ಸುಂಟಿಕೊಪ್ಪ, ಡಿ. 29: ರಾಮನಗರದ ವ್ಯಕ್ತಿಯೊಬ್ಬರಿಗೆ ಸೇರಿದ ಖಾಸಗಿ ಬಸ್‍ವೊಂದರಲ್ಲಿ ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕು ಗಣಿಕೆಹಾಳು ಸರಕಾರಿ ಪ್ರೌಢಶಾಲೆಯ ಮಕ್ಕಳು ಶೈಕ್ಷಣಿಕ ಪ್ರವಾಸ ಹೊರಟಿದ್ದ ವೇಳೆ, ಮಾರ್ಗಮಧ್ಯೆ ಮಧ್ಯರಾತ್ರಿ ಬಳಿಕ ಸಂಭವಿಸಿದ ಅವಘಡದಲ್ಲಿ ವಿದ್ಯಾರ್ಥಿ ಯೊಬ್ಬ ಸಾವನ್ನಪ್ಪಿದ್ದು, ಇತರ ಏಳು ಮಂದಿ ಗಾಯ ಗೊಂಡಿರುವ ದುರ್ಘಟನೆ ಸುಂಟಿಕೊಪ್ಪ ಸಮೀಪದ ಶಾಂತಗಿರಿ ತೋಟದ ರಸ್ತೆ ತಿರುವಿನಲ್ಲಿ ಸಂಭವಿಸಿದೆ.ತಾ. 26ರಂದು ಗಣಿಕೆಹಾಳು ಶಾಲೆಯಿಂದ ಪ್ರವಾಸ ಹೊರಟಿದ್ದ ತಂಡದ 10ನೇ ತರಗತಿ ವಿದ್ಯಾರ್ಥಿ ಬಸವರಾಜ್ (15) ಬಸ್ ಅವಘಡ ದಿಂದ ಕೊನೆಯುಸಿರೆಳೆದಿದ್ದು, ಚಾಲಕ ಜಾನ್ಸನ್ ಹಾಗೂ ಅಡುಗೆಯಾತ ಸಿದ್ಧ ಎಂಬವರಿಗೆ ಗಂಭೀರ ಗಾಯಗ ಳೊಂದಿಗೆ ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಇಲ್ಲಿನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೃತ ವಿದ್ಯಾರ್ಥಿ ಶವದ ಮರಣೋತ್ತರ ಪರೀಕ್ಷೆ ಬಳಿಕ ಈ ದಿನ ಹುಟ್ಟೂರಿಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು.

ಬಳ್ಳಾರಿ ಶಾಲೆಯಿಂದ ಹೊರಟ ವಿದ್ಯಾರ್ಥಿಗಳು ಕಳೆದ ಮೂರು ದಿನಗಳಿಂದ ಆದಿಚುಂಚನಗಿರಿ ಕ್ಷೇತ್ರ, ಮೇಲುಕೋಟೆ, ಶ್ರವಣ ಬೆಳಗೊಳ, ಶ್ರೀರಂಗಪಟ್ಟಣ ಹಾಗೂ ಮೈಸೂರು ಸುತ್ತಮುತ್ತ ಸಂದರ್ಶಿಸುತ್ತಾ, ತಾ. 28ರ ಮಧ್ಯರಾತ್ರಿ 12.30ರ ಸುಮಾರಿಗೆ ಮೈಸೂರಿನಿಂದ ಕೊಡಗಿನತ್ತ ಪ್ರಯಾಣ ಮುಂದುವರಿಸಿದ್ದರು.

ನಿದ್ದೆಯಲ್ಲಿದ್ದೆವು: ಈ ದಿನ ಬೆಳಗಿನ ಜಾವ 2.30ರ ಸುಮಾರಿಗೆ ರಾಮನಗರದ ಶ್ರೀ ಚೌಡೇಶ್ವರಿ ಏಜೆನ್ಸಿಗೆ ಸೇರಿದ ಬಸ್ (ಕೆಎ-22 ಬಿ-5731) ಸುಂಟಿಕೊಪ್ಪದಿಂದ ಅನತಿ ದೂರದ ಶಾಂತಗಿರಿ ತೋಟದ ಹತ್ತಿರ ರಸ್ತೆ ಬದಿ ಎಡಕ್ಕೆ ದಿಬ್ಬವೇರಿ ಹಠಾತ್ ನಿಲ್ಲುವಷ್ಟರಲ್ಲಿ ನಿದ್ದೆಯಲ್ಲಿದ್ದ ಎಲ್ಲರು ಎಚ್ಚರಗೊಂಡಿದ್ದಾಗಿ ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.

