ಗೋಣಿಕೊಪ್ಪ ವರದಿ, ಡಿ. 23 : ಸರ್ಕಾರ ಮಾರುಕಟ್ಟೆ ವ್ಯವಸ್ಥೆಯಲ್ಲಿ ರೈತಪರವಾಗಿ ತೊಡಗಿಕೊಂಡಿಲ್ಲ ಎಂದು ಕೃಷಿಕ ಸಮಾಜ ಜಿಲ್ಲಾಧ್ಯಕ್ಷ ಚೋಟು ಕಾವೇರಪ್ಪ ಹೇಳಿದರು.

ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ರೈತ ದಿನಾಚರಣೆ ಅಂಗವಾಗಿ ವೀರಾಜಪೇಟೆ ತಾಲೂಕು ಕೃಷಿಕ ಸಮಾಜ, ತಾಲೂಕು ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ಬೆಳೆ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದ್ದರೂ, ಮಾರುಕಟ್ಟೆ ವ್ಯವಸ್ಥೆಯಲ್ಲಿ ಕೃಷಿಕನಿಗೆ ಬೆಂಬಲ ಸಿಗುತ್ತಿಲ್ಲ. ಇದರಿಂದಾಗಿ ವರ್ಷದಿಂದ ಬೆಳೆಗೆ ನ್ಯಾಯ ಸಮ್ಮತ ಬೆಲೆ ಸಿಗದೆ ಹೆಚ್ಚು ನಷ್ಟ ಉಂಟಾಗಲು ಕಾರಣವಾಗುತ್ತಿದೆ. ಮಾರುಕಟ್ಟೆ ಮೂಲಕ ಖರೀದಿಗೆ ಹೆಚ್ಚು ಒಲವು ತೋರಿಸಬೇಕಿದೆ ಎಂದರು.

ಭತ್ತ ಖರೀದಿ ಕೇಂದ್ರದಲ್ಲಿ ರೈತ ಹೆಸರು ನೋಂದಾಯಿಸಿಕೊಂಡು ನಂತರ ಮಾರಾಟ ಮಾಡಬೇಕಿದೆ. ಇದರಿಂದ ತುಂಬಾ ದೂರದವರೆಗೆ ನೋಂದಣಿಗೆ ತೆರಳಬೇಕಿದೆ. ಸಮಯ, ಹಣ ಎಲ್ಲಾವೂ ನಷ್ಟವಾಗುತ್ತಿದೆ. ಬೆಂಬಲ ಬೆಲೆಗೆ ಮಾರಾಟ ಮಾಡಿದರೂ ತಕ್ಷಣ ಹಣ ಪಡೆಯಲಾಗದೆ, ತೊಳಲಾಡುತ್ತಿದ್ದಾನೆ. ನಿಯಮ ಸಡಿಲಿಸಿ ನೇರವಾಗಿ ಮಾರಾಟ ಮಾಡುವ ಸಂದರ್ಭ ಹಣ ನೀಡುವಂತಾಗಬೇಕು. ಸಾಲಮನ್ನಾ ಕೂಡ ಗೊಂದಲಮಯವಾಗಿದ್ದು, ಕೃಷಿಕನಿಗೆ ಸರ್ಕಾರದಿಂದ ಪ್ರೋತ್ಸಾಹ ಸಿಗುತ್ತಿಲ್ಲ. ಪರಿಣಾಮ ಕೃಷಿಕನ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿದೆ. ಆತ್ಮಹತ್ಯೆ ಮಾಡಿಕೊಂಡವರಿಗೂ ಕೂಡ ಸೂಕ್ತ ಪರಿಹಾರ ತಕ್ಷಣ ದೊರೆಯುವಂತಾಗಬೇಕು ಎಂದರು.

ಕೆವಿಕೆ ಮುಖ್ಯಸ್ಥ ಡಾ. ಸಾಜುಜಾರ್ಜ್ ಮಾತನಾಡಿ, ದೇಶದಲ್ಲಿ ಆಹಾರ ಉತ್ಪಾದನೆ ಕೊರತೆಯಿಂದ ಹೆಚ್ಚು ಅನುಭವಿಸುತ್ತಿದ್ದ ತೊಂದರೆ ತಪ್ಪಿದೆ. ಕೃಷಿಕರಿಂದ ಹೆಚ್ಚು ಆಹಾರ ಉತ್ಪಾದನೆಯಾಗುತ್ತಿದೆ. ಹಣ್ಣು ಉತ್ಪಾದನೆಯಲ್ಲಿ ಭಾರತ ಮುಂದಿದೆ. ತರಕಾರಿ ಉತ್ಪಾದನೆಯಲ್ಲಿ 2 ನೇ ಸ್ಥಾನದಲ್ಲಿದೆ. ತಜ್ಞರು ತಾಂತ್ರಿಕವಾಗಿ ಮುಂದುವರಿದರೂ ಕೂಡ, ಕೃಷಿಕನ ಪಾತ್ರವೇ ಹೆಚ್ಚು. ಬೆಳೆ ಉತ್ಪಾದನೆಗೆ ಸದಾ ಸಿದ್ದರಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಪಂಡಿತ ಪ್ರಶಸ್ತಿ ವಿಜೇತ ನಲ್ಲೂರು ಗ್ರಾಮದ ಸೋಮೇಂಗಡ ಗಣೇಶ್ ತಿಮ್ಮಯ್ಯ, ಕೋತೂರು ಗ್ರಾಮದ ಕೃಷಿಕ ಮಹಿಳೆ ಎಂ. ಅಶ್ವಿನಿ ನಂದ ಹಾಗೂ ಪುತ್ತರಿ ಬೆಳೆಗಾರರ ಉತ್ಪಾದಕರ ಸಂಘದ ಅಧ್ಯಕ್ಷ ಮನೆಯಪಂಡ ಸೋಮಯ್ಯ ಅವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ತಾಲೂಕು ಕೃಷಿ ಅಧಿಕಾರಿ ರೀನಾ, ಕೃಷಿ ಸಮಾಜ ತಾಲೂಕು ಅಧ್ಯಕ್ಷ ರಘುನಾಣಯ್ಯ, ರೈತ ಸಂಘ ಪ್ರ. ಕಾರ್ಯದರ್ಶಿ ಸುಜಯ್ ಬೋಪಯ್ಯ, ಡಾ. ಪ್ರಭಾಕರ್, ಡಾ. ವೀರೇಂದ್ರಕುಮಾರ್ ಉಪಸ್ಥಿತರಿದ್ದರು. - ಸುದ್ದಿಪುತ್ರ