ಮಡಿಕೇರಿ, ಡಿ. 28: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ಹಾಗೂ ಶಾಲೆಗೆ ಹೋಗದಿರಲು ಕಾರಣವನ್ನು ಪತ್ತೆ ಹಚ್ಚಲು ನವೆಂಬರ್ 17 ರಿಂದ 28 ರವರೆಗೆ ಸಮೀಕ್ಷೆಯೊಂದು ನಡೆದಿತ್ತು.

ಈ ಸಮೀಕ್ಷೆಯಲ್ಲಿ ಕೊಡಗು ಜಿಲ್ಲೆಯಲ್ಲಿ 326 ಮಕ್ಕಳು ಶಾಲೆಯಿಂದ ಹೊರಗುಳಿದು ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಮಡಿಕೇರಿ ತಾಲೂಕಿನಲ್ಲಿ 29, ಸೋಮವಾರಪೇಟೆ 183 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 114 ಮಕ್ಕಳು ಪತ್ತೆಯಾಗಿದ್ದಾರೆ.

ಶಿಕ್ಷಣ ಇಲಾಖೆಯ ಮುಂದಾಳತ್ವದಲ್ಲಿ ಹಾಗೂ ಕಾರ್ಮಿಕ ಇಲಾಖೆ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಇಲಾಖೆ ಮತ್ತು ಶಾಲಾ ಎಸ್.ಡಿ.ಎಂ.ಸಿ, ಅಂಗನವಾಡಿ, ಆಶಾ ಕಾರ್ಯಕರ್ತರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಶಾಲಾ ಮುಖ್ಯ ವಾಹಿನಿಗೆ ಬಂದ ವಿದ್ಯಾರ್ಥಿಗಳನ್ನು ‘ಎಸ್‍ಎಂಟಿಎಸ್’ ಮೂಲಕ ಕಂಡುಕೊಳ್ಳುವ ವ್ಯವಸ್ಥೆ ಶಿಕ್ಷಣ ಇಲಾಖೆಯಲ್ಲಿದೆ. ಆದರೆ ‘ಎಸ್‍ಎಂಟಿಎಸ್’ ನಮೂದಾಗಿರುವ ವಿದ್ಯಾರ್ಥಿಗಳ ಸಂಖ್ಯೆ , ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಬಳಿಯಿರುವ ಅಂಕಿ ಅಂಶಗಳು ಭಾರೀ ವ್ಯತ್ಯಾಸ ಕಂಡುಬಂದಿರುವ ಕಾರಣ ಹೊಸದಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಡೆದಿದೆ. ಪ್ರಸಕ್ತ 2018-19 ಸಾಲಿನಲ್ಲಿ ರಾಜ್ಯದಲ್ಲಿ 6ರಿಂದ 16 ವರ್ಷದ ಶಾಲಾ ಮಕ್ಕಳು ಸುಮಾರು 82,713 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಕಂಡು ಬಂದಿದೆ. ಈ ಎಲ್ಲಾ ವಿದ್ಯಾರ್ಥಿಗಳನ್ನು ಪುನಃ ಶಾಲೆಗೆ ಕರೆತರಲು ವಿಸ್ತೃತ ತನಿಖೆಯನ್ನು ಶಿಕ್ಷಣ ಇಲಾಖೆ ನವಂಬರ್ ತಿಂಗಳಲ್ಲಿ ನಡೆಸಿದೆ.

ಕಾರಾಗೃಹ, ಕಟ್ಟಡ ಕಾಮಗಾರಿ ನಡೆಯುವ ಸ್ಥಳ, ಗಣಿ ಪ್ರದೇಶ, ಕಾರ್ಖಾನೆಗಳು, ಚಿತ್ರ ಮಂದಿರಗಳು ಎಸ್ಟೇಟ್‍ಗಳು, ಹೊಟೇಲ್, ಕ್ವಾರಿ ಇನ್ನಿತರು ಮಕ್ಕಳು ಕಂಡು ಬರುವ ಸ್ಥಳಗಳಲ್ಲಿ ಸಮೀಕ್ಷೆ ನಡೆದಿದೆ.

