ಮಡಿಕೇರಿ, ಡಿ. 25: ನೂತನ ವರ್ಷಾರಂಭದಿಂದ ಕೇಬಲ್ ಮತ್ತು ಡಿಟಿಎಚ್‍ನ ಮಾಸಿಕ ದರದಲ್ಲಿ ಬದಲಾವಣೆ ತರಲು ಕೇಂದ್ರ ಮುಂದಾಗಿದ್ದು, ಪ್ರಸ್ತುತ ಇರುವ ವ್ಯವಸ್ಥೆ ಡಿ. 29ಕ್ಕೆ ಕೊನೆಗೊಳ್ಳಲಿದೆ. ತಾ. 29ಕ್ಕೆ ಹಳೆಯ ದರದ ವ್ಯವಸ್ಥೆ ಬದಲಾಗಲಿದ್ದು, ಇನ್ನು ಮುಂದೆ ಗ್ರಾಹಕರು ತಮಗೆ ಬೇಕಾದ ಚಾನಲ್‍ಗಳನ್ನು ಹೊಂದಿಕೊಳ್ಳಬಹುದಾದ ನೀತಿಯನ್ನು ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಜಾರಿಗೆ ತರುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕೇಬಲ್ ಉದ್ದಿಮೆದಾರರು ಆಕ್ಷೇಪ ವ್ಯಕ್ತಪಡಿಸಿದ್ದರೂ ಇದಕ್ಕೆ ಸ್ಪಂದನ ಸಿಗುವ ಸಾಧ್ಯತೆಯ ಕುರಿತು ಇನ್ನೂ ಸ್ಪಷ್ಟಗೊಂಡಿಲ್ಲ. ಈ ನಡುವೆ ಕೇರಳ ರಾಜ್ಯದಲ್ಲಿ ನೂತನ ವ್ಯವಸ್ಥೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ಎರಡು ತಿಂಗಳ ಕಾಲಕ್ಕೆ ದೊರೆತಿದೆ. ಕರ್ನಾಟಕದಲ್ಲಿಯೂ ಹೊಸ ವ್ಯವಸ್ಥೆ ಜಾರಿಯನ್ನು ಪ್ರಶ್ನಿಸಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಕೇಬಲ್ ಉದ್ದಿಮೆದಾರರು ಪ್ರಯತ್ನ ನಡೆಸಿದ್ದಾರೆ. ಆದರೆ ರಾಜ್ಯದಲ್ಲಿ ಈ ತನಕ ಇದು ಇನ್ನೂ ಅಂತಿಮಗೊಂಡಿಲ್ಲ.
ಹೊಸ ನೀತಿಯೇ ಜಾರಿಯಾದಲ್ಲಿ ಏನು..?
ಒಂದು ವೇಳೆ ‘ಟ್ರಾಯ್’ ವಿಧಿಸಲು ಮುಂದಾಗಿರುವ ಹೊಸ ನೀತಿಯೇ ಜಾರಿಗೆ ಬಂದಲ್ಲಿ ಕೇಬಲ್ ಗ್ರಾಹಕರು ತಮಗೆ ಬೇಕಾದ ಚಾನಲ್‍ಗಳನ್ನು ಪಡೆದುಕೊಳ್ಳಲು ಕೇಬಲ್ ಸಂಸ್ಥೆಯವರೊಂದಿಗೆ ವ್ಯವಹರಿಸಬೇಕಾಗಿದೆ. ಹೊಸ ನೀತಿಯಂತೆ ಕನಿಷ್ಟ ದರ ರೂ. 130 ಹಾಗೂ ಇದಕ್ಕೆ ಶೇ. 18 ತೆರಿಗೆ ಖಚಿತ. ‘ಫ್ರೀಟುಏರ್’ ಇರುವ ಹಲವು ಚಾನಲ್‍ಗಳು ಉಚಿತವಾಗಿ ಸಿಗಬಹುದಾದರೂ ಹಣ ಪಾವತಿ ನಿಗದಿ ಪಡಿಸಿರುವ ನಿರ್ದಿಷ್ಟ ಚಾನಲ್‍ಗಳನ್ನು ಪಡೆಯಲು ಗ್ರಾಹಕರು ಅದಕ್ಕೆ ಅನುಗುಣವಾಗಿ ಶುಲ್ಕ ಪಾವತಿಸಬೇಕಾಗುತ್ತದೆ.
