ಮಡಿಕೇರಿ, ಡಿ. 22: ಅಮೇರಿಕಾ ಕನ್ನಡ ಕೂಟ, ಹವ್ಯಕ ಸಂಘಗಳಿಂದ ಕೊಡಗಿನ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಸಂಗ್ರಹಿಸಲಾದ ರೂ. 5 ಲಕ್ಷಗಳನ್ನು ರೋಟರಿ ಜಿಲ್ಲೆ 3181 ನಿಂದ ಉದ್ದೇಶಿತ ಸಂತ್ರಸ್ತರ ಮನೆ ನಿರ್ಮಾಣಕ್ಕಾಗಿ ಹಸ್ತಾಂತರಿಸಲಾಯಿತು.

ಮಡಿಕೇರಿ ರೋಟರಿ ಸಭಾಂಗಣದಲ್ಲಿ ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ಆಯೋಜಿತ ಕಾರ್ಯಕ್ರಮದಲ್ಲಿ ಅಮೇರಿಕಾದ ಅಟ್ಲಾಂಟದಲ್ಲಿ ನೆಲಸಿರುವ ವೈದ್ಯ ದಂಪತಿ ಡಾ.ಸುಬ್ರಹ್ಮಣ್ಯಭಟ್ ಮತ್ತು ಅನ್ನಪೂರ್ಣ ಭಟ್ ಅವರುಗಳು ಅಟ್ಲಾಂಟ ಕನ್ನಡ ಕೂಟ ಮತ್ತು ಹವ್ಯಕ ಬಳಗದಿಂದ ಸಂಗ್ರಹಿತವಾದ ರೂ. 5 ಲಕ್ಷ ಚೆಕ್‍ನ್ನು ಮಡಿಕೇರಿ ರೋಟರಿ ಅಧ್ಯಕ್ಷ ಓ.ಎಸ್. ಚಿಂಗಪ್ಪ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಅಟ್ಲಾಂಟದ ರೋಟರಿ ಸದಸ್ಯರೂ ಆಗಿರುವ ಡಾ. ಸುಬ್ರಮಣ್ಯ ಭಟ್, ಅಟ್ಲಾಂಟ ವ್ಯಾಪ್ತಿಯಲ್ಲಿ ನೆಲಸಿರುವ ಕನ್ನಡಿಗರ ಸಹಕಾರದಿಂದ ಈ ರೀತಿಯ ನೆರವು ಸಾಧ್ಯವಾಯಿತು ಎಂದು ಸ್ಮರಿಸಿಕೊಂಡರು.

ಕೊಡಗಿನಲ್ಲಿ ಜನಿಸಿ ಅಟ್ಲಾಂಟದಲ್ಲಿ ವೈದ್ಯೆಯಾಗಿರುವ ಡಾ. ಅನ್ನಪೂರ್ಣ ಭಟ್ ಮಾತನಾಡಿ, ತಾನು ಹುಟ್ಟಿ ಬೆಳೆದ ಕೊಡಗಿನಲ್ಲಿ ಈ ರೀತಿಯ ದುರಂತ ಸಂಭವಿಸಿದ್ದು ನೋವುಂಟು ಮಾಡಿತ್ತು. ಕೊಡಗಿನ ಸಂತ್ರಸ್ತರಿಗಾಗಿ ದೂರದ ದೇಶದಲ್ಲಿಯೂ ಕನ್ನಡಿಗರ ಮನಸ್ಸುಗಳು ಮಿಡಿದಿವೆ ಎಂದರು.

ರೋಟರಿ ಜಿಲ್ಲೆಯಿಂದ ಸಂತ್ರಸ್ತರಿಗಾಗಿ ಮನೆ ನಿರ್ಮಾಣ ಕಾರ್ಯದ ಉಸ್ತುವಾರಿ ಹೊಂದಿರುವ ಹಿರಿಯ ರೊಟೇರಿಯನ್ ಡಾ. ರವಿ ಅಪ್ಪಾಜಿ ಮಾಹಿತಿ ನೀಡಿ, ಈಗಾಗಲೇ ಜಾಗತಿಕ ಮಟ್ಟದಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ ಅನೇಕ ದೇಶಗಳಲ್ಲಿ ಗಟ್ಟಿಮುಟ್ಟಾದ ಮನೆ ನಿರ್ಮಾಣ ಮಾಡಿ ಯಶಸ್ಸಾಗಿರುವ ಹೆಬಿಟೇಟ್ ಫಾರ್ ಹ್ಯುಮಾನಿಟಿ ಇಂಡಿಯಾ ಎಂಬ ಅಂತರ್ರಾಷ್ಟ್ರೀಯ ಸಂಸ್ಥೆಗೆ ರೋಟರಿ ಜಿಲ್ಲೆ 3181 ನಿಂದ ನಿರ್ಮಿಸಲಾಗುವ ರೀಬಿಲ್ಡ್ ಕೊಡಗು ಯೋಜನೆಯ ಮನೆ ನಿರ್ಮಾಣದ ಜವಾಬ್ದಾರಿ ನೀಡಲಾಗಿದೆ. ಶೀಘ್ರದಲ್ಲಿಯೇ ರೂ. 5 ಲಕ್ಷ ವೆಚ್ಚ ಭರಿಸಿ ಮನೆ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಮನೆ ನಿರ್ಮಾಣಕ್ಕಾಗಿ ಅರ್ಹ ಸಂತ್ರಸ್ತರನ್ನೂ ವಿಳಂಬರಹಿತವಾಗಿ ಗುರುತಿಸ ಲಾಗುತ್ತದೆ ಎಂದು ಹೇಳಿದ ಡಾ. ರವಿಅಪ್ಪಾಜಿ ಅಂತರ್ರಾಷ್ಟ್ರೀಯ ರೋಟರಿಯಿಂದಲೂ ಪ್ರಾರಂಭಿಕ ಹಂತದಲ್ಲಿ 25 ಮನೆ ನಿರ್ಮಾಣಕ್ಕಾಗಿ ಅಗತ್ಯ ಆರ್ಥಿಕ ನೆರವು ಲಭಿಸಲಿದೆ ಎಂದು ತಿಳಿಸಿದರು.

ಮಡಿಕೇರಿ ರೋಟರಿ ಅಧ್ಯಕ್ಷ ಓ.ಎಸ್. ಚಿಂಗಪ್ಪ ಪ್ರತಿಕ್ರಿಯಿಸಿ, ರೋಟರಿ ಮೂಲಕ ಸಂತ್ರಸ್ತರಿಗೆ ನೆರವಾಗುತ್ತಿರುವ ಅಟ್ಲಾಂಟ ವಾಸಿಗಳಿಗೆ ಸಂತ್ರಸ್ತರ ಪರವಾಗಿ ಕೃತಜ್ಞತೆ ಸಲ್ಲಿಸಿದರು.

ಮಡಿಕೇರಿ ರೋಟರಿ ಕಾರ್ಯದರ್ಶಿ ಮೃಣಾಲಿನಿ, ಮುಂದಿನ ಸಾಲಿನ ಅಧ್ಯಕ್ಷ ರತನ್ ತಮ್ಮಯ್ಯ, ಸೀತಾರಾಮ್ ಭಟ್, ಕಿರಣ್ ಭಟ್, ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕರಾದ ಕೆ.ಕೆ. ವಿಶ್ವನಾಥ್, ಅನಿಲ್ ಎಚ್.ಟಿ. ಸೇರಿದಂತೆ ರೋಟರಿ ಪದಾಧಿಕಾರಿಗಳು ಹಾಜರಿದ್ದರು.