ಸೋಮವಾರಪೇಟೆ, ಡಿ.22: (ಮಹಾಬಲೇಶ್ವರ ಭಟ್ ವೇದಿಕೆ-ನಾಪೋಕ್ಲು) ಕರ್ನಾಟಕದಲ್ಲಿ ಭಾಷಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗದಿರುವದು ದುರಂತ ಎಂದು ಕನ್ನಡಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅಭಿಪ್ರಾಯಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಾಪೋಕ್ಲು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಆವರಣದಲ್ಲಿ ನಿರ್ಮಿಸ ಲಾಗಿರುವ ಮಹಾಬಲೇಶ್ವರ ಭಟ್ ಪ್ರಧಾನ ವೇದಿಕೆಯಲ್ಲಿ ಆಯೋಜಿಸ ಲಾಗಿದ್ದ 13ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. 2015ರಲ್ಲಿ ಜಾರಿಗೆ ಬಂದ ಭಾಷಾ ಕಾಯ್ದೆ ತಮಿಳುನಾಡಿ ನಲ್ಲಿ ಪರಿಣಾಮ ಕಾರಿಯಾಗಿ ಜಾರಿಯಾಗಿದೆ. ಆದರೆ ಕರ್ನಾಟಕದಲ್ಲಿ ಅದು ಸಾಧ್ಯವಾಗಿಲ್ಲ. ಈ ಬಗ್ಗೆ 2017ರಲ್ಲಿ ಪ್ರಶ್ನಿಸಿದ್ದರೂ ಆಡಳಿತದಲ್ಲಿ ಅನುಷ್ಠಾನಗೊಂಡಿಲ್ಲ. ಇಲ್ಲಿನ ಕಾನ್ವೆಂಟ್‍ಗಳಲ್ಲಿ ಕನ್ನಡ ಮಾತಾಡಿದರೆ ದಂಡ ವಿಧಿಸುವ ಶಿಕ್ಷೆ ನೀಡಲಾ ಗುತ್ತಿದ್ದು, ಕನ್ನಡದ ಬಾಯಿಗೆ ಬೀಗ ಹಾಕಲಾಗುತ್ತಿದೆ. ಸರ್ಕಾರಗಳೂ ಸಹ ಕನ್ನಡ ಭಾಷೆಯ ಉಳಿವಿಗೆ ಗಂಭೀರ ಪ್ರಯತ್ನ ನಡೆಸಿಲ್ಲ ಎಂದು ದೂಷಿಸಿದರು.

ಕನ್ನಡ ಲಿಪಿಯನ್ನು ಬಳಸಿ ಕೊಳ್ಳುವ ಹಲವಷ್ಟು ಭಾಷೆಗಳು ನಮ್ಮಲ್ಲಿವೆ. ಭಾಷೆಯ ಉಚ್ಛಾರವನ್ನು ಹಿಡಿದಿಡುವ ಲಿಪಿ ಇರುವದು ಕನ್ನಡಕ್ಕೆ ಮಾತ್ರ. ಕನ್ನಡ ಉಚ್ಛಾರ ಮತ್ತು ಬರವಣಿಗೆಗೆ ಅಂತರ್ಗತ ಸಂಬಂಧವಿದೆ. ಈ ಮಧ್ಯೆ ಕನ್ನಡ ವರ್ಣಮಾಲೆಗೆ ಕತ್ತರಿ ಹಾಕುವ ಪ್ರಯತ್ನ ನಡೆಯುತ್ತಿರುವದು ಸರಿಯಲ್ಲ ಎಂದರು.