ಸದ್ಯದ ಮಟ್ಟಿಗೆ ಫ್ರೀಟುಏರ್ ಹಾಗೂ ಉಚಿತವಾಗಿರುವ ಚಾನಲ್‍ಗಳು ಸೇರಿ ಸುಮಾರು 175 ಚಾನಲ್‍ಗಳು ಸಿಗಬಹುದಾದರೂ ಪ್ರಸ್ತುತ ವೀಕ್ಷಕರು ಹೆಚ್ಚಿರುವ ಚಾನಲ್‍ಗಳು ಇದರಲ್ಲಿ ಬಾರದು ಎಂಬದು ಮಡಿಕೇರಿಯ ಕೇಬಲ್ ಉದ್ಯಮಿ ತಮ್ಮು ಪೂವಯ್ಯ ಅವರ ಮಾತು.
(ಮೊದಲ ಪುಟದಿಂದ) ಈಗಾಗಲೇ ಆಯಾ ಚಾನಲ್‍ಗಳಲ್ಲಿ ಯಾವ ಯಾವ ಚಾನಲ್‍ಗೆ ಎಷ್ಟೆಷ್ಟು ದರ ಎಂಬದನ್ನು ಬಿತ್ತರಿಸಲಾಗುತ್ತಿದೆ ಎಂದು ತಿಳಿಸಿದ ಅವರು ಹೊಸ ನೀತಿಯೇ ಅನಿವಾರ್ಯವಾದಲ್ಲಿ ಗ್ರಾಹಕರು ಬಾಡಿಗೆಯನ್ನು ಈ ಹಿಂದಿನಂತೆ ತಿಂಗಳು ಮುಗಿದ ಬಳಿಕ ಪಾವತಿಸುವ ಅವಕಾಶ ಇಲ್ಲವಾಗುತ್ತದೆ. ಮೊಬೈಲ್‍ನ ‘ ಫ್ರೀ ಪೈಡ್’ ವ್ಯವಸ್ಥೆಯಂತೆ ಮೊದಲೇ ತಾವು ಆಯ್ಕೆ ಮಾಡಿಕೊಳ್ಳುವ ಚಾನಲ್‍ಗಳಿಗೆ (ಉಚಿತ ಹೊರತುಪಡಿಸಿ) ಶುಲ್ಕ ಪಾವತಿಸಬೇಕು. ಇದಕ್ಕಾಗಿ ವಿವಿಧ ಚಾನಲ್‍ಗಳು ಹಾಗೂ ಆಯಾ ಚಾನಲ್‍ಗಳ ಶುಲ್ಕ ವಿರುವ ವಿವರದ ಪಟ್ಟಿಯನ್ನು ತಯಾರಿಸಲಾಗುತ್ತದೆ. ಗ್ರಾಹಕರು ಕಚೇರಿಗೆ ಆಗಮಿಸಿ, ತಮ್ಮ ಆಸಕ್ತಿ ಚಾನಲ್‍ಗಳನ್ನು ಮೊದಲೇ ಹಣ ಪಾವತಿಸಿ ಪಡೆದುಕೊಳ್ಳಬೇಕಿದೆ. ಈ ಮಧ್ಯೆ ಕೇಬಲ್ ಆಪರೇಟರ್‍ಗಳು ನ್ಯಾಯಾಲಯದ ನಿರ್ದೇಶನವನ್ನು ಎದುರು ನೋಡುತ್ತಿದ್ದಾರೆ.