ಮಡಿಕೇರಿ, ಡಿ. 30: ಹೆಣ್ಣು ಮಕ್ಕಳ ಸ್ಥಾನವನ್ನು ಕುಟುಂಬ ಹಾಗೂ ಸಮುದಾಯದಲ್ಲಿ ಹೆಚ್ಚಿಸಲು, ಪೋಷಣೆ ಮತ್ತು ಶಿಕ್ಷಣದ ಉತ್ತೇಜನಕ್ಕಾಗಿ 2006-07ನೇ ಸಾಲಿನಿಂದ ಭಾಗ್ಯಲಕ್ಷ್ಮಿ ಯೋಜನೆ ಅನುಷ್ಠಾನ ಗೊಳಿಸಲಾಗುತ್ತಿದೆ. ಈ ಯೋಜನೆಯನ್ವಯ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳ ಎರಡು ಹೆಣ್ಣು ಮಕ್ಕಳು ಸೌಲಭ್ಯ ಪಡೆಯಲು ಅರ್ಹರಾಗಿ ರುತ್ತಾರೆ. ದಿನಾಂಕ 24.2.2018 ರ ಸರ್ಕಾರದ ಆದೇಶದಂತೆ ಭಾಗ್ಯಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ಪಡೆಯಲು ದಿನಾಂಕ 24.2.2018 ರ ನಂತರ ಜನಿಸುವ ಮಕ್ಕಳಿಗೆ ಅನ್ವಯಿಸುವಂತೆ ಮಗು ಜನಿಸಿದ ದಿನಾಂಕದಿಂದ ಒಂದು ವರ್ಷದವರೆಗೆ ಇರುವ ಅವಧಿಯನ್ನು ಎರಡು ವರ್ಷದವರೆಗೆ ವಿಸ್ತರಿಸಲಾಗಿದೆ. ಕುಟುಂಬದ ಎರಡನೇ ಮಗುವನ್ನು ಭಾಗ್ಯಲಕ್ಷ್ಮಿ ಯೋಜನೆಯಡಿ ನೋಂದಣಿ ಮಾಡುವ ಸಂದರ್ಭದಲ್ಲಿ ಕಡ್ಡಾಯ ಕುಟುಂಬ ಯೋಜನೆ ಶಸ್ತ್ರ ಚಿಕಿತ್ಸೆಗೆ ಒಳಪಡಬೇಕೆಂಬ ಷರತ್ತನ್ನು ಕೈಬಿಡಲಾಗಿದೆ. ಅರ್ಹ ಫಲಾನುಭವಿಗಳ ಪೋಷಕರು ಮಗುವಿನ ಹೆಸರನ್ನು ಸಂಬಂಧಿಸಿದ ಅಂಗನವಾಡಿ ಕಾರ್ಯಕರ್ತೆಯರ ಮುಖಾಂತರ ಮಹಿಳಾ ಮೇಲ್ವಿಚಾರಕಿ ಯರ ಪರಿಶೀಲನೆಯೊಂದಿಗೆ ಆಯಾಯ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿ ಭಾಗ್ಯಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಏಪ್ರಿಲ್ 1, 2006 ರಿಂದ ಜುಲೈ 31, 2008 ರವರೆಗೆ ಜನಿಸಿ ಭಾಗ್ಯಲಕ್ಷ್ಮಿ ಯೋಜನೆಯಡಿ ಬಾಂಡ್ ಪಡೆದ ಮಕ್ಕಳು ಶಾಲಾ ದಾಖಲಾತಿಯ ನಂತರ 1 ನೇ ತರಗತಿಯಿಂದ 10 ನೇ ತರಗತಿಯವರೆಗೆ ಪ್ರತಿ ವರ್ಷವೂ ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿರುತ್ತಾರೆ. ಇಂತಹ ಫಲಾನುಭವಿಗಳ ಪೋಷಕರು ಮಕ್ಕಳ ಶಾಲಾ ವ್ಯಾಸಂಗ ದೃಢೀಕರಣ ಪತ್ರ ಮತ್ತು ತಾಯಿ ಮಗುವಿನ ಜಂಟಿ ಖಾತೆಯಲ್ಲಿರುವ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಅಥವಾ ಆಯಾಯ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಒದಗಿಸಿ ವಿದ್ಯಾರ್ಥಿ ವೇತನದ ಸೌಲಭ್ಯ ಪಡೆದುಕೊಳ್ಳುವಂತೆ ಕೋರಲಾಗಿದೆ.

ಭಾಗ್ಯಲಕ್ಷ್ಮಿ ಯೋಜನೆಯಡಿ ನೋಂದಾಯಿಸಿದ ಮಕ್ಕಳು ಕನ್ನಡ ಮಾಧ್ಯಮದಲ್ಲಿಯೇ ಕಲಿಯಬೇಕೆಂಬ ನಿಯಮವಿರುವದಿಲ್ಲ. ಭಾಗ್ಯಲಕ್ಷ್ಮಿ ಯೋಜನೆಯಡಿ ಸೌಲಭ್ಯ ಪಡೆದ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲದೆ ಖಾಸಗಿ, ಅರೆ ಸರ್ಕಾರಿ, ಕೇಂದ್ರೀಯ ಹಾಗೂ ಇತರೆ ಶಾಲೆಗಳಲ್ಲಿ ದಾಖಲಿಸಿ ಶಿಕ್ಷಣ ಪಡೆಯುವ ಅವಕಾಶವಿದೆ ಎಂಬ ಅಂಶವನ್ನು ಎಲ್ಲಾ ಭಾಗ್ಯಲಕ್ಷ್ಮಿ ಯೋಜನೆ ಫಲಾನುಭವಿಗಳ ಪೋಷಕರ ಗಮನಕ್ಕೆ ತರಲಾಗಿದೆ ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.