ಇತ್ತೀಚೆಗೆ ಕನ್ನಡದ ಬಗ್ಗೆ ಕೀಳರಿಮೆ ಹೆಚ್ಚುತ್ತಿದೆ. ಅನ್ನದ ಭಾಷೆ ಅಲ್ಲ ಎನ್ನುವ ಭ್ರಮೆ ನಿರ್ಮಾಣ ವಾಗಿದೆ. (ಮೊದಲ ಪುಟದಿಂದ) ಜನರ ಸ್ವಾಭಿಮಾನದಿಂದ ದೂರ ಉಳಿಯುವ ಭಾಷೆ ಸಾಯುತ್ತದೆ. ಕನ್ನಡಕ್ಕೆ ಅನ್ಯ ಭಾಷಿಗರಿಂದ ಯಾವದೇ ತೊಂದರೆಯಿಲ್ಲ. ಕನ್ನಡಕ್ಕೆ ಕನ್ನಡಿಗರೇ ಶತ್ರುಗಳಾಗಿದ್ದಾರೆ. ತುಳು ಭಾಷಿಕರು ಹೊರದೇಶದಲ್ಲೂ ಕನ್ನಡ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ. ಭಾಷೆಗಳ ನಡುವೆ ಸ್ಪರ್ಧೆಗಳಿಗಿಂತ ಸಹಕಾರವಿರಬೇಕು ಎಂದು ಸಿದ್ಧರಾಮಯ್ಯ ಅವರು ವಿಶ್ಲೇಷಿಸಿದರು.

ಜಾತಿ ಕಾರಣದಿಂದ ಅಮೇರಿಕಾದ ಅಕ್ಕ ಸಂಸ್ಥೆಯೇ ಇಬ್ಭಾಗವಾಗಿದೆ. ಅನಾಸಕ್ತಿಯಿಂದ ಭಾಷೆ ಸಾಯುತ್ತದೆ. ಶಿಕ್ಷಣದಲ್ಲಿ ಭಾಷೆ ಬಳಕೆಯಾಗದಿದ್ದರೆ ಬೆಳವಣಿಗೆ ಅಸಾಧ್ಯ. ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆ ಇರಲೇಬೇಕು; ಅಂಗ್ಲ ಭಾಷೆ ಕಲಿಕೆಯಲ್ಲಿರಲಿ. ಬೌದ್ಧಿಕ ದಾಸ್ಯ ಭಾಷೆಯ ಅವನತಿಗೆ ಕಾರಣ. ಪ್ರಾಥಮಿಕ ಹಂತದಲ್ಲಿ ಪರಿಸರದ ಭಾಷೆಯಲ್ಲಿ ಸದೃಢ ಶಿಕ್ಷಣ ನೀಡದೇ ಹೋದರೆ ಕೆಲವೇ ಸಮಯದಲ್ಲಿ ಕನ್ನಡಿಗ ಕರ್ನಾಟಕದಲ್ಲಿ 2ನೇ ದರ್ಜೆಯ ಕಾರ್ಮಿಕನಾಗುತ್ತಾನೆ ಎಂದು ಎಚ್ಚರಿಸಿದರು.

ಕರ್ನಾಟಕದ ಸಾಕ್ಷಿ ಪ್ರಜ್ಞೆಯಾಗಿರುವ ಕಸಾಪ ಸಮ್ಮೇಳನದಲ್ಲಿ ಕೊಡಗಿನ ಪ್ರಾಕೃತಿಕ ವಿಕೋಪಕ್ಕೆ ಕಾರಣವಾದ ಅಂಶಗಳ ಬಗ್ಗೆಯೂ ಚರ್ಚೆಯಾಗಬೇಕು. ಮುಂದಿನ ದಿನಗಳಲ್ಲಿ ದುರ್ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕಾದ ಕ್ರಮಗಳ ಬಗ್ಗೆ ವಿಚಾರ ವಿನಿಮಯವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಬೆಂಗಳೂರಿನ ಸಾಹಿತಿ ಬೈರಮಂಗಲ ರಾಮೇಗೌಡ ಮಾತನಾಡಿ, ಇತರ ಭಾಷೆಗಳ ನಡುವೆ ಕೊಡಗಿನಲ್ಲಿ ಕನ್ನಡದ ಬೆಳವಣಿಗೆಗೆ ತೊಡಕಿಲ್ಲ. ಇದೀಗ ಸರ್ಕಾರ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ವಿದ್ಯಾಭ್ಯಾಸ ಅಳವಡಿಸಲು ಮುಂದಾಗಿದ್ದು, ಇದರ ಸಾಧಕ ಬಾಧಕಗಳ ಬಗ್ಗೆ ವಿಸ್ತøತ ಚರ್ಚೆಯಾಗಬೇಕು ಎಂದು ಅಭಿಪ್ರಾಯಿಸಿದರು.

