ಗೋಣಿಕೊಪ್ಪ, ಡಿ. 27: ಇಲ್ಲಿಗೆ ಸಮೀಪದ ಅತ್ತೂರುವಿನ ನ್ಯಾಷನಲ್ ಅಕಾಡೆಮಿ ಶಾಲೆಯ ವಾರ್ಷಿಕ ಕ್ರೀಡಾ ದಿನಾಚರಣೆಯನ್ನು ಉದ್ಘಾಟಿಸಿದ ಅಥ್ಲೇಟ್ ಅರ್ಜುನ್ ದೇವಯ್ಯ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಬೆರೆತು ಮಾತನಾಡಿದರು.

ಸಾಧನೆ ಮಾಡಲು ಛಲ ಹಾಗೂ ನಂಬಿಕೆ ಇದ್ದರೆ ಸಾಕು, ನಾವು ನಮ್ಮ ಮಾತೃಭೂಮಿಗೆ ಸದಾ ಬೆನ್ನೆಲುಬಾಗಿರ ಬೇಕು. ಬಡತನ ಎನ್ನುವದು ನಮಗೆ ಅಂಟಿದ ಶಾಪವಲ್ಲ, ಅದರ ವಿಮುಕ್ತಿಗೆ ನಮ್ಮ ಶ್ರಮ ಅತ್ಯಗತ್ಯ ಎಂದರು. ಶಾಲೆಯ ಬಗ್ಗೆ ನಂಬಿಕೆ ಇಟ್ಟು ವಿದ್ಯಾರ್ಥಿಗಳನ್ನು ಸೇರಿಸಲು ಪೋಷಕರಲ್ಲಿ ಹುರಿದುಂಬಿಸಿ ದರು. ತಮ್ಮ ಭಾಷಣದ ನಂತರ ಪೋಷಕರೊಂದಿಗೆ ಸಮಾಲೋಚನೆ ನಡೆಸಿದರು.

ಶಾಲಾ ಸಂಸ್ಥಾಪಕಿ ಶಾಂತಿ ಅಚ್ಚಪ್ಪ ಮಾತನಾಡಿ, ಕ್ರೀಡೆ ಮತ್ತು ಪಠ್ಯ ಎನ್ನುವದು ವಿದ್ಯಾರ್ಥಿ ಜೀವನವನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ಬಾಲ್ಯದಿಂದಲೇ ಪುಟ್ಟ ಮಕ್ಕಳು ಸಾಧನೆಯ ಕನಸ್ಸು ಹೊತ್ತಿರಬೇಕು, ಇದಕ್ಕೆ ಪೋಷಕರು ಸಹಕರಿಸಿ ಪ್ರೇರೇಪಿಸಲು ಕರೆ ನೀಡಿದರು.

ಕಾವೇರಿ ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿ ರೀತ ಮಾತನಾಡಿ, ಮಕ್ಕಳಲ್ಲಿ ಶಿಸ್ತಿನ ಪರಿಪಾಲನೆ ಮಾಡುವ, ಬಗ್ಗೆ ವಿವರಿಸಿದರು. ಪ್ರಾಂಶುಪಾಲರಾದ ಅರುಣ್ ಕುಮಾರ್ ಶಾಲೆಯ ಶೈಕ್ಷಣಿಕ ಹಾಗೂ ಕ್ರೀಡಾ ವರದಿ ವಾಚಿಸಿದರು.

ಶಾಲಾ ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನ ನಡೆಯಿತು. ಕ್ರೀಡಾ ಜ್ಯೋತಿಯೊಂದಿಗೆ ಬಂದ ವಿದ್ಯಾರ್ಥಿ ಗಳು ಧ್ವಜ ಗೌರವ ಸಲ್ಲಿಸಿದರು. ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಹಲವು ರೀತಿಯ ಮನರಂಜನಾ ಕ್ರೀಡೆ ನಡೆಸಿ ಬಹುಮಾನಗಳನ್ನು ವಿತರಿಸಲಾ ಯಿತು. ಯೋಗ, ಕರಾಟೆ, ಏರೋಬಿಕ್ಸ್ ಸೇರಿದಂತೆ ಹಲವು ಕವಾಯತುಗಳು ನಡೆದು ನೆರೆದವರ ಗಮನ ಸೆಳೆಯಿತು.

ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕ್ರೀಡೋತ್ಸವಕ್ಕೆ ಕ್ರಿಸ್ಮಸ್ ಗೀತೆಯೊಂದಿಗೆ ತೆರೆ ಎಳೆಯಲಾಯಿತು.