ಮಡಿಕೇರಿ, ಡಿ. 25: ಶೈಕ್ಷಣಿಕ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವವರಿಗೆ ಉತ್ತೇಜನ ನೀಡುತ್ತಾ ಬರುತ್ತಿರುವ ಕೊಡಗು ಗೌಡ ವಿದ್ಯಾಸಂಘದ ಮೂಲಕ ವಿದ್ಯಾಸಂಸ್ಥೆ ಸ್ಥಾಪನೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ವಿದ್ಯಾಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಹೇಳಿದರು.
ವಿದ್ಯಾಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾಸಂಘದ ವತಿಯಿಂದ ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ವರ್ಷಂಪ್ರತಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಿ ಪ್ರೋತ್ಸಾಹಿಸಲಾಗುತ್ತಿದೆ. ಸಂಘದ ಮೂಲಕ ವಿದ್ಯಾಸಂಸ್ಥೆಯೊಂದನ್ನು ಸ್ಥಾಪನೆ ಮಾಡಿ ಆ ಮೂಲಕ ಶೈಕ್ಷಣಿಕ ಕ್ಷೇತ್ರಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಸಾಗುತ್ತಿರುವದಾಗಿ ಹೇಳಿದರು. ಸಮಾಜ ಬಾಂಧವರು, ಹಿರಿಯರು ನೀಡಿರುವ ಸಲಹೆ - ಸೂಚನೆಗಳನ್ನು ಸಂಘದ ಸಭೆಯಲ್ಲಿ ಮಂಡಿಸಿ ಕ್ರಮ ಕೈಗೊಳ್ಳುವದಾಗಿ ಹೇಳಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಸ.ಪ.ಪೂ. ಕಾಲೇಜು ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ಕೋಡಿ ಗುರುರಾಜ್ ಅವರು, ನಮ್ಮ ಭಾಷೆ, ಆಚಾರ - ವಿಚಾರಗಳನ್ನು ಮರೆಯಬಾರದು. ಭಾಷೆಯ ಬೆಳವಣಿಗೆಗೆ ಎಲ್ಲರೂ ಶ್ರಮಿಸಬೇಕು; ವಿದ್ಯಾರ್ಥಿಗಳು ವಿದ್ಯಾರ್ಜನೆ ಯೊಂದಿಗೆ ನಮ್ಮ ಭಾಷೆ, ಸಂಸ್ಕøತಿ ಯತ್ತಲೂ ಒಲವು ತೋರಬೇಕೆಂದು ಕರೆ ನೀಡಿದರು. ನಮ್ಮವರು ಉನ್ನತಾಧಿಕಾರಿಗಳ
ಹುದ್ದೆ ಅಲಂಕರಿಸಬೇಕು, ನಾವು ಕೂಡ ಕೊಡಗಿನವರು, ಇಲ್ಲಿನ ಸಂಸ್ಕøತಿಯೊಂದಿಗೆ ಬೆರೆತವರೆಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕೆಂದ ಅವರು, ತಾನೊಬ್ಬ ಕೊಡಗಿನ ಗೌಡ ಎಂದುಕೊಳ್ಳಲು ಹಿಂಜರಿಕೆ ಬೇಡವೆಂದು ಕಿವಿಮಾತು ಹೇಳಿದರು.
ಅತಿಥಿಯಾಗಿದ್ದ ಬಿಎಸ್‍ಎನ್‍ಎಲ್ ಸಬ್ ಡಿವಿಜನ್ ಅಧಿಕಾರಿ ಹೊಸೂರು ಗೀತಾ ರಮೇಶ್ ಮಾತನಾಡಿ, ಪ್ರಥಮವಾಗಿ ನಮ್ಮಲ್ಲಿ ಆತ್ಮವಿಶ್ವಾಸ ಸ್ವಾಭಿಮಾನವಿರಬೇಕು. ಇವೆರಡು ಇರುವ ಸಮಾಜಗಳು ಮುಂದುವರಿಯುತ್ತವೆ ಎಂದು ಹೇಳಿದರು. ಮಕ್ಕಳು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೋ ಎಂಬದನ್ನು ಗಮನಿಸಿ ಅವರುಗಳಿಗೆ ಪ್ರೋತ್ಸಾಹ ನೀಡಬೇಕು. ಅವರವರ ಕನಸು ಅವರದ್ದು, ಮತ್ತೊಬ್ಬರು ಅವರನ್ನು ತಯಾರು ಮಾಡಲು ಸಾಧ್ಯವಿಲ್ಲ. ಅವರುಗಳೇ ಬೆಳೆಸಿಕೊಳ್ಳಬೇಕಿದೆ ಎಂದರು.
