ಶನಿವಾರಸಂತೆ, ಡಿ. 26: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಶನಿವಾರಸಂತೆ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 62ನೇ ಪರಿನಿರ್ವಾಣ ದಿನದ ಅಂಗವಾಗಿ ದಲಿತ ಮಹಿಳಾ ಒಕ್ಕೂಟದ ಪದಾಧಿಕಾರಿಗಳ ರಾಜ್ಯಮಟ್ಟದ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಹೈಕೋರ್ಟ್ ವಕೀಲ ಚಂದ್ರಮೌಳಿ ಮಾತನಾಡಿ, ಪ್ರತಿಯೊಬ್ಬ ಪ್ರಜೆಯ ಬದುಕಿಗೆ ಭದ್ರ ಬುನಾದಿಯನ್ನು ಸಂವಿಧಾನ ಹಾಕಿಕೊಟ್ಟಿದೆ. ಅಂಬೇಡ್ಕರ್ ಅವರು ವಿಶ್ವಕೋಶವಿದ್ದಂತೆ ಎಂದು ಬಣ್ಣಿಸಿದ ಅವರು ಇಂತಹ ಮಹಾನ್ ವ್ಯಕ್ತಿಯ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರತಿಯೊಬ್ಬ ಪ್ರಜೆಗೂ ಮತದಾನ ಹಕ್ಕು ನೀಡುವ ಮೂಲಕ ಸಂವಿಧಾನ ರಾಜಕೀಯ ಶಕ್ತಿ ನೀಡಿದೆ. ಮತ ಎಂಬ ಅಸ್ತ್ರದ ಮೂಲಕ ಉತ್ತಮ ರಾಜಕಾರಣಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗಿರುವದು ನಮ್ಮ ಕರ್ತವ್ಯ. ಆದರೆ ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಸಂವಿಧಾನ ಬದ್ಧವಾಗಿ ದೊರೆತ ಹಕ್ಕನ್ನು ಹಣಕ್ಕಾಗಿ ಮಾರಿಕೊಳ್ಳುತ್ತಿರುವದು ದುರಾದೃಷ್ಟಕರ ಇದು ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು. ವಿಚಾರವಾದಿ ಮಂಗಳೂರು ವಿಜಯ ಮಾತನಾಡಿ, ಮಹಿಳೆಯರು ವಿದ್ಯಾವಂತರಾಗಿ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅರಿತುಕೊಳ್ಳುವ ಮೂಲಕ ಸಾಮಾಜಿಕ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ದಲಿತ ಮಹಿಳೆಯರಲ್ಲಿ ಜಾಗೃತಿ ಮೂಡಿಸುವಂತ ವಿಚಾರ ಸಂಕಿರಣಗಳನ್ನು ತಾಲೂಕು, ಜಿಲ್ಲೆ ಹಾಗೂ ವಿಭಾಗೀಯ ಮಟ್ಟದಲ್ಲಿ ಆಯೋಜನೆ ಮಾಡಿ ಸಂಘಟನೆಗೆ ಒತ್ತು ನೀಡುವ ಕೆಲಸವನ್ನು ಮಹಿಳಾ ಒಕ್ಕೂಟ ಮಾಡಬೇಕು ಎಂದರು.
ಮೈಸೂರಿನ ರಂಗಕರ್ಮಿ ಜನಾರ್ಧನ್ (ಜೆನ್ನಿ) ಮಾತನಾಡಿ, ದಲಿತ ಸಮುದಾಯ ಸಂಘಟಿತರಾಗುವ ಮೂಲಕ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಕೆಲಸ ಮಾಡಬೇಕು. ಅಂಬೇಡ್ಕರ್, ಲೋಹಿಯಾ, ಸಾವಿತ್ರಿಬಾಯಿ ಮೊದಲಾದ ಮಹಾನೀಯರ ವಿಚಾರಧಾರೆಗಳನ್ನು ಮೈಗೂಡಿಸಿ ಕೊಂಡು ಅವರ ಹಾದಿಯಲ್ಲಿ ಸಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ವಹಿಸಿದ್ದರು.
ಈ ಸಂದರ್ಭ ಕರ್ನಾಟಕ ರಾಜ್ಯ ದಲಿತ ಮಹಿಳಾ ಒಕ್ಕೂಟ ಅಧ್ಯಕ್ಷೆ ಶೋಭಾ ಕಟ್ಟಿಮನಿ, ಸಂಘಟನಾ ಸಂಚಾಲಕಿ ಪ್ರೇಮಾ ವಸಂತ್, ಗೀತಾ ರಾಥೋಡ್, ಜಿ.ಪಂ. ಮಾಜಿ ಸದಸ್ಯ ವಿ.ಪಿ. ಶಶಿಧರ್, ತಾ.ಪಂ. ಮಾಜಿ ಸದಸ್ಯ ಜೆ.ಆರ್. ಪಾಲಾಕ್ಷ, ವಕೀಲ ಜಯೇಂದ್ರ, ಬ್ಯಾಡಗೊಟ್ಟ ಗ್ರಾ.ಪಂ. ಅಧ್ಯಕ್ಷೆ ನಿರ್ಮಲ ಸುಂದರ್, ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ಮಂಜುಳಾ ಬೆಂಬಳೂರು, ಜಿಲ್ಲಾ ಸಂಚಾಲಕ ಎಂ.ಎಸ್. ವೀರೇಂದ್ರ, ಜಿಲ್ಲಾ ಸಂಘಟನಾ ಸಂಚಾಲಕ ಕಾಂತರಾಜು, ಜಿಲ್ಲಾ ಖಜಾಂಚಿ ಬಿ.ಎಸ್. ದಿನೇಶ್, ತಾಲೂಕು ಸಂಚಾಲಕರಾದ ಬಿ.ಕೆ. ಯತೀಶ್, ಹರೀಶ್ ಪೆರಾಜೆ ಮತ್ತಿತರರು ಉಪಸ್ಥಿತರಿದ್ದರು.