ಮಡಿಕೇರಿ, ಡಿ. 28: ಭಾರತ ಬಾಕ್ಸಿಂಗ್ ತಂಡದ ಮುಖ್ಯಕೋಚ್ ಆಗಿ ಇತ್ತೀಚೆಗೆ ಪ್ರತಿಷ್ಠಿತವಾದ ದ್ರೋಣಾಚಾರ್ಯ ಪ್ರಶಸ್ತಿ ಗಳಿಸಿದ್ದ ಕೊಡಗಿನ ಚೇನಂಡ ಎ. ಕುಟ್ಟಪ್ಪ ಅವರು ನೇಮಕಗೊಂಡಿದ್ದಾರೆ. ಈ ತನಕ ಸಹಾಯಕ ಕೋಚ್ ಆಗಿ ಬಾಕ್ಸಿಂಗ್ ಪಟುಗಳಿಗೆ ತರಬೇತಿ ನೀಡಿದ್ದ ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿರುವ ಜಿಲ್ಲೆಯ ಕೋಕೇರಿಯವರಾದ ಚೇನಂಡ ಕುಟ್ಟಪ್ಪ ಅವರು ಇದೀಗ ಭಾರತದ ಮುಖ್ಯಕೋಚ್ ಆಗಿ ಎಸ್.ಆರ್. ಸಿಂಗ್ ಅವರ ಸ್ಥಾನಕ್ಕೆ ನಿಯುಕ್ತಿಗೊಂಡಿದ್ದಾರೆ. ಕ್ರೀಡಾ ಜಿಲ್ಲೆ ಖ್ಯಾತಿಯ ಕೊಡಗಿಗೆ ಚೊಚ್ಚಲ ದ್ರೋಣಾಚಾರ್ಯ ಪ್ರಶಸ್ತಿಯನ್ನು ತಂದು ಕೊಡುವ ಮೂಲಕ ದಾಖಲೆ ಸೃಷ್ಟಿಸಿರುವ ಕುಟ್ಟಪ್ಪ ಅವರು ಬಾಕ್ಸಿಂಗ್ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಏರಿರುವ ದಕ್ಷಿಣ ಭಾರತದ ಮೊದಲ ವ್ಯಕ್ತಿಯಾಗಿದ್ದಾರೆ.ಸ್ವತಹ ಬಾಕ್ಸಿಂಗ್ ಪಟುವಾಗಿಯೂ ಸಾಕಷ್ಟು ಪದಕಗಳನ್ನು ಪಡೆದಿರುವ ಇವರು ಕಳೆದ ಹಲವು ವರ್ಷಗಳಿಂದ ಸಹಾಯಕ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸಿದ್ದರು. ದೇಶದ ಪ್ರಮುಖ ಬಾಕ್ಸಿಂಗ್ ಪಟುಗಳಾದ ವಿಜೇಂದರ್ ಸಿಂಗ್, ಎಂ. ಸುರಂಜಯ್ ಸಿಂಗ್, ಶಿವಥಾಪ ಮುಂತಾದವರು ಕುಟ್ಟಪ್ಪ ಅವರ ಗರಡಿಯಲ್ಲಿ ಪಳಗಿದವರಾಗಿದ್ದಾರೆ. ಇತ್ತೀಚೆಗೆ ದ್ರೋಣಾಚಾರ್ಯ ಪ್ರಶಸ್ತಿಗೆ ಭಾಜನರಾದ ಇವರನ್ನು ಚೇನಂಡ ಕುಟುಂಬಸ್ಥರು ಜಿಲ್ಲೆಯಲ್ಲಿ ಸನ್ಮಾನಿಸಿ ಗೌರವಿಸಿದ್ದರು.