ಕುಶಾಲನಗರ, ಡಿ. 29: ಕೊಡಗಿನ ರಸ್ತೆಗೆ ರೂ. 44 ಕೋಟಿ ಹಣ ಬಿಡುಗಡೆಯಾಗಿದೆ. ಈ ಹಣದಲ್ಲಿ ತಾತ್ಕಾಲಿಕ ದುರಸ್ತಿಕಾರ್ಯ ನಡೆಯುತ್ತಿದೆ. ಹಾಳಾಗಿರುವ ರಸ್ತೆಗಳ ಶಾಶ್ವತ ದುರಸ್ತಿ ಕಾರ್ಯ ನಡೆಸಲಾಗುವದು. ಇದಕ್ಕೆ ರೂ.340 ಕೋಟಿ ಅಗತ್ಯವಿದ್ದು, ಶೀಘ್ರದಲ್ಲಿ ರಸ್ತೆ ಕಾಮಗಾರಿ ನಡೆಸಲಾಗುವದು ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ತಿಳಿಸಿದರು.ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಯಾವದೇ ಇಲಾಖೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಕೆಲಸಕ್ಕೆ ಕೈ ಹಾಕಿಲ್ಲ. ಬೇರೆ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡುವದೂ ಇಲ್ಲ. ರಾಜ್ಯ ಸರ್ಕಾರ ಸುಭದ್ರವಾಗಿದೆ ಎಂದು ಸ್ಪಷ್ಟಪಡಿಸಿದ ಅವರು ಕೊಡಗು, ಹಾಸನ, ಚಿಕ್ಕಮಗಳೂರು ಕಾಫಿ ಬೆಳೆÀಗಾರರಿಗೆ ಆದ ನಷ್ಟದ ಶೇಕಡಾ 50ರಷ್ಟು ಪರಿಹಾರವನ್ನು ನೀಡುವ ಬಗ್ಗೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಆ ಬಗ್ಗೆ ಕೇಂದ್ರ ಸರ್ಕಾರ ಸ್ಪಂದಿಸುವ ಭರವಸೆ ಇದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಹಾಸನದವರಿಗೆ ರಸ್ತೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ ಎಂಬ ಅಪ್ಪಚ್ಚು ರಂಜನ್ ಆರೋಪವನ್ನು ತಳ್ಳಿಹಾಕಿದ ಹೆಚ್.ಡಿ ರೇವಣ್ಣ ನಾನು ಯಾವದೇ ಗುತ್ತಿಗೆದಾರರನ್ನು ‘ರೆಕಮಂಡ್’ ಮಾಡಲಿಲ್ಲ. ನನ್ನ ಇಲಾಖೆಗೆ ಒಳಪಡುವ ಅಧಿಕಾರಿಗಳು ಕಾನೂನು ಬಿಟ್ಟು ಕೆಲಸ ಮಾಡಬಾರದು. ಕಾನೂನು ಬಾಹಿರ ಕೆಲಸ ಮಾಡಿದರೆ ಕ್ರಮ ಕೈಗೊಳ್ಳಲಾಗುವದು’ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ರೈತರ ಸಾಲ ಮನ್ನಾ ಮಾಡುವ ವಿಚಾರದ ಕುರಿತು ಮಾತನಾಡಿದ ರೇವಣ್ಣ, ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಸಾಲಮನ್ನಾದ ಬಗ್ಗೆ ಮಾತನಾಡಬಾರದು. ಏಕೆಂದರೆ, ನಾವು ಮಾಡಿದಷ್ಟು ಬೇರೆ ಯಾರೂ ಮಾಡಿಲ್ಲ; ಕೇಂದ್ರವು ಕನಿಷ್ಟ ರೂ. 10 ಸಾಲವನ್ನೂ ಮನ್ನಾ ಮಾಡಿಲ್ಲ ಎಂದರು. ರೈತರು ಸಾಲ ಮನ್ನಾದ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಸರ್ಕಾರದಲ್ಲಿ ಸಾಲ ಮನ್ನಾ ಆಗಲಿದೆ ಎಂದರು.
(ಮೊದಲ ಪುಟದಿಂದ)
ಕೇಂದ್ರ ಸರ್ಕಾರ ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡಲಿ
ಕೊಡಗಿನ ಶಾಸಕರು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಿ ಎಂದು ಸಲಹೆಯಿತ್ತರು. ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಹುಣಸೂರು ಶಾಸಕ ಅಡಗೂರು ವಿಶ್ವನಾಥ್ ಅವರೇ ಮುಂದುವರೆಯುತ್ತಾರೆ, ಇದರಲ್ಲಿ ಯಾವದೇ ರೀತಿಯಾದ ಗೊಂದಲ ಬೇಡ. ವಿಶ್ವನಾಥ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವದು ಬಿಡುವದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು ಎಂದು ಈ ಸಂದರ್ಭ ನುಡಿದರು.
ಗೋಷ್ಠಿಯಲ್ಲಿ ಮಾಜಿ ಅರಣ್ಯ ಸಚಿವ ಬಿ.ಎ.ಜೀವಿಜಯ, ಯುವ ಘಟಕದ ಅಧ್ಯಕ್ಷ ಸಿ.ಎಲ್.ವಿಶ್ವ, ಪಪಂ ಸದಸ್ಯರಾದ ವಿ.ಎಸ್.ಆನಂದ್ ಕುಮಾರ್. ಸುರಯ್ಯ ಭಾನು, ಜಗದೀಶ್, ಸುರೇಶ್ ಮತ್ತಿತರರು ಇದ್ದರು.