ಗೋಣಿಕೊಪ್ಪ ವರದಿ, ಡಿ. 30: ಪಟ್ಟಣದಲ್ಲಿ ವಾಹನ ದಟ್ಟಣೆ ನಿಭಾಯಿಸಲು ಪೊಲೀಸ್ ಇಲಾಖೆ ಮೊದಲ ಬಾರಿಗೆ ಏಕಮುಖ ಸಂಚಾರ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಶನಿವಾರ ಪ್ರಾಯೋಗಿಕವಾಗಿ ಆರಂಭಿಸಲಾಯಿತು.

ಮೈಸೂರು, ಪೊನ್ನಂಪೇಟೆ, ಪಾಲಿಬೆಟ್ಟ ರಸ್ತೆ ಮೂಲಕ ಒಳಬರುವ ವಾಹನಗಳಿಗೆ ಬೈಪಾಸ್ ರಸ್ತೆ ಮೂಲಕ ಸಂಚರಿಸಲು ಅವಕಾಶ ಮಾಡಿಕೊಡ ಲಾಯಿತು. ಬಸ್, ಲಾರಿ ಹೊರತುಪಡಿಸಿ ಉಳಿದ ವಾಹನಗಳು ಈ ಮಾರ್ಗದಲ್ಲಿ ಸಂಚರಿಸಿದವು. ಬೈಪಾಸ್ ಮೂಲಕ ಬಂದು ಉಮಾಮಹೇಶ್ವರಿ ದೇವಾಲಯ ಸಮೀಪ ಮುಖ್ಯರಸ್ತೆಗೆ ಸೇರಿ ಬಸ್ ನಿಲ್ದಾಣಕ್ಕೆ ಬರುವಂತೆ ಕ್ರಮಕೈಗೊಳ್ಳಲಾಯಿತು. ಪೊಲೀಸರು ಮಾರ್ಗ ತೋರಿಸುವ ಮೂಲಕ ಸವಾರರಿಗೆ ಸ್ಪಂದಿಸಿದರು. ವೀರಾಜಪೇಟೆ ರಸ್ತೆ ಮೂಲಕ ಬರುವ ವಾಹನಗಳು ನೇರವಾಗಿ ಬಸ್ ನಿಲ್ದಾಣಕ್ಕೆ ಬರಲು ಅವಕಾಶ ಮಾಡಿಕೊಡಲಾಗಿದೆ.

ಮಾಹಿತಿ ಕೊರತೆ: ಹಲವು ದಿನಗಳ ಹಿಂದೆ ಪೊಲೀಸ್ ವರಿಷ್ಠಾಧಿಕಾರಿ ಅವರೊಂದಿಗೆ ಪಟ್ಟಣದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಸ್ಥಳೀಯ ಚೇಂಬರ್ ಆಫ್ ಕಾಮರ್ಸ್ ಈ ಬಗ್ಗೆ ಮನವಿ ಸಲ್ಲಿಸಿ ಏಕಮುಖ ಸಂಚಾರ ಜಾರಿಗೆ ಒತ್ತಾಯಿಸಿತ್ತು. ಪ್ರಾಯೋಗಿಕವಾಗಿ ಜಾರಿಗೆ ತರಲಾಗುವದು ಎಂದು ಎಸ್ಪಿ ಭರವಸೆ ನೀಡಿದ್ದರು.

ಆದರೆ ಸಾರ್ವಜನಿಕರಿಗೆ ಮಾಹಿತಿ ನೀಡದೆ ಜಾರಿಗೆ ತಂದ ಕಾರಣ ಸವಾರರು ಗೊಂದಲಗೊಂಡರು. ಪೊಲೀಸರು ಬರುವ ವಾಹನಗಳನ್ನು ತಡೆದು ಬೇರೆ ಮಾರ್ಗಕ್ಕೆ ತೆರಳುವಂತೆ ಸೂಚಿಸುತ್ತಿದ್ದರು.

ಗೊಂದಲಗೊಂಡ ಸವಾರರು ಗೊಂದಲದಿಂದ ಮುಂದೆ ಸಾಗಿದರು. ಇದರಿಂದ ಮಾಹಿತಿ ಕೊರತೆ ಕಂಡು ಬಂತು.