ಸೋಮವಾರಪೇಟೆ, ಡಿ. 27: ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಬಾರದು. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗ ಳಿಂದಾಗುವ ದುಷ್ಪರಿಣಾಮಗಳನ್ನು ಬಿಂಬಿಸುವ ಎಚ್ಚರಿಕೆಯ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ತಾಲೂಕು ತಹಶೀಲ್ದಾರ್ ಸೇರಿದಂತೆ ಆರೋಗ್ಯ ಇಲಾಖಾಧಿಕಾರಿಗಳು ಪಟ್ಟಣದ ಅಂಗಡಿಗಳಿಗೆ ತೆರಳಿ ಮಾಲೀಕರುಗಳಿಗೆ ಸೂಚನೆ ನೀಡಿದರು.
ಕಳೆದ ವರ್ಷ ಬೆಂಗಳೂರಿನಿಂದ ಆಗಮಿಸಿದ್ದ ಉನ್ನತ ಮಟ್ಟದ ಅಧಿಕಾರಿಗಳ ತಂಡ ಪಟ್ಟಣದ ಅನೇಕ ಅಂಗಡಿಗಳಿಗೆ ತೆರಳಿ ಈ ಬಗ್ಗೆ ಸೂಚನೆ ನೀಡಿದ್ದು, ನಿಯಮಗಳನ್ನು ಪಾಲಿಸದ ಮಾಲೀಕರುಗಳಿಗೆ ಸ್ಥಳದಲ್ಲಿಯೇ ದಂಡ ವಿಧಿಸಲಾಗಿತ್ತು.
ಆದರೂ ಸಹ ಪಟ್ಟಣದ ಹಲವಷ್ಟು ಅಂಗಡಿಗಳಲ್ಲಿ ನಿಯಮದಂತೆ ಫಲಕ ಅಳವಡಿಸದ ಹಿನ್ನೆಲೆ ತಾಲೂಕು ತಹಶೀಲ್ದಾರ್ ಮಹೇಶ್, ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಟರಾಜ್, ಆರೋಗ್ಯ ಇಲಾಖೆಯ ಮಹೇಶ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಪಟ್ಟಣದ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರಲ್ಲದೇ, ತಕ್ಷಣ ಫಲಕಗಳನ್ನು ಅಳವಡಿಸಬೇಕು. ತಪ್ಪಿದ್ದಲ್ಲಿ ದಂಡ ವಿಧಿಸಲಾಗುವದು ಎಂದು ಎಚ್ಚರಿಸಿದರು.
ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಬಾರದು. ಇಂತಹ ಉತ್ಪನ್ನಗಳ ಬಳಕೆಯಿಂದ ಎದುರಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಎಚ್ಚರಿಕೆ ಫಲಕವನ್ನು ನಿಗದಿತ ಅಳತೆಯಲ್ಲಿಯೇ ಅಳವಡಿಸಬೇಕು ಎಂದು ಅಧಿಕಾರಿಗಳು ಸೂಚಿಸಿದರು.