ಸೋಮವಾರಪೇಟೆ, ಡಿ. 22: (ಮಹಾಬಲೇಶ್ವರ ಭಟ್ ವೇದಿಕೆ-ನಾಪೋಕ್ಲು) ಶತಮಾನದ ಮಹಾಮಳೆ ಯಿಂದ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಕೊಡಗಿನ ಬಗ್ಗೆ ವ್ಯಕ್ತಿ ನಿಷ್ಠೆಯ ಬದಲಿಗೆ ವಸ್ತುನಿಷ್ಠ ಚರ್ಚೆಯಾಗಬೇಕು. ಕೊಡಗನ್ನು ವೈಜ್ಞಾನಿಕವಾಗಿ ಪರಿಶೀಲಿಸಬೇಕು. ಸರ್ಕಾರ ಕೊಡಗಿನವರಿಗೆ ಶೇ. 3ರಷ್ಟು ವಿಶೇಷ ಮೀಸಲಾತಿ ಕಲ್ಪಿಸಲು ಮುಂದಾಗ ಬೇಕು ಎಂದು 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಭಾರಧ್ವಾಜ್ ಕೆ. ಆನಂದತೀರ್ಥ ಹೇಳಿದರು. ತೋರಿಕೆಯ ಮುಖವಾಡ ಬದಿಗಿಟ್ಟು ವಾಸ್ತವವಾಗಿ ಚಿಂತಿಸ ಬೇಕಾದ ಅಗತ್ಯದ ಬಗ್ಗೆ ಒತ್ತಿ ಹೇಳಿದರು. ಕಾವೇರಿಯನ್ನು ಅಮ್ಮ ಎಂದು ಕರೆಯೋಣ;
(ಮೊದಲ ಪುಟದಿಂದ) ಆದರೆ ಆಕೆಯನ್ನು ಮುದ್ದಿನ ಮಗಳಂತೆ ಜೋಪಾನ ಮಾಡೋಣ. ಇದು ಇಂದಿನ ತುರ್ತು ಅಗತ್ಯ ಎಂದು ಕಾವೇರಿ ನದಿ ರಕ್ಷಣೆಯ ಬಗ್ಗೆ ಕಾಳಜಿ ತೋರಿದರು. 3 ರಾಜ್ಯಗಳಿಗೆ ಅನ್ನ ನೀರು ನೆರಳು ನೀಡುವ ಕೊಡಗಿಗೆ ಏನು ಸಿಕ್ಕಿದೆ ಎಂದು ಪ್ರಶ್ನಿಸಿದ ಅವರು, ಕನಿಷ್ಟ ಕರ್ನಾಟಕ ಸರ್ಕಾರ ಕೊಡಗು ಜಿಲ್ಲೆಗೆ ಶೇ. 3ರಷ್ಟು ವಿಶೇಷ ಮೀಸಲಾತಿ ನೀಡಬೇಕು. ಕೈಗಾರಿಕೆ, ವಾಣಿಜ್ಯ ಚಟುವಟಿಕೆಗಳಿಗೆ ಪ್ರಥಮ ಆದ್ಯತೆ ನೀಡಬೇಕು ಎಂದರು.
ರಾಜಧಾನಿ ಬೆಂಗಳೂರಿನಲ್ಲಿ ಕಾವೇರಿ ನೀರು ಅಧಿಕ ಬಳಕೆಯಾಗುತ್ತಿರುವದರಿಂದ ಅಲ್ಲಿನ ಆದಾಯದ ಶೇ. 10ರಷ್ಟನ್ನು ಕೊಡಗಿಗೆ ನೀಡಬೇಕು. ಸರ್ಕಾರದ ವಿವಿಧ ಯೋಜನೆಯಡಿ ಹೆಚ್ಚಿನ ಸಹಾಯಧನ ಒದಗಿಸಬೇಕು. ಕೃಷಿಕರ ಬದುಕು ದುಸ್ತರವಾಗಿದ್ದು, ಸರ್ಕಾರದಿಂದ ದೊರಕುವ ನೆರವು ಸಾಲುತ್ತಿಲ್ಲ. ಜಿಲ್ಲೆಯವರಿಗೆ ಅರಣ್ಯ ರಕ್ಷಣೆಯ ಪಾಠದ ಬದಲು, ಹೊರ ಜಿಲ್ಲೆಗಳಲ್ಲಿ ಗಿಡಮರಗಳನ್ನು ಬೆಳೆಸುವಂತಾಗಬೇಕು ಎಂದು ಸಲಹೆ ನೀಡಿದರು.
