ಗೋಣಿಕೊಪ್ಪ ವರದಿ, ಡಿ. 21 : ಕೊಡಗು ಜಿಲ್ಲೆಯಲ್ಲಿ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿಗಳಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಿರುವ ಸಾಧನೆಯನ್ನು ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಮಾಡಿದೆ ಎಂದು ಗೋಣಿಕೊಪ್ಪ ಟ್ರೇಡರ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕಡೇಮಾಡ ಸುನಿಲ್ ಮಾದಪ್ಪ ತಿಳಿಸಿದ್ದಾರೆ.

ಸ್ಥಾನೀಯ ಸಮಿತಿ ಸದಸ್ಯರ ಹಣ ಹೊಂದಿಸಿ ರೂ. 30 ಲಕ್ಷ ಹಣದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಸ್ಚಂತ ಕಟ್ಟಡ ಹೊಂದಿರುವ ಏಕೈಕ ಸ್ಥಾನೀಯ ಸಮಿತಿ ಎಂಬ ಹೆಗ್ಗಳಿಕೆಗೆ ಗೋಣಿಕೊಪ್ಪ ಸ್ಥಾನೀಯ ಸಮಿತಿ ಪಾತ್ರವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ಥಳೀಯ ಗ್ರಾಮ ಪಂಚಾಯ್ತಿ ನೀಡಿದ ಜಾಗದಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಮಲ್ಲಂಡ ನಂಜಪ್ಪ ಅವರ ಮುಂದಾಳತ್ವದಲ್ಲಿ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ನಂತರ 2015 ರಲ್ಲಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಇದರಂತೆ 2 ಅಂತಸ್ತಿನ ಕಟ್ಟಡ ನಿರ್ಮಾಣವಾಗಿದ್ದು, 6 ಅಂಗಡಿ ಮಳಿಗೆ, ಸಭಾಂಗಣ ಹಾಗೂ ಕಚೇರಿ ಹೊಂದಿದೆ. ತಾ. 24 ರಂದು ಕಟ್ಟಡ ಉದ್ಘಾಟನೆ ನಡೆಯಲಿದೆ ಎಂದರು.

ಕಟ್ಟಡ ನಿರ್ಮಾಣಕ್ಕೆ ಅನುಕೂಲವಾಗಲಿ ಎಂದು ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಅಧೀನದಲ್ಲಿ ಗೋಣಿಕೊಪ್ಪ ಟ್ರೇಡರ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸ್ಥಾಪಿಸಿ ಕಟ್ಟಡ ನಿರ್ಮಿಸಲಾಗಿದೆ. 11 ಟ್ರಸ್ಟಿಗಳ ಮುಂದಾಳತ್ವದಲ್ಲಿ ನಿರ್ಮಿಸಲಾಗಿದ್ದು, ಸದಸ್ಯರ ಹಣವನ್ನು ಬಳಸಿಕೊಂಡು, ಬ್ಯಾಂಕ್ ಸಾಲ ಪಡೆದು ಕಟ್ಟಡ ಪೂರ್ಣಗೊಂಡಿದೆ ಎಂದರು.

ಅಂದು ನಡೆಯುವ ಕಟ್ಟಡ ಉದ್ಘಾಟನೆಯನ್ನು ಉಸ್ತುವಾರಿ ಸಚಿವ ಸಾ.ರ. ಮಹೇಶ್ ನೆರವೇರಿಸಲಿದ್ದಾರೆ. ಸಭಾಂಗಣವನ್ನು ಶಾಸಕ ಕೆ.ಜಿ. ಬೋಪಯ್ಯ, ಉದ್ಘಾಟಿಸಲಿದ್ದಾರೆ. ಈ ಸಂದÀರ್ಭ ಎಫ್‍ಕೆಸಿಸಿ ರಾಜ್ಯ ಅಧ್ಯಕ್ಷ ಸುಧಾಕರ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುತ್ತಿದೆ.

ಅತಿಥಿಗಳಾಗಿ ಶಾಸಕರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ಚೇಂಬರ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷ ಬಿ.ಎನ್. ಪ್ರಕಾಶ್, ಜಿಲ್ಲಾ ಚೇಂಬರ್ ಕಟ್ಟಡ ಟ್ರಸ್ಟ್ ಅಧ್ಯಕ್ಷ ಗಿರೀಶ್ ಗಣಪತಿ, ಮರ್ಚೆಂಟ್ ಬ್ಯಾಂಕ್ ತಾಲೂಕು ಅಧ್ಯಕ್ಷ ಅರುಣ್ ಪೂಣಚ್ಚ, ಸ್ವಾತಂತ್ರ್ಯ ಹೋರಾಟಗಾರರ ಭವನ ಸಂಚಾಲಕ ಅಜಿತ್ ಅಯ್ಯಪ್ಪ ಪಾಲ್ಗೊಳ್ಳಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಪೊನ್ನಿಮಾಡ ಸುರೇಶ್, ಖಜಾಂಜಿ ಬಿ. ಎನ್. ಪ್ರಕಾಶ್, ಟ್ರಸ್ಟಿಗಳಾದ ಅಜಿತ್ ಅಯ್ಯಪ್ಪ, ಕೇಶವ ಕಾಮತ್, ವಿಜಯನ್, ತೆಕ್ಕಡ ಕಾಶಿ ಉಪಸ್ಥಿತರಿದ್ದರು.