ಸೋಮವಾರಪೇಟೆ,ಡಿ.30: ತಾಲೂಕಿನ ಭುವಂಗಾಲ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ವನ್ಯಪ್ರಾಣಿಗಳನ್ನು ಬೇಟೆಯಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಸೋಮವಾರಪೇಟೆ ಅರಣ್ಯ ಇಲಾಖಾಧಿಕಾರಿಗಳು ಬಂಧಿಸಿದ್ದು, ಬಂದಿತರಿಂದ ಮೂರು ಕೋವಿಗಳನ್ನು ವಶಕ್ಕೆ ಪಡೆಯಲಾಗಿದೆ.
ಭುವಂಗಾಲ ಗ್ರಾಮ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಬೇಟೆಯಾಡಲೆಂದು ತೆರಳಿದ್ದ ತಾಲೂಕಿನ ಶಾಂತಳ್ಳಿ ಗ್ರಾಮದ ಎಂ.ಈ. ಚಂಗಪ್ಪ, ಕೆ.ಜೆ. ಲತೇಶ್, ಹರಗ ಗ್ರಾಮದ ಡಿ.ಬಿ. ಬೋಪಯ್ಯ, ಬಿ.ಈ. ಉತ್ತಯ್ಯ, ಹೆಚ್.ಈ. ದೇವರಾಜ್ ಅವರುಗಳನ್ನು ಅರಣ್ಯ ಇಲಾಖಾ ಸಿಬ್ಬಂದಿಗಳು ಬಂಧಿಸಿದ್ದಾರೆ.
ಬಂದಿತರಿಂದ ಮೂರು ಕೋವಿಗಳು, 6 ಸಜೀವ ಗುಂಡುಗಳು, ಬೊಲೆರೋ ಪಿಕ್‍ಅಪ್ ವಾಹನ ಸೇರಿದಂತೆ ಮೊಬೈಲ್‍ಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್, ಡಿಆರ್‍ಎಫ್‍ಓ ಮಹದೇವ್ ನಾಯಕ್, ಸತೀಶ್‍ಕುಮಾರ್, ಅರಣ್ಯ ರಕ್ಷಕ ರಾಜು ಸೇರಿದಂತೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.