ಮಡಿಕೇರಿ, ಡಿ.28: ಪ್ರತಿಯೊಬ್ಬರೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಗ್ರಾಹಕರಾಗಿದ್ದು, ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಹೊಂದುವಂತೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಸಲಹೆ ಮಾಡಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಕುಶಾಲನಗರ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ

(ಮೊದಲ ಪುಟದಿಂದ) ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗ್ರಾಹಕ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಯಾವದೇ ಕಾರಣಕ್ಕೂ ಗ್ರಾಹಕರು ಮೋಸಕ್ಕೆ ಒಳಗಾಗಬಾರದು. ನಾವು ಪಡೆಯುವ ಗ್ರಾಹಕ ಸೇವೆಗಳ ಬಗ್ಗೆ ಎಚ್ಚರವಿರಬೇಕು. ಪದಾರ್ಥಗಳಲ್ಲಿನ ಕಾಲಾವಧಿ ಬಗ್ಗೆ ಯೋಚಿಸಿ ಪಡೆಯಬೇಕು ಎಂದರು.

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷರಾದ ಸಿ.ವಿ.ಮರಗೂರ ಅವರು ಮಾತನಾಡಿ ಗ್ರಾಹಕರಿಗೆ ವಿಶೇಷವಾದ ಕಾಯ್ದೆ ಯಿದ್ದು, ಇದನ್ನು ಬಳಸಿಕೊಳ್ಳುವಂತಾಗಬೇಕು. ಗ್ರಾಹಕರ ಪರಿಹಾರ ಕೇಂದ್ರದಲ್ಲಿ ದೂರು ನೀಡಿದ್ದಲ್ಲಿ ಶೀಘ್ರದಲ್ಲಿ ಪ್ರಕರಣ ಇತ್ಯರ್ಥ ಮಾಡಲಾಗುವದು ಎಂದು ತಿಳಿಸಿದರು.

ವಕೀಲರಾದ ಎಂ.ಎ. ನಿರಂಜನ್ ಮಾತನಾಡಿ ‘ಗ್ರಾಹಕರು ಸರಕುಗಳಲ್ಲ’ ಎಂಬುದನ್ನು ತಿಳಿದಿರಬೇಕು. ಗ್ರಾಹಕರಿಗೆ ಗೌರವದಿಂದ ಸೇವೆ ಕಲ್ಪಿಸಬೇಕು. ಗ್ರಾಹಕ ಹಕ್ಕುಗಳ ಬಗ್ಗೆ ಪ್ರಜ್ಞಾವಂತರಾಗಬೇಕು ಎಂದರು.

ತೂಕ ಮತ್ತು ಅಳತೆಯಲ್ಲಿ ಮೋಸ ಹೋಗದಂತೆ ಎಚ್ಚರ ವಹಿಸಬೇಕು. ಖರೀದಿ ಮಾಡುವ ವಸ್ತುಗಳು ಗುಣಮಟ್ಟದಿಂದ ಕೂಡಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಸಲಹೆ ಮಾಡಿದರು.

ಆಹಾರ ಇಲಾಖೆಯ ಉಪ ನಿರ್ದೇಶಕರಾದ ಎಸ್.ಸದಾಶಿವಯ್ಯ ಮಾತನಾಡಿ ಗ್ರಾಹಕರು ಪ್ರತೀ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಮೋಸ ಹೋಗುತ್ತಾರೆ. ಮೋಸ ಹೋಗುವದನ್ನು ತಪ್ಪಿಸಲು ಗ್ರಾಹಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಪದಾರ್ಥಗಳ ತೂಕ ಮತ್ತು ಅಳತೆಯಲ್ಲಿ ಮೋಸ ಹೋಗದಂತೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಕುಶಾಲನಗರ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಗಿರೀಶ್ ಇತರರು ಇದ್ದರು. ತೂಕ, ಅಳತೆ ಮತ್ತು ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕರಾದ ಹೇಮಣ್ಣ ಬಿ.ಮಲ್ಲೂರ ಅವರು ಸ್ವಾಗತಿಸಿದರು. ಸಂತ ಮೈಕಲರ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಆಹಾರ ನಿರೀಕ್ಷಕರಾದ ಸದಾನಂದ ವಂದಿಸಿದರು.