ಸೋಮವಾರಪೇಟೆ, ಡಿ. 27: ನಡೆದಾಡುವ ದೇವರೆಂದೇ ಹೆಸರು ಗಳಿಸಿರುವ ಸಿದ್ದಗಂಗಾ ಸ್ವಾಮೀಜಿ ಅವರ ಬಗ್ಗೆ ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಲಾಗಿದೆ ಎಂದು ಆರೋಪಿಸಿ ನೀಡಲಾಗಿದ್ದ ದೂರಿನ ಬಗ್ಗೆ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ವಿಚಾರಣೆ ನಡೆದು, ತಪ್ಪೊಪ್ಪಿಗೆ ಪತ್ರದ ನಂತರ ಪ್ರಕರಣಕ್ಕೆ ಇತಿಶ್ರೀ ಹಾಕಲಾಗಿದೆ.

ಮನೀಶ್ ಮಣಿಕಂಠ ಎಂಬ ಹೆಸರಿನಲ್ಲಿ ಬೆಟ್ಟದಳ್ಳಿಯ ಪ್ರಸನ್ನ ಎಂಬವರು ‘ನಡೆದಾಡುವ ದೇವರು’ ವಿಷಯಕ್ಕೆ ಸಂಬಂಧಿಸಿದಂತೆ ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದರು. ಈ ಬಗ್ಗೆ ಕೊಡಗು ಜಿಲ್ಲಾ ವೀರಶೈವ ಮಹಾ ಸಭಾದ ಪ್ರಧಾನ ಕಾರ್ಯದರ್ಶಿ ಜಿ.ಎಂ.ಕಾಂತರಾಜು ಸೇರಿದಂತೆ ಇತರರು ಪೊಲೀಸ್ ದೂರು ನೀಡಿದ್ದರು. ದೂರು ದಾಖಲಾದ ಕೆಲ ದಿನಗಳಲ್ಲಿ ಪ್ರಸನ್ನ ಅವರು ಪತ್ರಿಕಾ ಗೋಷ್ಠಿ ಮೂಲಕ ಕೈಮುಗಿದು ಕ್ಷಮೆಯಾಚಿಸಿದ್ದರು.

ಇದೀಗ ಪೊಲೀಸ್ ದೂರಿನ ಹಿನ್ನೆಲೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರು, ದೂರುದಾರರ ಎದುರು ಪ್ರಸನ್ನ ಅವರ ವಿಚಾರಣೆ ನಡೆಸಿದ್ದು, ಇಂತಹ ಅಚಾತುರ್ಯ ಮಾಡದಂತೆ ಎಚ್ಚರಿಕೆ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಿದರು. ಈ ಸಂದರ್ಭ ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ, ಶನಿವಾರಸಂತೆ ಭಜರಂಗ ದಳದ ಸಹ ಸಂಚಾಲಕ ದಿಲೀಪ್, ಪ್ರಮುಖರಾದ ಮಹದೇವಪ್ಪ, ಲೋಕೇಶ್, ಪರಮೇಶ್, ದಲಿತ ಸಂಘಟನೆಯ ಮುಖಂಡರಾದ ಎಂ.ಪಿ. ಹೊನ್ನಪ್ಪ ಮತ್ತಿತರರು ಹಾಜರಿದ್ದರು.