ಸಮ್ಮೇಳನದ ದಿವ್ಯ ಸಾನ್ನಿಧ್ಯ ವಹಿಸಿದ್ದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕನ್ನಡತನ ಉಳಿದುಕೊಂಡಿದ್ದು, ಅದನ್ನು ಉಳಿಸಿ ಬೆಳೆಸುವ ಕಾರ್ಯ ಇನ್ನಷ್ಟು ಆಗಬೇಕಿದೆ ಎಂದರು.

ಕಾರ್ಯಕ್ರಮದ ಪ್ರಧಾನ ವೇದಿಕೆ ಉದ್ಘಾಟಿಸಿದ ಜಿ.ಪಂ. ಅಧ್ಯಕ್ಷ ಹರೀಶ್ ಮಾತನಾಡಿ, ಆಂಗ್ಲ ಭಾಷೆಯ ಅವಶ್ಯಕತೆ ನಡುವೆ ಕನ್ನಡ ಮಾಧ್ಯಮಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕನ್ನಡ ಭಾಷೆಯನ್ನು ಪ್ರೀತಿಸಿ ಗೌರವಿಸಬೇಕು ಎಂದು ಅಭಿಪ್ರಾಯಿಸಿದರು.

ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಕಸಾಪ ವತಿಯಿಂದ ಕೊಡಗಿನಲ್ಲಿ ಕನ್ನಡ ಸಾಹಿತ್ಯವನ್ನು ಗಟ್ಟಿಗೊಳಿಸುವ ಪ್ರಯತ್ನ ನಡೆಸಿಕೊಂಡು ಬರಲಾಗುತ್ತಿದ್ದು, ರಾಜ್ಯಕ್ಕೆ ಮಾದರಿಯಾಗಿ ಮಕ್ಕಳ ಸಾಹಿತ್ಯ ಸಮ್ಮೇಳನ, ಕೃಷಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸಲಾಗಿದೆ. ಮುಂದಿನ 3 ತಿಂಗಳ ಅವಧಿಯಲ್ಲಿ ಮಹಿಳಾ ಸಮ್ಮೇಳನ ಸೇರಿದಂತೆ ಮೂರು ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ಭಾರಧ್ವಾಜ್ ಕೆ. ಆನಂದತೀರ್ಥ, ಕಸಾಪ ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಸೋಮವಾರಪೇಟೆ ಅಧ್ಯಕ್ಷ ಎಸ್.ಡಿ. ವಿಜೇತ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಮಧೋಶ್ ಪೂವಯ್ಯ, ನಿವೃತ್ತ ನ್ಯಾಯಾಧೀಶ ವಾಂಜಂಡ ಬೋಪಯ್ಯ, ಹಿರಿಯ ಸಾಹಿತಿ ಬೈತಡ್ಕ ಜಾನಕಿ, ಜಿ.ಪಂ. ಸದಸ್ಯ ಪಾಡಿಯಮ್ಮಂಡ ಮುರುಳಿ ಕರುಂಬಯ್ಯ, ತಾ.ಪಂ. ಸದಸ್ಯರಾದ ಇಂದಿರಾ, ಉಮಾಪ್ರಭು, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್, ಕೋಶಾಧ್ಯಕ್ಷ ಎಸ್.ಎ. ಮುರಳೀಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಉಷಾರಾಣಿ ಮತ್ತು ಬಾಳೆಯಡ ದಿವ್ಯ ಕಾರ್ಯಕ್ರಮ ನಿರ್ವಹಿಸಿದರು.