ಕೊಡಗಿನ ಜಲಮೂಲಗಳ ರಕ್ಷಣೆಯಾಗಬೇಕು. 40 ವರ್ಷ ಹಿಂದಿನ ಹಾಗೂ ಈಗಿನ ಕೊಡಗಿನ ಬಗ್ಗೆ ವೈಜ್ಞಾನಿಕ ಪರಿಶೀಲನೆಯಾಗಬೇಕು. ಕೆರೆಗಳ ಒತ್ತುವರಿ ತೆರವುಗೊಳ್ಳಬೇಕು. ಕಳೆದ 1924ರಲ್ಲಿಯೂ ಪ್ರಾಕೃತಿಕ ವಿಕೋಪ ಸಂಭವಿಸಿದ್ದು, ‘ಅಗ್ನಿಶಿಲೆ’ ಇರುವ ಪ್ರದೇಶಗಳಲ್ಲಿ ಮಾನವನ ಚಟುವಟಿಕೆಗಳಿಗೆ ನಿಯಂತ್ರಣ ಹೇರಬೇಕು ಎಂದು ಪ್ರತಿಪಾದಿಸಿದ ಅವರು, ಜಿಲ್ಲೆಯ ಪ್ರಕೃತಿ ರಕ್ಷಣೆಗೆ ಸಂಬಂಧಿಸಿದಂತೆ ನಡೆಯುವ ಚರ್ಚೆಗಳು ವೈಯಕ್ತಿಕ ಪ್ರತಿಷ್ಠೆಗೆ ಬಲಿಯಾಗಬಾರದು ಎಂದರು.
ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಕೃಷಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದರೊಂದಿಗೆ ಕೊಡವ, ಗೌಡ ಸಮುದಾಯದವರ ಮನೆ ಮಾತಿನಲ್ಲಿಯೂ ಸಾಹಿತ್ಯ ಕೃಷಿ ನಡೆದಿದೆ ಎಂದ ಭಾರಧ್ವಾಜ್, ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಕನ್ನಡ ಭದ್ರವಾಗಿದೆ. ಕನ್ನಡಿಗರು ತಮ್ಮ ಸಂಸ್ಕøತಿಯ ಬೇರುಗಳನ್ನು ಕಡಿದುಕೊಳ್ಳಬಾರದು ಎಂದರು.
ಎಲ್ಲರೂ ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದ ಶಾಲೆಗಳಿಗೆ ಸೇರಿಸಿ, ಕನ್ನಡ ಮಾಧ್ಯಮದ ಶಾಲೆಗಳನ್ನು ಮುಚ್ಚಬೇಡಿ ಎಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟಿಸುವದನ್ನು ಬಿಡಬೇಕು. ಒಂದೊಂದು ತರಗತಿಯಲ್ಲಿ 3-4 ಮಕ್ಕಳಿರುವ ಶಾಲೆಗಳನ್ನು ಮುಚ್ಚಬೇಕು. ಇಲ್ಲದಿದ್ದರೆ ಅಂತಹ ಮಕ್ಕಳು ಉದ್ದಾರವಾಗುವದಿಲ್ಲ ಎಂದು ನುಡಿದ ಸಮ್ಮೇಳನಾಧ್ಯಕ್ಷರು, ಗ್ರಾ.ಪಂ. ವ್ಯಾಪ್ತಿಗೊಂದು ಶಾಲೆ ತೆರೆದು ಉಳಿದೆಡೆಗಳಿಂದ ವಾಹನಗಳಲ್ಲಿ ಮಕ್ಕಳನ್ನು ಕರೆತರುವ ಪ್ರಯತ್ನವನ್ನು ಶಾಸಕರುಗಳು ನಡೆಸಲಿ ಎಂದು ಸಲಹೆ ನೀಡಿದರು.