ಶಾಲೆ ಬಿಟ್ಟ ಹಾಗೂ ಶಾಲೆಗೆ ದಾಖಲಾದ ಮಕ್ಕಳ ಸಂಖ್ಯೆಯನ್ನು ಎಸ್.ಎಂಟಿ.ಎಸ್.ಗೆ ಅಪ್‍ಡೇಟ್ ಮಾಡಲಾಗಿದೆ.

ಪೋಷಕರೇ ಕಾರಣ: ಜಿಲ್ಲೆಯಲ್ಲಿ ನಡೆದ ಸಮೀಕ್ಷೆಯಲ್ಲಿ ಶಾಲೆಯಿಂದ ಮಕ್ಕಳು ಹೊರಗುಳಿಯಲು ಪೋಷಕರೇ ಕಾರಣ ಎನ್ನಲಾಗಿದೆ. ಬಡತನ, ಹಾಗೂ ಪೋಷಕರ ಅನಕ್ಷರಸ್ಥೆ ಹಾಗೂ ಶಿಕ್ಷಣದ ಬಗ್ಗೆ ಅರಿವಿಲ್ಲದಿರುವದೆ ಕಾರಣವಾಗಿದೆ.

ಬಹುತೇಕ ಮಕ್ಕಳು ಇಂದು ಶಿಕ್ಷಣದಿಂದ ವಂಚಿತರಾಗಿ ತಮ್ಮ ಚಿಕ್ಕ ವಯಸ್ಸಿನಲ್ಲೇ ಬಾಲ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.

ನಡೆಯದ ಸಭೆ: ನವಂಬರ್ 14 ರಿಂದ 28 ರವರೆಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಲೆಗಳಲ್ಲಿ ಮಕ್ಕಳ ಗ್ರಾಮ ಸಭೆ ನಡೆಸಿ ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿಯನ್ನು ಪಡೆಯಲು ಶಿಕ್ಷಣ ಇಲಾಖೆ ಸೂಚಿಸಿತ್ತು. ಆದರೆ ಜಿಲ್ಲೆಯಲ್ಲಿ ಬೆರಳೆಣಿಕೆಯ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಾತ್ರ ಮಕ್ಕಳ ಗ್ರಾಮ ನಡೆದಿದೆ. ಬಹುತೇಕ ಗ್ರಾ.ಪಂ. ಮಕ್ಕಳ ಗ್ರಾಮ ಸಭೆ ನಡೆಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಬಹಳ ಯಶಸ್ವಿಯಾಗಿ ನಡೆದಿದೆ. ಮಕ್ಕಳು ಶಾಲೆಯಿಂದ ಹೊರಗುಳಿಯದಿರಲು ಶಿಕ್ಷಣ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದೆ. ಜಿಲ್ಲೆಯಲ್ಲಿ 6-ರಿಂದ 16 ವಯಸ್ಸಿ ನವರೆಗಿನ ಮಕ್ಕಳು ಶಾಲೆಯಿಂದ ದೂರ ಉಳಿದದ್ದು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಕೂಡಲೇ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಚ್ಚಾಡೋ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಶಿಕ್ಷಣದಿಂದ ವಂಚಿತರಾಗಿ ಹೊಟೇಲ್, ಚಿತ್ರ ಮಂದಿರ, ಎಸ್ಟೇಟ್, ರಸ್ತೆ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಬಾಲ ಕಾರ್ಮಿಕರಾಗಿ ದುಡಿಯುವದು ಕಂಡು ಬಂದಲ್ಲಿ ಇಲಾಖೆಗೆ ಕೂಡಲೇ ಮಾಹಿತಿ ನೀಡಿ ಸಹಕರಿಸಬೇಕು.