20 ವರ್ಷಗಳ ಹಿಂದೆ ನಮ್ಮ ಭಾಷೆ ಮಾತನಾಡಲು ಹಿಂಜರಿಕೆ ಇತ್ತು. ಆದರೆ ಇದೀಗ ಅದು ಇಲ್ಲವಾಗಿದೆ. ಈಗ ಎಲ್ಲರೂ ನಿರ್ಭಿಡೆಯಿಂದ ಅರೆಭಾಷೆ ಮಾತನಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ಭಾಷೆಯ ಹಳೆಯ ಪದಗಳನ್ನು ಉಳಿಸಿಕೊಂಡರೆ ನಮ್ಮ ಭಾಷೆ ಎಂದಿಗೂ ಅಳಿಯುವದಿಲ್ಲ. ನಮ್ಮ ಭಾಷೆಯನ್ನು ಬೆಳೆಸುವದರೊಂದಿಗೆ, ಇತರ ಭಾಷೆಯನ್ನು ಪ್ರೀತಿಸಬೇಕು, ಹಿರಿಯರ ಅನುಭವ, ಕಿರಿಯರ ಆಶಯಗಳನ್ನು ಪಡೆದುಕೊಂಡು ಹೊಸತನದತ್ತ ಸಾಗೋಣವೆಂದು ಹೇಳಿದರು.
ಹಿರಿಯರಾದ ಪರಿವಾರನ ಅಪ್ಪಾಜಿ ಅವರು, ಪ್ರಸ್ತುತ ಪೋಷಕರು ಎಳೆಯ ಮಕ್ಕಳ ಕೈಯಲ್ಲಿ ಮೊಬೈಲ್ ನೀಡಿ ತಪ್ಪು ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಬಾಲಕರಲ್ಲಿ ಕಲಿಕೆಯ ಆಸಕ್ತಿಯೂ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ವಿದ್ಯಾಸಂಘದಲ್ಲಿ ಬಹುತೇಕ ಯುವಕರ ತಂಡವಿದ್ದು, ಹೊಸ ರೀತಿಯ ಕಾರ್ಯಕ್ರಮಗಳೊಂದಿಗೆ ಸಾಧನೆ ಮಾಡಬೇಕೆಂದು ಹೇಳಿದರು.
ಸನ್ಮಾನಿತರಾದ ಡಾ. ಕೂಡಕಂಡಿ ದಯಾನಂದ ಅವರು, ಯಾರಾದರೂ ಉನ್ನತ ಹುದ್ದೆಯ ಪರೀಕ್ಷೆ ಬರೆಯಲು, ಸಂಶೋಧನೆ ಮಾಡಲೆಂದು ತೆರಳಿದಾಗ ಹಿರಿಯರು, ಅನುಭವಸ್ಥರಿಂದ ಯಾವದೇ ಸಹಕಾರ ಸಿಗುವದಿಲ್ಲ. ಹಾಗಾಗಿ ಆಸಕ್ತಿ ಇರುವವರಿಗೆ ನಮ್ಮಲ್ಲೇ ಇರುವ ಉನ್ನತ ಸ್ಥಾನದಲ್ಲಿರುವವರಿಂದ ತರಬೇತಿ, ಮಾರ್ಗದರ್ಶನ ನೀಡುವಂತಾಗಬೇಕೆಂದು ಸಲಹೆ ಮಾಡಿದರು.
ಮೀನುಗಾರಿಕೆ ಇಲಾಖೆ ಸೋಮವಾರಪೇಟೆ ತಾಲೂಕು ಸಹಾಯಕ ನಿರ್ದೇಶಕಿ ಕುದುಕುಳಿ ಮಿಲನ ಭರತ್ ಅವರು ಕೂಡ ಏನಾದರೂ ಸಾಧನೆ ಮಾಡುವ ಹಂತದಲ್ಲಿ ಯಾರಿಂದಲೂ ಸಹಕಾರ ಸಿಗುವದಿಲ್ಲ. ಈ ನಿಟ್ಟಿನಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು, ಯಾವ ರೀತಿಯಲ್ಲಿ ಪರೀಕ್ಷೆಗೆ ತಯಾರಾಗಬಹುದೆಂಬ ಬಗ್ಗೆ ವಿದ್ಯಾಸಂಘದ ಮೂಲಕ ವ್ಯವಸ್ಥೆ ಮಾಡಿದಲ್ಲಿ ತಾವೂ ಕೂಡ ಯಾವದೇ ಫಲಾಪೇಕ್ಷೆಯಿಲ್ಲದೆ ಮಾರ್ಗದರ್ಶನ ನೀಡುವದಾಗಿ ಹೇಳಿದರು. ಇದೇ ಸಂದರ್ಭ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಕುಯ್ಯಮುಡಿ ಸುಲೋಚನಾ ಅಪ್ಪಾಜಿ, ಸಂಘದ ನಿರ್ದೇಶಕರುಗಳಿದ್ದರು. ಸಂಘದ ಕಾರ್ಯದರ್ಶಿ ಕೊಟ್ಟಕೇರಿಯನ ದಯಾನಂದ ಸ್ವಾಗತಿಸಿದರೆ, ಖಜಾಂಚಿ ಕಟ್ಟೆಮನೆ ಸೊನಾಜಿತ್, ನಿರ್ದೇಶಕರಾದ ಪರಿಚನ ಸತೀಶ್, ಕೆದಂಬಾಡಿ ಕಾಂಚನ ಅವರುಗಳು ನಿರೂಪಿಸಿದರು. ಉಪಾಧ್ಯಕ್ಷ ಅಂಬೆಕಲ್ ನವೀನ್‍ಕುಶಾಲಪ್ಪ ವಂದಿಸಿದರು.