮೇಲೆ ವರ್ಗಾಯಿಸುವಂತೆ ಜಿ.ಪಂ.ಅಧ್ಯಕ್ಷರು ಸಲಹೆ ಮಾಡಿದರು.

ಸದಸ್ಯ ಶ್ರೀನಿವಾಸ ಹೆಬ್ಬಾಲೆ ಆಸ್ಪತ್ರೆ ಮಳೆಗೆ ಸೋರುತ್ತಿದೆ. ಇದನ್ನು ಸರಿಪಡಿಸುವಂತಾಗಬೇಕು ಎಂದು ಹೇಳಿದರು. ಎಚ್1 ಎನ್1 ಸಂಬಂಧ 8 ಪ್ರಕರಣಗಳು ಕಂಡು ಬಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯಧಿಕಾರಿ ಮಾಹಿತಿ ನೀಡಿದರು. ಅಯ್ಯಂಗೇರಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಕಾಡಾನೆ ಧಾಳಿಯಿಂದ ಗಾಯಗೊಂಡವರಿಗೆ ಸೂಕ್ತ ಪರಿಹಾರ ನೀಡುವಂತಾಗಬೇಕು ಎಂದು ಕವಿತಾ ಪ್ರಭಾಕರ್ ಒತ್ತಾಯಿಸಿದರು. ಈ ಸಂಬಂಧ ಸೂಕ್ತ ಪರಿಹಾರಕ್ಕೆ ಶಿಫಾರಸ್ಸು ಮಾಡಲಾಗುವದು ಎಂದು ಜಿ.ಪಂ. ಅಧ್ಯಕ್ಷರು ಹೇಳಿದರು. ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರು ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ.ಬೋಪಣ್ಣ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ, ಸದಸ್ಯರಾದ ಮೂಕೊಂಡ ಪಿ.ಸುಬ್ರಮಣಿ, ಭವ್ಯ, ಮಹೇಶ್ ಗಣಪತಿ, ಪಂಕಜಾ, ಎಂ.ಬಿ.ಸುನಿತಾ, ಲೀಲಾವತಿ, ಕೆ.ಕೆ.ಕುಮಾರ, ಸಿ.ಪಿ.ಪುಟ್ಟರಾಜು, ಬಿ.ಜೆ.ದೀಪಕ್, ಕೆ.ಆರ್.ಮಂಜುಳ ಇತರರು ಹಲವು ವಿಚಾರಗಳ ಕುರಿತು ಗಮನ ಸೆಳೆದರು.