ಅವಘಡದ ಸಂದರ್ಭ ಬಸ್ಸಿನ ಬಾಗಿಲು ತೆರೆದುಕೊಂಡಿದ್ದು, ಒಳಗಡೆ ಸ್ಟೀಲ್ ರಾಡನ್ನು ಹಿಡಿದುಕೊಂಡಿದ್ದ ವಿದ್ಯಾರ್ಥಿಗಳಾದ ಬಸವರಾಜ್ ಹಾಗೂ ರಾಜು ಎಂಬಿಬ್ಬರು ಹೊರಕ್ಕೆ ಎಸೆಯಲ್ಪಟ್ಟಿದ್ದಾರೆ. ಈ ವೇಳೆ ಕಲ್ಲೊಂದು ತಲೆಗೆ ಬಡಿದ ಪರಿಣಾಮ ಮಾರಣಾಂತಿಕ ಗಾಯಗೊಂಡು ವಿದ್ಯಾರ್ಥಿ ಬಸವರಾಜ್ ಕೊನೆಯು ಸಿರೆಳೆದರೆ, ಇನ್ನೋರ್ವ ರಾಜು (15) ಎಂಬಾತ ಸಣ್ಣಪುಟ್ಟ ಗಾಯಗೊಂಡಿದ್ದಾಗಿ ಬಸ್ಸಿನಲ್ಲಿದ್ದ ಶಿಕ್ಷಕರು ‘ಶಕ್ತಿ’ಗೆ ತಿಳಿಸಿದ್ದಾರೆ.

ಬೆಳಗಿನ ಜಾವ ಸಂಭವಿಸಿದ ದುರ್ಘಟನೆ ವೇಳೆ ಬೇರೆ ವಾಹನ ಚಾಲಕರು ಹಾಗೂ ಸುಂಟಿಕೊಪ್ಪ ಪೊಲೀಸರ ಸಹಕಾರದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದು, ಚಾಲಕ ಹಾಗೂ ಅಡುಗೆಯಾತ ಹೊರತಾಗಿ

(ಮೊದಲ ಪುಟದಿಂದ) ಸಣ್ಣಪುಟ್ಟ ಗಾಯಗೊಂಡಿದ್ದ ವಿದ್ಯಾರ್ಥಿಗಳಾದ ಮಹಮದ್ ಫಯಾಜ್, ಮಂಜುನಾಥ್, ರಾಜು, ಹೊನ್ನೂರು ಸ್ವಾಮಿ, ವೀರೇಶ್ ಎಂಬವರಿಗೆ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಆ ವೇಳೆಗೆ ಕೊನೆಯುಸಿರೆಳೆದಿದ್ದ ವಿದ್ಯಾರ್ಥಿಯ ದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿ, ಬಳಿಕ ಮರಣೋತ್ತರ ಪರೀಕ್ಷೆಯೊಂದಿಗೆ ಇಲ್ಲಿನ ಶೈಕ್ಷಣಿಕ ಅಧಿಕಾರಿಗಳ ಸಹಕಾರದಿಂದ ಬಳ್ಳಾರಿಗೆ ಸಾಗಿಸಲಾಗಿದೆ.

ಪರ್ಯಾಯ ವ್ಯವಸ್ಥೆ : ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ಹಾಗೂ ನಾಗರಿಕರ ಸಹಕಾರದಿಂದ ಬಸ್ಸಿನಲ್ಲಿದ್ದ ಎಲ್ಲಾ ಮಕ್ಕಳು ಮತ್ತು ಶಿಕ್ಷಕರ ತಂಡವನ್ನು ಪಟ್ಟಣದ ರಾಮಮಂದಿರ ಸಭಾಂಗಣಕ್ಕೆ ಕರೆತಂದು ತುರ್ತು ಆಸರೆ ಕಲ್ಪಿಸಲಾಯಿತು. ಅಲ್ಲದೆ, ಬೆಳಿಗ್ಗೆ ಉಪಹಾರ ಹಾಗೂ ಇತರ ನೆರವು ಕೊಡಿಸಲಾಗಿತ್ತು.

