ಗೋಣಿಕೊಪ್ಪ ವರದಿ, ಡಿ. 24: ವೈಜ್ಞಾನಿಕ ಸಮಗ್ರ ಕೃಷಿ ಪದ್ಧತಿ ಅನುಸರಿಸಿಕೊಂಡು ಲಾಭದತ್ತ ಹೆಜ್ಜೆ ಹಾಕುತ್ತಿರುವ ಪ್ರಗತಿಪರ ಕೃಷಿಕ, ಮಾಜಿ ಸೈನಿಕ ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರ ಕೃಷಿ ಪ್ರಯೋಗಗಳನ್ನು ಬೇರೆ ಕೃಷಿಕರು ಅಳವಡಿಸಿಕೊಳ್ಳಬೇಕಿದೆ ಎಂದು ಹಿರಿಯ ವಿಜ್ಞಾನಿಗಳು ಅಭಿಪ್ರಾಯಪಟ್ಟರು. ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರ ಕೃಷಿ ಕ್ಷೇತ್ರಕ್ಕೆ ಬೇಟಿ ನೀಡಿದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಎಂ. ಆರ್. ದಿನೇಶ್ ಹಾಗೂ ಕೃಷಿ ತಾಂತ್ರಿಕ ಅಳವಡಿಕೆ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಚಂದ್ರೇಗೌಡ ಕೃಷಿ ಚಟುವಟಿಕೆ ವೀಕ್ಷಿಸಿದರು. ಭತ್ತ ಕೃಷಿಯೊಂದಿಗೆ, ಕಾಫಿ, ಕಾಳುಮೆಣಸು, ಜೇನು, ತರಕಾರಿ, ಹಣ್ಣು, ಕೋಳಿ ಸಾಕಣೆ, ಮೀನು ಸಾಕಣೆ ಕೃಷಿಯಲ್ಲಿ ತೊಡಗಿಕೊಂಡು ಕೃಷಿಯಲ್ಲಿ ಲಾಭದತ್ತ ಸಾಗುತ್ತಿರುವದು ಹೆಮ್ಮೆಯ ವಿಚಾರ ಎಂದು ಅಭಿಪ್ರಾಯಪಟ್ಟರು. ಸಂಶೋಧನಾ ಸಂಸ್ಥೆಗಳು ಕೃಷಿ ಬೆಳೆವಣಿಗೆ ಹಾಗೂ ಲಾಭದತ್ತ ಕೃಷಿಯನ್ನು ಸಾಗಿಸಲು ಪಡುತ್ತಿರುವ ಸಂಶೋಧನೆಗಳನ್ನು ಕೃಷಿಕರು ಅಳವಡಿಸಿಕೊಂಡಲ್ಲಿ ಹೆಚ್ಚು ಲಾಭ ಪಡೆಯಲು ಸಾಧ್ಯವಿದೆ. ಕೊಡಗಿನ ಕೃಷಿಕರು ಇವರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದರು. ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಸಾಜುಜಾರ್ಜ್, ವಿಜ್ಞಾನಿಗಳಾದ ಡಾ. ಪ್ರಭಾಕರ್, ಡಾ. ವೀರೇಂದ್ರಕುಮಾರ್, ಡಾ. ದೇವಯ್ಯ ಪಾಲ್ಗೊಂಡಿದ್ದರು.