ಮಧ್ಯಾಹ್ನ ಶಿಕ್ಷಣ ಇಲಾಖೆಯಿಂದ ಇಲ್ಲಿನ ಪ್ರೌಢಶಾಲಾ ಮಕ್ಕಳೊಂದಿಗೆ ಶಾಲೆಯಲ್ಲೇ ಎಲ್ಲರಿಗೆ ಊಟದ ವ್ಯವಸ್ಥೆ ಬಳಿಕ, ರಾಜ್ಯ ಸಾರಿಗೆ ಸಂಸ್ಥೆಯ ಮಡಿಕೇರಿ ಘಟಕದ ಬಸ್ಸಿನಲ್ಲಿ ಎಲ್ಲರನ್ನು ಬಳ್ಳಾರಿಗೆ ಕಳುಹಿಸಿಕೊಡಲಾಯಿತು. ಸುಂಟಿಕೊಪ್ಪ ಗ್ರಾ.ಪಂ. ಪ್ರತಿನಿಧಿಗಳ ಸಹಿತ ಶಿಕ್ಷಣ ಇಲಾಖೆಯ ವಿವಿಧ ಅಧಿಕಾರಿಗಳು, ಪೊಲೀಸ್ ತಂಡ, ವೈದ್ಯ ಸಿಬ್ಬಂದಿ ಸಂಬಂಧಿಸಿದ ವಿದ್ಯಾರ್ಥಿಗಳ ಸಹಿತ ಶಿಕ್ಷಕರ ಬಳಗಕ್ಕೆ ತುರ್ತು ನೆರವು ಕಲ್ಪಿಸಿದರು.

ಶೈಕ್ಷಣಿಕ ಪ್ರವಾಸ ವೇಳೆ ಬಳ್ಳಾರಿ ಪ್ರೌಢಶಾಲೆಯ 27 ಬಾಲಕರು, 21 ಬಾಲಕಿಯರು, ಆರು ಮಂದಿ ಶಿಕ್ಷಕರ ಸಹಿತ ಶಾಲೆಯ ಓರ್ವ ನೌಕರ ಹಾಗೂ ಖಾಸಗಿ ಅಡುಗೆಯಾತ ಮತ್ತು ಬಸ್ಸಿನ ಇಬ್ಬರು ಚಾಲಕರಿದ್ದುದಾಗಿ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ‘ಶಕ್ತಿ’ಗೆ ತಿಳಿಸಿದ್ದಾರೆ.

ಮೃತ ವಿದ್ಯಾರ್ಥಿ ಗಣಿಕೆಹಾಳು ಗ್ರಾಮದ ರೈತ ದ್ಯಾಮಣ್ಣ ಹಾಗೂ ದೇವಮ್ಮ ದಂಪತಿಯ ತೃತೀಯ ಪುತ್ರನಾಗಿದ್ದು, ಈತನಿಗೆ ಇನ್ನಿಬ್ಬರು ಅಣ್ಣಂದಿರಿದ್ದಾರೆ ಎಂದು ದುಃಖದಿಂದ ವಿವರಿಸಿದ್ದಾರೆ. ತಾವು ಸಹಿತ ಎಲ್ಲರೂ ನಿದ್ದೆಯಲ್ಲಿದ್ದು, ದುರ್ಘಟನೆ ಹೇಗಾಯಿತು ಅರಿಯಲಿಲ್ಲವೆಂದು ಅವರು ಗದ್ಗದಿತರಾಗಿ ಕಣ್ಣೀರುಗರೆದರು.

ಎಸ್ಪಿ ಭೇಟಿ: ಘಟನೆ ಸ್ಥಳಕ್ಕೆ ಎಸ್ಪಿ ಡಾ. ಸುಮನ್ ಡಿ.ಪಿ., ಡಿವೈಎಸ್ಪಿ ಮುರುಳಿಧರ್, ವೃತ್ತ ನಿರೀಕ್ಷಕ ಕ್ಯಾತೆಗೌಡ ಸಹಿತ ಇತರರು ಭೇಟಿ ನೀಡಿದರಲ್ಲದೆ, ಪ್ರವಾಸಿ ತಂಡದ ವಿದ್ಯಾರ್ಥಿ ಸಮೂಹ, ಶಿಕ್ಷಕರ ಬಳಗವನ್ನು ಸಂತೈಸಿದರು. ಪೊಲೀಸರು ಅವಘಡ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

-ರಾಜು ರೈ.